ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮೆರಾ, ಮಹಿಳಾ ಕಂಡಕ್ಟರ್ ಇರಲಿ: ತಿಪ್ಪೇಸ್ವಾಮಿ

KannadaprabhaNewsNetwork |  
Published : Mar 19, 2026, 01:15 AM IST
ಪೋಟೋ, 18ಎಚ್.ಎಸ್.ಡಿ2: ಹೊಸದುರ್ಗ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಸಭೆ ನಡೆಸಿದರು. | Kannada Prabha

ಸಾರಾಂಶ

ಖಾಸಗಿ ಶಾಲೆಗಳ ಮಕ್ಕಳ ಸಂಚಾರಕ್ಕೆ ಬಳಕೆಯಾಗುವ ಬಸ್ಸುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಮತ್ತು ಮಹಿಳಾ ಕಂಡಕ್ಟರ್ ಇರಬೇಕು. ಈ ಬಗ್ಗೆ ಖಾಸಗಿ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಖಾಸಗಿ ಶಾಲೆಗಳ ಮಕ್ಕಳ ಸಂಚಾರಕ್ಕೆ ಬಳಕೆಯಾಗುವ ಬಸ್ಸುಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಮತ್ತು ಮಹಿಳಾ ಕಂಡಕ್ಟರ್ ಇರಬೇಕು. ಈ ಬಗ್ಗೆ ಖಾಸಗಿ ಶಾಲಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿ, ಮಕ್ಕಳ ರಕ್ಷಣಾ ನೀತಿಯನ್ನು ಕಡ್ಡಾಯವಾಗಿ ಪಾಲಿಸಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ಕೆ.ಟಿ.ತಿಪ್ಪೇಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮಕ್ಕಳ ರಕ್ಷಣೆ ಕಾಯ್ದೆ ಕುರಿತಂತೆ ಸಭೆ ನಡೆಸಿ ಮಾತನಾಡಿ, ಕೆಲವು ಖಾಸಗಿ ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಎಸ್‌ಎಸ್‌ಎಲ್‌ಸಿ ತರಗತಿಗೆ ಸರ್ಕಾರಿ ಶಾಲೆಗಳಿಗೆ ಕಳಿಸುವಂತಹ ದೂರುಗಳು ಹೇಳಿ ಬರುತ್ತಿದ್ದು, ಹೊಸದುರ್ಗದಲ್ಲಿ ಆ ತರಹದ ದೂರುಗಳು ಏನಾದರೂ ಕಂಡು ಬಂದಲ್ಲಿ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಮತ್ತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮಾಹಿತಿ ನೀಡಿ ಎಂದರು.

ಸರ್ಕಾರಿ ಶಾಲೆಗಳಿಗೆ ತಾತ್ಕಾಲಿಕವಾಗಿ ನೇಮಿಸಿಕೊಂಡಿರುವ ಅತಿಥಿ ಶಿಕ್ಷಕರ ಪೋಲೀಸ್‌ ವೆರಿಫಿಕೇಶನ್ ಪಡೆಯಿರಿ. ಎಂಟರಿಂದ ಪಿಯುಸಿ ಓದುತ್ತಿರುವ ಮಕ್ಕಳಲ್ಲಿ ಹೆಚ್ಚಾಗಿ ಬಾಲ್ಯ ವಿವಾಹ ನಡೆಯುತ್ತಿದ್ದು, ಶಾಲಾ-ಕಾಲೇಜುಗಳಲ್ಲಿ ಹೆಚ್ಚಾಗಿ ತೆರೆದ ಮನೆ ಕಾರ್ಯಕ್ರಮವಾಗಬೇಕು. ಮಕ್ಕಳನ್ನು ಪೊಲೀಸ್‌ ಠಾಣೆಗಳಿಗೆ ಕರೆತಂದು ಮಾಹಿತಿ ನೀಡಬೇಕು. ಸಾಧ್ಯವಾಗದಿದ್ದಲ್ಲಿ ಪೋಲೀಸ್‌ ಅಧಿಕಾರಿಗಳೇ ಶಾಲೆಗಳಿಗೆ ಭೇಟಿ ನೀಡಿ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಸಲಹೆ ನೀಡಿದರು.

ಎಲ್ಲಾ ಮಕ್ಕಳಿಗೆ ಶಾಲೆಗಳು ಮತ್ತು ಹಾಸ್ಟೆಲ್‍ಗಳಲ್ಲಿ ಕಡ್ಡಾಯವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಶಾಲಾ ಆವರಣದಲ್ಲಿ ವಿದ್ಯುತ್ ಸಂಪರ್ಕಗಳ ಬಗ್ಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆಗೆಸಿ, ಕನಿಷ್ಠ ಪಕ್ಷ 10 ಗಿಡಗಳನ್ನಾದರೂ ಶಾಲಾ ಆವರಣದಲ್ಲಿ ಹಾಕುವ ಕೆಲಸ ಮಾಡಿ ಎಂದರು.

ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ 34 ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿಯಿದೆ. ಪೋಕ್ಸೋ ಕೇಸ್ ದಾಖಲಿಸಲು ಹಿಂಜರಿಯುತ್ತಾ ಕುಳಿತುಕೊಂಡರೆ, ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಹೇಗೆ ಸಾಧ್ಯ? ಹೊಸದುರ್ಗದಲ್ಲಿ 2 ತಾಯಿ ಮರಣ ಮತ್ತು 14 ಶಿಶುಮರಣವಾಗಿದೆ. ಮುಂದೆ ಈಗಾಗದಂತೆ ಎಚ್ಚರಿಕೆವಹಿಸಿ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತರ ಸಭೆ ನಡೆಸಿ, ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು ಮಾಹಿತಿ ನೀಡಿ ಎಂದು ತಿಳಿಸಿದರು.

ಎಲ್ಲಾ ಇಲಾಖೆಗಳ ಮೇಲೆ ಮಕ್ಕಳ ಸಹಾಯವಾಣಿ ಇರಬೇಕು. ತಹಸೀಲ್ದಾರ್ ಕಡ್ಡಾಯವಾಗಿ ಎರಡು ಬಾರಿ ಭೇಟಿ ನೀಡಬೇಕು. ಹಾಸ್ಟೆಲ್‍ಗಳಿಗೆ ಅನಧಿಕೃತ ವ್ಯಕ್ತಿಗಳು ಬಾರದಂತೆ ಎಚ್ಚರವಹಿಸಿ, ಮಕ್ಕಳ ರಕ್ಷಣಾ ನೀತಿಯನ್ನು ಅನುಸರಿಸಿ. ಸಮುದಾಯ ಭವನ ಮತ್ತು ದೇವಸ್ಥಾನಗಳ ಮುಂದೆ ಬಾಲ್ಯ ವಿವಾಹದ ಬಗ್ಗೆ ನಾಮಫಲಕ ಹಾಕಬೇಕು ಎಂದು ಹೇಳಿದರು.

ತಾಪಂ ಇಒ ಸುನಿಲ್ ಕುಮಾರ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಭ್ಯಂಗ ಸ್ನಾನಕ್ಕೆ ಒತ್ತು ನೀಡುವುದು ಅಗತ್ಯ: ಡಾ.ಚಂದ್ರಕಾಂತ್ ನಾಗಸಮುದ್ರ
2024ನೇ ಸಾಲಿನ ಶ್ರೀಶಿವರಾತ್ರೀಶ್ವರ ಪ್ರಶಸ್ತಿಗೆ ಪ್ರೊ.ಬಾಲಚಂದ್ರ ಜಯಶೆಟ್ಟಿ ಆಯ್ಕೆ