ಒಳಮೀಸಲಾತಿ ವರದಿ ಪರಿಷ್ಕರಣೆಗೆ ಆಗ್ರಹಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಪ್ರತಿಭಟನೆ

KannadaprabhaNewsNetwork |  
Published : Aug 13, 2025, 12:30 AM IST
12ಕೆಎಂಎನ್‌ಡಿ11 | Kannada Prabha

ಸಾರಾಂಶ

ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೆ ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಅಧ್ಯಕ್ಷತೆಯ ಒಳ ಮೀಸಲಾತಿ ಏಕಸದಸ್ಯ ವಿಚಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೊಲಯ ಸಮುದಾಯದವರಿಗೆ ಅನ್ಯಾಯವಾಗಿರುವುದನ್ನು ಪರಿಶೀಲಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ, ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಒಳ ಮೀಸಲಾತಿ ರಕ್ಷಣಾ ಸಮಿತಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದ ಸಮಿತಿಯ ಕಾರ್ಯಕರ್ತರು, ಏಕಪಕ್ಷೀಯ ಮತ್ತು ಪಕ್ಷಪಾತದಿಂದ ಕೂಡಿರುವ ವರದಿಯನ್ನು ಒಪ್ಪಿಕೊಳ್ಳದಂತೆ ಸರ್ಕಾರವನ್ನು ಆಗ್ರಹಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿದ ಪರೈಯ್ಯ, ಪರವನ್ ಜಾತಿಯನ್ನು ಎಡಗೈ ಪಂಗಡಕ್ಕೆ ಸೇರಿಸಿರುವುದಲ್ಲದೆ ಬಲಗೈ ಸಮುದಾಯಕ್ಕೆ ಸೇರಿದ ಇನ್ನೂ ಹಲವು ಜಾತಿಗಳನ್ನು ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಕ್ಕೆ ಶೇ.1ರಷ್ಟು ಮೀಸಲಾತಿ ನಿಗದಿಪಡಿಸಿರುವುದು ಅವೈಜ್ಞಾನಿಕವಾಗಿದೆ ಎಂದು ದೂರಿದರು.

ಮೀಸಲಾತಿಗೆ ಸಂಬಂಧಿಸಿದ ವರದಿ ಸಿದ್ದಪಡಿಸಲು ಮೇ 5 ರಿಂದ ಜು.6ರವರೆಗೆ ನಡೆದ ಸಮೀಕ್ಷೆಯಲ್ಲಿ 27.24 ಲಕ್ಷ ಕುಟುಂಬಗಳ ಕೋಟಿ ಜನರನ್ನು ಸಮೀಕ್ಷೆ ಮಾಡಿದ್ದು, ಪ್ರಸ್ತುತ 5 ಗುಂಪುಗಳಾಗಿ ವಿಂಗಡಿಸಿ ಅತಿ ಹಿಂದುಳಿದ ಗುಂಪಿಗೆ ಶೇ.1, ಎಡಗೈ ಗುಂಪಿಗೆ ಶೇ.6, ಬಲಗೈ ಗುಂಪಿಗೆ ಶೇ.5, ಬಂಜಾರ, ಭೋವಿ, ಕೊರಮ, ಕೊರಚ, ಅಸ್ಪೃಶ್ಯರಲ್ಲದ ಜಾತಿಗಳಿಗೆ ಶೇ.4ರಷ್ಟು ಜಾತಿಯೇ ಅಲ್ಲದ ಗುಂಪುಗಳಿಗೆ ಶೇ.1ರಷ್ಟು ಮೀಸಲು ನಿಗದಿಪಡಿಸಿರುವುದು ಸರಿಯಷ್ಟೇ. ಏಕಪಕ್ಷೀಯವಾಗಿ ಒಂದು ಸಮುದಾಯವನ್ನು ಓಲೈಸಲು ಮತ್ತೊಂದು ಸಮುದಾಯಕ್ಕೆ ಅನ್ಯಾಯ ಮಾಡಿರುವ ನಾಗಮೋಹನ್‌ದಾಸ್ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಆರೋಪಿಸಿದರು.

ವರದಿಯ ಪ್ರಕಾರ ಮಾದಿಗರು 27,73,780, ಹೊಲಯ 24,72,103, ಛಲವಾದಿ 3,76,448, ಆದಿ ಕರ್ನಾಟಕ 1,47,199, ಪರೈಯನ್ ಹಾಗೂ ಪರಯ 1,61,164, ಆದಿ ದ್ರಾವಿಡ 3,20,641 ಆಗಿದ್ದು, ಆದರೆ ಹೊಲಯ ಸಮುದಾಯಕ್ಕೆ ಛಲವಾದಿ, ಆದಿ ಕರ್ನಾಟಕ, ಪರೈಯನ್ ಹಾಗೂ ಪರಯ, ಆದಿ ದ್ರಾವಿಡರು ಇವರೆಲ್ಲರೂ ಸೇರಿದವರಾಗಿರುತ್ತಾರೆ. ಇನ್ನೂ 9 ಲಕ್ಷ ಜನರನ್ನು ಜಾತಿ ಗಣತಿ ಸಮಯದಲ್ಲಿ ನಮೂದಿಸದೆ ಹೊಲಯ ಜಾತಿಗೆ ಸೇರಿದವರನ್ನು ವಿಂಗಡಿಸಿ ಮಾದಿಗರಿಗೆ ಬೇಕಾದ ಸಮುದಾಯವನ್ನು ಸೇರ್ಪಡೆ ಮಾಡಿಕೊಂಡು ಸಂಖ್ಯೆಯ ಬಲವನ್ನು ಹೆಚ್ಚಿಗೆ ತೋರಿಸುತ್ತಿರುವುದನ್ನು ನೋಡಿದರೆ ಮಲತಾಯಿ ಧೋರಣೆ ಇದ್ದಂತಿದೆ ಎಂದು ದೂರಿದರು.

ಆದಕಾರಣ ನಾಗಮೋಹನ್‌ದಾಸ್‌ರವರು ಸಲ್ಲಿಸಿರುವ ಏಕಪಕ್ಷೀಯ, ಪಕ್ಷಪಾತದಿಂದ ಕೂಡಿರುವ ವರದಿಯನ್ನು ಯಥಾವತ್ತಾಗಿ ಒಪ್ಪಿಕೊಳ್ಳದೆ ಸಚಿವ ಸಂಪುಟದ ಉಪಸಮಿತಿ ರಚಿಸಿ ಮಾನವಶಾಸ್ತ್ರಜ್ಞರನ್ನು ನೇಮಿಸಿ ಕೂಲಂಕುಷವಾಗಿ ಪರಿಶೀಲಿಸಿ ನಂತರ ಮೀಸಲಾತಿ ವರ್ಗೀಕರಣ ಮಾಡುವಂತೆ ಆಗ್ರಹಪಡಿಸಿದರು.

ಮುಖಂಡರಾದ ವಿಜಯ್‌ಕುಮಾರ್ ಚಂದಗಾಲು, ನಗರಸಭಾ ಸದಸ್ಯ ಶ್ರೀಧರ್, ಸುಂಡಹಳ್ಳಿ ಮಂಜುನಾಥ್, ವಿಜಯಲಕ್ಷ್ಮೀ, ಆನಂದ್‌ಕುಮಾರ್, ಸುರೇಶ್ ಕಂಠಿ, ಎಂ.ಎಲ್.ತುಳಸೀಧರ್, ದಸಂಸ ಮುಖಂಡ ಕೃಷ್ಣ, ನರಸಿಂಹಮೂರ್ತಿ, ಸಾತನೂರು ಜಯರಾಂ, ಕೆ.ಎನ್.ದೀಪಕ್, ಎಚ್.ಕೆ.ಲವ, ಜೆ.ಪ್ರಸನ್ನ, ಸಿ.ವೈ.ನಿತ್ಯಾನಂದ ಮತ್ತಿತರರು ಪ್ರತಿಭಟನೆಯಲ್ಲಿ ಹಾಜರಿದ್ದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ