ಸಿರಿಗೇರಿ ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ
ಕನ್ನಡಪ್ರಭ ವಾರ್ತೆ ಕುರುಗೋಡು
ಸಮೀಪದ ಸಿರಿಗೇರಿ ಜನತಾ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಕ್ಕಳು ಭಯದಲ್ಲೇ ಪಾಠ ಕೇಳುವ ದುಸ್ಥಿತಿ ನಿರ್ಮಾಣವಾಗಿದೆ.ಶಾಲೆಯಲ್ಲಿ ಒಟ್ಟು ಎಂಟು ಕೊಠಡಿಗಳಿವೆ. ಈ ಪೈಕಿ ನಾಲ್ಕು ಕೊಠಡಿ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಬೀಳುವ ಹಂತಕ್ಕೆ ತಲುಪಿವೆ. ಅದರಲ್ಲೂ ಬಿಸಿಯೂಟದ ಕೊಠಡಿ ಸುಮಾರು ೨೦ ವರ್ಷಗಳಷ್ಟು ಹಳೆಯದು. ಮೇಲ್ಚಾವಣಿಯ ಸಿಮೆಂಟ್ ಸತ್ವ ಕಳೆದುಕೊಂಡು ಕಬ್ಬಿಣದ ರಾಡುಗಳು ಕಾಣುವಂತಾಗಿದೆ. ಕಟ್ಟಡ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅಪಾಯಕ್ಕಾಗಿ ಕಾದು ಕುಳಿತಿದೆ.
ಶಾಲೆಯ ಹಿಂಭಾಗದ ಗೋಡೆ ಹಾಳಾಗಿರುವುದರಿಂದ ಹಾವು, ಚೇಳುಗಳ ತಾಣವಾಗಿದೆ. ಸ್ವಚ್ಛತೆಯೂ ಮರೀಚಿಕೆಯಾಗಿದೆ. ಇದರಿಂದ ಮಕ್ಕಳ ಜೀವಕ್ಕೆ ಸಂಚಕಾರ ಎದುರಾಗಿದೆ. ಹಾಗಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಶೌಚಾಲಯದ ಪರಿಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಿದೆ.ಈ ಶಾಲೆಯಲ್ಲಿ ೧ರಿಂದ ೭ನೇ ತರಗತಿವರೆಗೆ ಸುಮಾರು ೧೩೫ ವಿದ್ಯಾರ್ಥಿಗಳಿದ್ದು, ಕೇವಲ ಇಬ್ಬರು ಶಿಕ್ಷಕರು ಮಾತ್ರ ನಿಭಾಯಿಸುತ್ತಿದ್ದಾರೆ.
ಮೂಲಭೂತ ಸೌಲಭ್ಯಗಳ ಜೊತೆಗೆ ಶಾಲೆಯ ಸಮಗ್ರ ಅಭಿವೃದ್ಧಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಪಾಲಕರು ಒತ್ತಾಯಿಸಿದ್ದಾರೆ.ಸರ್ಕಾರಿ ಶಾಲೆ ಬಗ್ಗೆ ಅಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ತಾತ್ಸಾರ ಇದೆ. ಶಾಲೆಯಲ್ಲಿ ಅಗತ್ಯ ಸೌಲಭ್ಯ ಇಲ್ಲ. ಎಲ್ಲೆಂದರಲ್ಲಿ ಕ್ರಿಮಿ-ಕೀಟಗಳ ಉಪಟಳ ಹೆಚ್ಚಿದೆ. ಅನಾಹುತವಾದರೆ ಯಾರು ಹೊಣೆ. ಕೂಡಲೇ ಅಧಿಕಾರಿಗಳು ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಶಿರಿಗೇರಿಯ ನಿಮಗಾಗಿ ನಾವು ಸಂಸ್ಥೆಯ ಅಧ್ಯಕ್ಷ ಶೇಖರ್ ಎಚ್ಚರಿಸಿದ್ದಾರೆ.
ಶಾಲೆಯಲ್ಲಿ ಶಿಕ್ಷಕರು ಹಾಗೂ ಇತರ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಸರಿಪಡಿಸುವ ಭರವಸೆ ನೀಡಿದ್ದಾರೆ. ಆದರೆ ಶೀಘ್ರ ಸಮಸ್ಯೆ ಪರಿಹರಿಸಿದರೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ ಎಂದು ಶಿರಿಗೇರಿ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕ ಯೋಗೀಶ್ ಜಾಲಿ ತಿಳಿಸಿದ್ದಾರೆ.ಸಿರುಗುಪ್ಪ ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇರುವುದು ಗಮನಕ್ಕಿದೆ. ಅದನ್ನು ಸರಿಪಡಿಸುವ ಜತೆಗೆ ಶಾಲಾ ಕಟ್ಟಡಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಕೆಕೆಆರ್‌ಡಿಬಿ ಅನುದಾನ ನೀಡುವುದಾಗಿ ಹೇಳಿದ್ದಾರೆ. ಇನ್ನು ಬಿಸಿಯೂಟ ಕೊಠಡಿ ದುರಸ್ತಿಗೆ ಗ್ರಾಪಂ ಗಮನಕ್ಕೆ ತರಲಾಗುವುದು ಎಂದು ಸಿರುಗುಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ ಗುರಪ್ಪ ಎಚ್. ತಿಳಿಸಿದ್ದಾರೆ.