ಅಂಶಿ ಪ್ರಸನ್ನಕುಮಾರ್
ಬನ್ನೂರಿನ ಮಾಜಿ ಶಾಸಕ ಕೆ.ಎಂ.ಚಿಕ್ಕಮಾದನಾಯಕ ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ. ಎಸ್ಟಿ ಜನಾಂಗಕ್ಕೆ ಮೀಸಲಾತಿ ಇಲ್ಲದೇ ಇದ್ದ ಸಂದರ್ಭದಲ್ಲಿಯೂ ಎರಡು ಬಾರಿ ಬನ್ನೂರು ಕ್ಷೇತ್ರದಿಂದ ಗೆದ್ದಿದ್ದ ಹೆಗ್ಗಳಿಕೆ ಅವರದು.
ಈಗ ರಾಜ್ಯದಲ್ಲಿ ಪ.ಪಂಗಡಕ್ಕೆ 15 ವಿಧಾನಸಭಾ ಕ್ಷೇತ್ರಗಳು ಮೀಸಲಾಗಿವೆ. ಆದರೆ, 2008 ರವರೆಗೆ ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕ ಮೀಸಲು ಕ್ಷೇತ್ರಗಳಿರಲಿಲ್ಲ. ಕುಲದೀಪ್ ಸಿಂಗ್ ನೇತೃತ್ವದ ಕ್ಷೇತ್ರ ಪುನರ್ ವಿಂಗಡಣಾ ಸಮಿತಿಯ ವರದಿಯಂತೆ ಎಚ್.ಡಿ. ಕೋಟೆಯ ಮೀಸಲಾತಿ ಪ.ಜಾತಿಯಿಂದ ಪ.ಪಂಗಡಕ್ಕೆ ಬದಲಾಯಿತು. ಆದರೆ ಅದಕ್ಕೂ ಮೊದಲು ಡಿ.ಟಿ. ಜಯಕುಮಾರ್- ನಂಜನಗೂಡಿನಿಂದ ಮೂರು ಬಾರಿ, ಕೆ.ಎಂ. ಚಿಕ್ಕಮಾದನಾಯಕ- ಬನ್ನೂರಿನಿಂದ ಎರಡು ಬಾರಿ ಹಾಗೂ ಎಸ್. ಚಿಕ್ಕಮಾದು- ಹುಣಸೂರು ಸಾಮಾನ್ಯ ಕ್ಷೇತ್ರದಿಂದ ಒಂದು ಬಾರಿ ಗೆದ್ದಿದ್ದರು.ಹುಣಸೂರು- ಬನ್ನೂರು ನಡುವೆ ಲೆಕ್ಕಾಚಾರ:
ಬನ್ನೂರಿನಲ್ಲಿ ಚಿಕ್ಕಮಾದನಾಯಕರು 1967 ರಲ್ಲಿ ಸ್ವತಂತ್ರ ಪಾರ್ಟಿ, 1978 ರಲ್ಲಿ ಪಕ್ಷೇತರ, 1985, 1994, 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಅವರ ಪುತ್ರ ಕೆ.ಸಿ. ಲೋಕೇಶ್, ಪತ್ನಿ ಗೌರಮ್ಮ ಜಿಪಂ ಸದಸ್ಯರಾಗಿದ್ದರು.
1989 ರಲ್ಲಿ ಹುಣಸೂರಿನಿಂದ ಚಂದ್ರಪ್ರಭ ಅರಸು ಆಯ್ಕೆಯಾಗಿದ್ದರು. 1991 ರ ಚುನಾವಣೆಯಲ್ಲಿ ಅವರು ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಆಗ ಬಿಜೆಪಿಗೆ ಹೋಗಿದ್ದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಗೆಲವು ಸಾಧಿಸಿದರು. ಆಗ ಹುಣಸೂರಿನಲ್ಲಿ ಉಪ ಚುನಾವಣೆ ಎದುರಾಯಿತು. ಎಸ್. ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದರು. ಆ ವೇಳೆಗೆ ಬಿಳಿಕೆರೆ ಕ್ಷೇತ್ರದಿಂದ ಜಿಪಂಗೆ ಆಯ್ಕೆಯಾಗಿದ್ದ ಎಸ್. ಚಿಕ್ಕಮಾದು ತಮ್ಮ ವಾಗ್ಪಟುತ್ವದಿಂದ ಹೆಸರು ಮಾಡಿದ್ದರು. ಉಭಯ ಜಿಲ್ಲೆಗಳಲ್ಲಿ ನಾಯಕ ಸಂಘಟನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಮೂಲತಃ ಕೆ.ಆರ್. ನಗರ ತಾಲೂಕು ಹೊಸೂರು ಕಲ್ಲಹಳ್ಳಿಯವರಾದ ಚಿಕ್ಕಮಾದು ನಂತರ ಹುಣಸೂರು ತಾಲೂಕು ಹೊಸರಾಮನಹಳ್ಳಿಗೆ ಬಂದು ನೆಲೆನಿಂತಿದ್ದರು. 1977 ಹಾಗೂ 1980ರ ಲೋಕಸಭೆ ಚುನಾವಣೆಯಲ್ಲಿಯೇ ಸ್ಪರ್ಧಿಸಿದ್ದವರು, ಇದಲ್ಲದೇ 1978 ರಲ್ಲಿ ಹುಣಸೂರಿನಲ್ಲಿ ಡಿ. ದೇವರಾಜ ಅರಸು ಹಾಗೂ 1983 ರಲ್ಲಿ ಅವರ ಪುತ್ರಿ ಚಂದ್ರಪ್ರಭ ಅರಸು ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ, ಗಮನ ಸೆಳೆದಿದ್ದರು. ಹೀಗಾಗಿ ಚಿಕ್ಕಮಾದು ಅವರಿಗೆ ಟಿಕೆಟ್ ನೀಡಲಾಯಿತು. ಆಗ ಅವರು ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರನ್ನು ಸೋಲಿಸಿ, ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 1998 ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತರು. 1999 ರಲ್ಲಿ ಹುಣಸೂರಿನಲ್ಲಿ ಕಾಂಗ್ರೆಸ್ ಬಂಡಾಯ, 2004 ರಲ್ಲಿ ಕಾಂಗ್ರೆಸ್, 2008 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೋತರು.
ಡಿ.ಟಿ. ಜಯಕುಮಾರ್:
2008 ರ ವೇಳೆಗೆ ನಂಜನಗೂಡು ಕ್ಷೇತ್ರವು ಸಾಮಾನ್ಯದಿಂದ ಪ.ಜಾತಿ ಮೀಸಲು ಕ್ಷೇತ್ರವಾಗಿ ಪರಿವರ್ತನೆಯಾಯಿತು. ಜಯಕುಮಾರ್ ಅವತ್ತು ಪ.ಪಂಗಡಕ್ಕೆ ಮೀಸಲಾದ ಎಚ್.ಡಿ. ಕೋಟೆಗೆ ಹೋಗಿದ್ದರೆ ಗೆಲ್ಲುತ್ತಿದ್ದರು. ಆದರೆ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ಕೇಳಿದರು. ವರಿಷ್ಠರು ಅವರಿಗೆ ಟಿಕೆಟ್ ನಿರಾಕರಿಸಿ, ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡರಿಗೆ ನೀಡಿದರು. ಇದನ್ನು ವಿರೋಧಿಸಿ ಜಯಕುಮಾರ್ ಬಿಎಸ್ಪಿ ಸೇರಿ ಅಭ್ಯರ್ಥಿಯಾದರು. ಆ ಚುನಾವಣೆಯಲ್ಲಿ ಇಬ್ಬರೂ ಸೋತು, ಕಾಂಗ್ರೆಸ್ನ ಎಂ. ಸತ್ಯನಾರಾಯಣ ಗೆದ್ದರು. ನಂತರ ಜಯಕುಮಾರ್ ಜೆಡಿಎಸ್ಗೆ ವಾಪಸ್ ಆದರು. ಅವರನ್ನು ರಾಜ್ಯ ಕಾರ್ಯಾಧ್ಯಕ್ಷರನ್ನಾಾಗಿ ನೇಮಿಸಲಾಗಿತ್ತು. ಬಿಜೆಪಿಯಿಂದಲೂ ಆಹ್ವಾನ ಬಂದಿತ್ತು. ಆದರೆ ಅದಕ್ಕೂ ಮುನ್ನವೇ ಅನಾರೋಗ್ಯದಿಂದ ನಿಧನರಾದರು.
ಎಚ್.ಡಿ.ಕೋಟೆ ಕ್ಷೇತ್ರ 2008 ರಿಂದ ಪ.ಪಂಗಡಕ್ಕೆ ಮೀಸಲಾಗಿದೆ. ಇದಾದ ನಂತರ ಚಿಕ್ಕಣ್ಣ, ಎಸ್. ಚಿಕ್ಕಮಾದು ತಲಾ ಒಮ್ಮೆ, ಅನಿಲ್ ಚಿಕ್ಕಮಾದು ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.