ವಿಶ್ವಕರ್ಮರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಲಿ: ಕೆ.ಪಿ. ನಂಜುಂಡಿ

KannadaprabhaNewsNetwork |  
Published : Jul 28, 2025, 12:31 AM IST
27ಎಚ್‌ಯುಬಿ26ಅಖಿಲ ಕರ್ನಾಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು. | Kannada Prabha

ಸಾರಾಂಶ

ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ನಮ್ಮ ಆಚಾರ- ವಿಚಾರ, ಸಂಸ್ಕೃತಿ ಬದಲಾಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಕಿವಿಗೊಡಬಾರದು.

ಹುಬ್ಬಳ್ಳಿ: 2ಎ ಮೀಸಲಾತಿಯಲ್ಲಿ 102 ಜಾತಿಗಳಿವೆ. ಈ ಜಾತಿಗಳಿಗೆ ಶೇ. 15ರಷ್ಟು ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಪ್ರಬಲ ಜಾತಿಗಳನ್ನು ಎದುರಿಸಿ ವಿಶ್ವಕರ್ಮರಿಗೆ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.

ಅಖಿಲ ಕರ್ನಾಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಗೋಕುಲ ರಸ್ತೆಯ ವಿಮಾನ ನಿಲ್ದಾಣದ ಎದುರಿನ ಶಾಂಭವಿ ಹಾಲ್‌ನಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದರಿಂದ ನಮ್ಮ ಆಚಾರ- ವಿಚಾರ, ಸಂಸ್ಕೃತಿ ಬದಲಾಗುವುದಿಲ್ಲ. ಈ ವಿಷಯದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ಕಿವಿಗೊಡಬಾರದು. ಸಮಾಜವನ್ನು ಕೆಲವರು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಂಘಟನೆ ಛಿದ್ರವಾಗಿದೆ. ಸಮಾಜದವರು ಜಾಗೃತರಾಗಿ ಮೂಢನಂಬಿಕೆಯಿಂದ ಹೊರಬರದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಸಮಾಜ ಸಂಘಟಿತವಾಗದ ಹೊರತು ಸಂವಿಧಾನ ನೀಡಿರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಕೆಲವರು ಪ್ರತಿಭಾ ಪುರಸ್ಕಾರದ ಹೆಸರಿನಲ್ಲಿ ವಸೂಲಿ ಮಾಡುತ್ತಿರುವುದರಿಂದ ಸಮಾಜದ ಹೆಸರು ಹಾಳಾಗುತ್ತಿದೆ ಎಂದರು.

ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅರ್ಹತೆ ಇದ್ದವರನ್ನು ಅಧ್ಯಕ್ಷರನ್ನಾಗಿ ಮಾಡಬೇಕು. ಅವಿವೇಕಿಗಳನ್ನು ನೇಮಿಸಿದರೆ ಅದು ಸಮಾಜಕ್ಕೆ ಮಾಡುವ ಅವಮಾನ ಎಂದರು.

ಮಹಾನಗರ ಪಾಲಿಕೆ ಮಾಜಿ ಮೇಯರ್‌ ರಾಮಪ್ಪ ಬಡಿಗೇರ ಮಾತನಾಡಿ, ಪ್ರತಿಭಾ ಪುರಸ್ಕಾರಕ್ಕೆ ಯಾವುದೇ ಮಾನದಂಡ ಇಟ್ಟುಕೊಳ್ಳದೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಉತ್ತೀರ್ಣರಾದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಗಿದೆ ಎಂದರು.

ಗದಗ ಜಿಲ್ಲಾ ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ಆರ್‌.ಡಿ. ಕಡ್ಲಿಕೊಪ್ಪ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಕಾಳಪ್ಪ ಬಡಿಗೇರ, ಸಿಪಿಐ ರಾಜಕುಮಾರ ಪತ್ತಾರ, ಮನೋಹರ ಲಕ್ಕುಂಡಿ ಮಾತನಾಡಿದರು.ಜಾತಿ ಕಾಲಂನಲ್ಲಿ ವಿಶ್ವಕರ್ಮ ನಮೂದಿಸಿ

ಹುಬ್ಬಳ್ಳಿ: ಜಾತಿ ಜನಗಣತಿ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಜಾತಿ ಕಾಲಂನಲ್ಲಿ ಯಾವುದೇ ಉಪಜಾತಿಯನ್ನು ನಮೂದಿಸದೇ ಕೇವಲ ವಿಶ್ವಕರ್ಮ ಎಂದು ಮಾತ್ರ ಬರೆಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಸಮಾಜದ ಅಡಿಯಲ್ಲಿ 39 ಉಪಜಾತಿಗಳಿದ್ದು, ಜಾತಿಯ ಕಾಲಂನಲ್ಲಿ ವಿಶ್ವಕರ್ಮ ಮತ್ತು ಉಪಜಾತಿ ಕಾಲಂನಲ್ಲಿ ಮಾತ್ರ ನಮೂದಿಸುವಂತೆ ಸೂಚಿಸಲಾಗಿದೆ ಎಂದರು.

ವಿಶ್ವ ಬ್ರಾಹ್ಮಣ ಎಂಬುದು ವಿಶ್ವಕರ್ಮ ಜಾತಿಯ ಉಪಜಾತಿಯಾಗಿದೆ. ಇದಕ್ಕೂ ಬ್ರಾಹ್ಮಣ ಜಾತಿಗೂ ಸಂಬಂಧವಿಲ್ಲ. ವಿಶ್ವಕರ್ಮದ ಅಡಿಯಲ್ಲಿ ವಿಶ್ವ ಬ್ರಾಹ್ಮಣ, ಕಮ್ಮಾರ, ಬಡಿಗೇರ, ಹಿಂದೂ ವಿಶ್ವಕರ್ಮ ಎಂಬ ಹಲವಾರು ಉಪಜಾತಿಗಳಿವೆ. ರಾಜ್ಯದಲ್ಲಿ ಪ್ರಮುಖ ಐದು ಕಸುಬುಗಳನ್ನು ಮಾಡುವವರು ವಿಶ್ವಕರ್ಮ ಸಮಾಜದವರೇ ಆಗಿದ್ದಾರೆ. ಆದರೆ, ಜಾತಿಗಣತಿ ಕಾಲಂನಲ್ಲಿ ಉಪಜಾತಿ ಬದಲು, ವಿಶ್ವಕರ್ಮ ಸಮಾಜ ಎಂದೇ ನಮೂದಿಸುವಂತೆ ಕರೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ಮರು ಜಾತಿ ಸಮೀಕ್ಷೆ ನಡೆಸಲು ಮುಂದಾಗಿದೆ. ಹೀಗಾಗಿ, ಎಲ್ಲ ಸಮಾಜಗಳು ಜಾಗೃತರಾಗಬೇಕು. ಇಲ್ಲದಿದ್ದರೆ, ಧ್ವನಿ ಇಲ್ಲದ ಸಮಾಜಗಳಿಗೆ ಅನ್ಯಾಯವಾಗುತ್ತದೆ. ರಾಜಕೀಯ ಜ್ಞಾನ ಇರುವ ಸಮಾಜಗಳು ಮಾತ್ರ ಪ್ರಬಲವಾಗುತ್ತವೆ ಎಂದು ಎಚ್ಚರಿಸಿದ ಅವರು, ವಿಶ್ವಕರ್ಮ ಸಮಾಜಕ್ಕೆ ಸದ್ಯ 2ಎ ಮೀಸಲಾತಿ ಕಲ್ಪಿಸಲಾಗಿದೆ. ಪ್ರಬಲ ಜಾತಿಗಳ ನಡುವೆ ನಮ್ಮ ಸಮಾಜಕ್ಕೆ ಮೀಸಲಾತಿಯ ಲಾಭ ಸಿಗುತ್ತಿಲ್ಲ. ಹೀಗಾಗಿ, ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದು ಸಮಾಜದ ಒತ್ತಾಸೆಯಾಗಿದೆ ಎಂದರು.

ರಾಜ್ಯದಲ್ಲಿ ಮುಂದಿನ ವರ್ಷದಿಂದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದಿಂದ ಐದು ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ. ನಾನು ವಿಧಾನ ಪರಿಷತ್ ಸ್ಥಾನದ ಆಕಾಂಕ್ಷಿಯಲ್ಲ. ಯಾವುದೇ ಸ್ಥಾನಮಾನಕ್ಕಿಂತ ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಎಂಬುದು ನನ್ನ ಉದ್ದೇಶ. ಕಾಂಗ್ರೆಸ್ ಸೇರುವ ಸಂದರ್ಭದಲ್ಲಿ ಯಾವುದೇ ಸ್ಥಾನಮಾನಕ್ಕಾಗಿ ಷರತ್ತು ಹಾಕಿಲ್ಲ. ಬಿಜೆಪಿಯಲ್ಲಿ ಇದ್ದಾಗ ನನ್ನನ್ನು ಮೂಲೆಗುಂಪು ಮಾಡುತ್ತಾರೆ ಎಂಬ ಕಾರಣಕ್ಕೆ ಡಿ.ಕೆ. ಶಿವಕುಮಾರ ಅವರ ಮಾತಿಗೆ ಒಪ್ಪಿ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''