ಸಂಡೂರು: ಪರಿಶಿಷ್ಟ ಜಾತಿಯವರು ಕಾಂಗ್ರೆಸ್ ಬೆನ್ನೆಲುಬಾಗಿದ್ದಾರೆ. ಪಕ್ಷ ದಲಿತರ ಏಳ್ಗೆಗಾಗಿ ಮಹತ್ವದ ಕೊಡುಗೆ ನೀಡಿದೆ. ದಲಿತರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಕೆಪಿಸಿಸಿ ಎಸ್ಸಿ ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನ ಹೇಳಿದರು.
ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟರು. ಇದು ಪರಿಶಿಷ್ಟ ಜಾತಿಯವರ ಹೆಗ್ಗಳಿಕೆಯಾಗಿದೆ. ರಾಜ್ಯ ಸರ್ಕಾರದಲ್ಲಿ ಪ್ರಮುಖ ೬ ಖಾತೆಗಳನ್ನು ಪರಿಶಿಷ್ಟ ಜಾತಿಯವರಿಗೆ ನೀಡಲಾಗಿದೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ೪೧,೮೮೭ ಮತಗಳಿವೆ. ಇವುಗಳಲ್ಲಿ ಮಾದಿಗ ಸಮಾಜದ ೩೦ ಸಾವಿರ ಮತಗಳಿವೆ. ದಲಿತರು ಯಾರನ್ನು ಬೆಂಬಲಿಸುವರೋ, ಅವರೇ ಗೆಲ್ಲುತ್ತಾರೆ ಎಂದರು.
ಒಳ ಮೀಸಲಾತಿ ಹಸಿದವರ ಕೂಗು:ಒಳ ಮೀಸಲಾತಿ ಹಸಿದವರ ಕೂಗಾಗಿದೆ. ಇದರಿಂದ ಪರಿಶಿಷ್ಟ ಜಾತಿ ಗುಂಪಿನಲ್ಲಿರುವ ಎಲ್ಲರಿಗೂ ಅನುಕೂಲವಾಗಲಿದೆ. ಕಾಂಗ್ರೆಸ್ ೨೦೨೩ರ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಭರವಸೆ ನೀಡಿತ್ತು. ಇದೀಗ ದತ್ತಾಂಶ ಸಂಗ್ರಹಕ್ಕೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲು ಸಂಪುಟ ಸಮಿತಿ ತೀರ್ಮಾನ ತೆಗೆದುಕೊಂಡಿದೆ. ಪಕ್ಷ ಪರಿಶಿಷ್ಟ ಜಾತಿ ಗುಂಪಿನ ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುತ್ತಿದೆ. ಪರಿಶಿಷ್ಟ ಜಾತಿಯವರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗಿಫ್ಟ್ ನೀಡಬೇಕು ಎಂದರು.
ಟಿ. ಲೋಕೇಶ್ ನಾಯ್ಕ್, ಕೆಪಿಸಿಸಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಎರಕಲು ಸ್ವಾಮಿ, ಗ್ರಾಮೀಣ ಜಿಲ್ಲಾಧ್ಯಕ್ಷ ವೀರಾಂಜನೇಯಲು, ಮಾಧ್ಯಮ ವಕ್ತಾರ ಎಸ್. ಮಲಿಯಪ್ಪ, ಕೆಪಿಸಿಸಿ ಮಾಜಿ ಸದಸ್ಯ ಎಲ್. ಮಾರೆಣ್ಣ, ಮುಖಂಡರಾದ ಸೋಮಶೇಖರ್, ಸಿ. ಬಸವರಾಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಏಕಾಂಬ್ರಪ್ಪ, ಸತೀಶ್ ಚಿತ್ರಿಕಿ ಉಪಸ್ಥಿತರಿದ್ದರು.