ತೀರ್ಥಹಳ್ಳಿ: ವಾರ್ಷಿಕ 1700 ಕೋಟಿ ರು. ವ್ಯವಹಾರವನ್ನು ನಡೆಸಿರುವ ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘ ಮತ್ತು ಶರಾವತಿ ಪತ್ತಿನ ಸಹಕಾರ ಸಂಘದ ಸಾಧನೆ ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರಿ ವ್ಯವಸ್ಥೆ ಷೇರುದಾರರ ನಿರೀಕ್ಷೆಗೆ ಪೂರಕವಾಗಿ ವಿಶ್ವಾಸಾರ್ಹತೆಯೊಂದಿಗೆ ಪ್ರಾಮಾಣಿಕತೆ ವ್ಯವಹಾರ ನಡೆದಾಗ ಮಾತ್ರ ಸಂಸ್ಥೆ ಸದೃಢವಾಗಿ ನಿಲ್ಲಬಹುದಾಗಿದೆ. ಈ ಸಹಕಾರಿ ಸಂಘದ ಸಾಧನೆ ಒಂದು ರಾಷ್ಟ್ರೀಯ ಬ್ಯಾಂಕಿನ ಸಾಧನೆಯಂತಿದೆ ಎಂದು ಹೇಳಿದರು.
ಈ ಭಾಗದ ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳು ಗಂಭೀರವಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ರಾಜ್ಯದ ಸಂಸದರು ಮತ್ತು ಕೃಷಿ ಕ್ಷೇತ್ರದ ಪ್ರಮುಖರ ನೀಯೋಗ ಕೇಂದ್ರ ಕೃಷಿ ಸಚಿವರನ್ನು ಭೇಟಿ ಸಮಸ್ಯೆಯನ್ನು ಮನವರಿಕೆ ಮಾಡಲಾಗಿದೆ. ಸಚಿವರು ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರ ಮೈಲುತುತ್ತ ಕಾಪರ್ ಸಲ್ಪೇಟ್ ಮೇಲಿನ ಜಿಎಸ್‍ಟಿ ತೆರಿಗೆಯನ್ನು 5% ಇಳಿಸಲು ಒಪ್ಪಿಗೆಯನ್ನು ನೀಡಿದೆ ಎಂದು ತಿಳಿಸಿದರು.ಸುಮಾರು 50 ಸಾವಿರ ರು. ಬೆಲೆಯ ಅಡಕೆ ಕೊಯ್ಯುವ ದೋಟಿಗೆ ಕೇಂದ್ರ ಸರ್ಕಾರದಿಂದ ಪರಿಶಿಷ್ಟ ವರ್ಗದವರಿಗೆ 40 ಸಾವಿರ ಸಾಮಾನ್ಯ ವರ್ಗದವರಿಗೆ 30 ಸಾವಿರ ಸಬ್ಸಿಡಿ ನೀಡಲಗುವುದು. ಅಡಕೆ ಮೇಲಿರುವ ಕ್ಯಾನ್ಸರ್‌ಕಾರಕ ಆರೋಪದ ಬಗ್ಗೆ ಸಂಶೋಧನೆ ಈಗಾಗಲೇ ಮುಕ್ತಾಯ ಹಂತದಲ್ಲಿದ್ದು, ಇನ್ನೂ ಕೇವಲ ಮೂರು ತಿಂಗಳಲ್ಲಿ ಸುಪ್ರೀಂಕೋರ್ಟಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸಹ್ಯಾದ್ರಿ ವಿವಿಧೋದ್ದೇಶ ಅಡಕೆ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ವಿಜಯದೇವ್ ಮಾತನಾಡಿ, ರಾಜಕೀಯದಿಂದ ಹೊರತಾಗಿರುವ ಈ ಸಂಸ್ಥೆಯ ಬೆಳವಣಿಗೆಯಲ್ಲಿ ಎಲ್ಲ ಪಕ್ಷದವರ ಬೆಂಬಲ ನಿರ್ಣಾಯಕವಾಗಿದೆ. ಈವರೆಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದವರಲ್ಲಿ ಹಾಲಿ ಸದಸ್ಯ ಬಿ.ವೈ.ರಾಘವೇಂದ್ರ ಮಾದರಿಯಾಗಿದ್ದು ಕೇಂದ್ರ ಸಚಿವ ಸ್ಥಾನವನ್ನು ಅಲಂಕರಿಸುವಂತಾಗಬೇಕೆಂದು ಆಶಿಸಿದರು.ಶರಾವತಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ವಿ.ಅಜಿತ್ ಮಾತನಾಡಿ, ಸಂಘದಿಂದ ಜನರಿಗೆ ಅಗತ್ಯ ಸೌಲಭ್ಯವನ್ನು ಕಲ್ಪಿಸುವ ಸಲುವಾಗಿ ಪೆಟ್ರೋಲ್ ಬಂಕ್, ಲೂಬ್ರಿಕೆಂಟ್, ಹಾಲು, ಪೇಪರ್ ಸಹಿತ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಚೆನ್ನವೀರಪ್ಪ, ರೇವತಿ ಅನಂತಮೂರ್ತಿ, ಸಿ.ಕೆ.ಪ್ರಸನ್ನ, ವಿನಂತಿ ಶಿವನಂದ ಕರ್ಕಿ, ಈಚಲುಬೈಲು ಶಶಿ, ಅಮರನಾಥ ಶೆಟ್ಟಿ, ಕೆ.ಎಂ.ಮೋಹನ್, ಕಾರ್ಯದರ್ಶಿ ಚಂದ್ರಕಲಾ ಮತ್ತಿತರರಿದ್ದರು.