ಧಾರವಾಡ:
ರಂಗಾಯಣ ಆವರಣದಲ್ಲಿರುವ ಧಾರವಾಡ ಜರ್ನಲಿಸ್ಟ್ ಗಿಲ್ಡ್ ಬುಧವಾರ ಆಯೋಜಿಸಿದ್ದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕ ಖಾಸಗಿ ಶಾಲೆಗಳಿಗೆ ಮಕ್ಕಳು ಓಮಿನಿ ಕಾರು, ಆಟೋಗಳಲ್ಲಿ ಹೋಗಿ ಬರುತ್ತಾರೆ. ಸಾಕಷ್ಟು ಸಂದರ್ಭದಲ್ಲಿ ಈ ವಾಹನಗಳು ಸುರಕ್ಷತಾ ನಿಯಮ ಪಾಲಿಸುವುದಿಲ್ಲ. ಹೀಗಾಗಿ ಮಕ್ಕಳ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಶಾಲಾ ಕ್ಯಾಬ್ ಸಮಿತಿ ರಚಿಸಲಾಗುತ್ತಿದ್ದು, ಶಾಲಾ ಆಡಳಿತ ಮಂಡಳಿ, ಆರ್‌ಟಿಒ ಅಧಿಕಾರಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪೋಷಕರನ್ನು ಒಳಗೊಂಡಿರುತ್ತವೆ ಎಂದರು.
ಈಗಿನ ವಾಹನಗಳಿಗೆ ಅವಕಾಶ:ಈಗಿರುವ ವಾಹನಗಳೇ ಶಾಲಾ ಕ್ಯಾಬ್‌ಗಳನ್ನಾಗಿ ಪರಿವರ್ತಿಸಲು ಅವುಗಳಿಗೆ ಮಾಲೀಕರಿಗೆ ಸಮಿತಿಯು ಜಾಗೃತಿ ಮೂಡಿಸುತ್ತದೆ. ಆ ವಾಹನಗಳಿಗೆ ಹಳದಿ ಬಣ್ಣ ಬಳಿಯಬೇಕು, ಅದರಲ್ಲಿ ಸರಿಯಾದ ಪ್ರದರ್ಶನ ಫಲಕ ಇರಬೇಕು. ರಸ್ತೆ ಸುರಕ್ಷತಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಲಾ ಕ್ಯಾಬ್‌ಗಳಾಗಿ ನೋಂದಾಯಿಸಲಾದ ವಾಹನಗಳಿಗೆ 12+1 ಆಸನಗಳ ಆಧಾರದ ಮೇಲೆ ಮಕ್ಕಳನ್ನು ಸಾಗಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಇ-ಚಲನ್ ವ್ಯವಸ್ಥೆ:ಪದೇ-ಪದೇ ಸಂಚಾರ ಉಲ್ಲಂಘನೆ ಮಾಡುವ, ಕಳುವಾದ ವಾಹನ ಪತ್ತೆ ಹಚ್ಚಲು ಹಾಗೂ ಕಪ್ಪು ಪಟ್ಟಿಗೆ ಸೇರಿದ ವಾಹನ ಗುರುತಿಸಿ ಅವುಗಳ ಮೇಲೆ ಕ್ರಮ ತೆಗೆದುಕೊಳ್ಳಲು ಸದ್ಯ ಬೆಂಗಳೂರು ಗ್ರಾಮಾಂತರ, ನಗರ ಹಾಗೂ ಮೈಸೂರುಗಳಲ್ಲಿ ಇ-ಚಲನ್ ವ್ಯವಸ್ಥೆ ಜಾರಿಯಲ್ಲಿದೆ. ಸಂಚಾರ ಶಿಸ್ತನ್ನು ಜಾರಿಗೊಳಿಸಲು ಶೀಘ್ರದಲ್ಲೇ ಹು-ಧಾ ಅವಳಿ ನಗರಗಳಿಗೂ ವಿಸ್ತರಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ಸಂಚಾರ ಉಲ್ಲಂಘನೆ ಸೆರೆಹಿಡಿಯಲು ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅವುಗಳ ಚಲನೆ ವಲನೆ ಗುರುತಿಸಿ ಕ್ರಮ ವಹಿಸಬಹುದು. ನಿಯಮ ಉಲ್ಲಂಘಿಸುವವರಿಗೆ ದಂಡ ಪಾವತಿಸಲು 70 ದಿನ ಕಾಲಾವಕಾಶವಿದ್ದು ವಿಫಲವಾದರೆ ವರ್ಚುವಲ್ ನ್ಯಾಯಾಲಯಗಳ ಮೂಲಕ ಸಮನ್ಸ್ ನೀಡಲಾಗುತ್ತದೆ. ಸಾಮಾನ್ಯ ಅಪರಾಧಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಅವರ ಚಾಲನಾ ಪರವಾನಗಿ ಮತ್ತು ವಾಹನ ನೋಂದಣಿ ರದ್ದುಗೊಳಿಸಲಾಗುತ್ತದೆ ಎಂದು ಶ್ರೀಧರ ಮಲ್ಲಾಡ ಮಾಹಿತಿ ನೀಡಿದರು.
ಹಳೆಯ ವಾಹನಗಳ ಸ್ಕ್ರ್ಯಾಪಿಂಗ್:15 ವರ್ಷಕ್ಕಿಂತ ಹಳೆಯ ವಾಹನ ಗುಜರಿಗೆ ಸೇರಿರುವ ಕುರಿತು ಮಾತನಾಡಿದ ಅವರು, ಸರ್ಕಾರಿ ವಾಹನಗಳಿಗೆ ಪ್ರಸ್ತುತ ಈ ನಿಯಮ ಜಾರಿಗೆ ತರಲಾಗಿದೆ. 15 ವರ್ಷಕ್ಕಿಂತ ಹಳೆಯ ರಾಜ್ಯ ಸಾರಿಗೆ ಬಸ್ ಸೇರಿದಂತೆ ಯಾವುದೇ ಸರ್ಕಾರಿ ವಾಹನಗಳು ಈಗ ರಸ್ತೆಗಳಲ್ಲಿ ಸಂಚರಿಸುತ್ತಿಲ್ಲ. ಸರ್ಕಾರವು ಖಾಸಗಿ ವಾಹನಗಳಿಗೆ ನಿಯಮ ವಿಸ್ತರಿಸಿದರೆ, ಅಂತಹ ವಾಹನಗಳನ್ನು ಗುಜರಿಗೆ ಹಾಕಲು ಮಾಲೀಕರಿಗೆ ನೋಟಿಸ್ ನೀಡಲಾಗುವುದು. ನಿಯಮ ಜಾರಿಗೆ ಬರುವ ಮೊದಲೇ ವಾಹನ ಮಾಲೀಕರು ಹಳೆಯ ವಾಹನಗಳನ್ನು ಸ್ವಯಂಪ್ರೇರಣೆಯಿಂದ ಗುಜರಿಗೆ ಹಾಕಬಹುದು ಮತ್ತು ಹೊಸ ವಾಹನ ಖರೀದಿಸುವಾಗ ನೋಂದಣಿ ಶುಲ್ಕದಲ್ಲಿ ರಿಯಾಯಿತಿಗೆ ಅವರು ಅರ್ಹರಾಗುತ್ತಾರೆ ಎಂದರು.
ಹೊರಸೂಸುವಿಕೆ ಪರೀಕ್ಷೆ:ಹೊಗೆ ಹೊರಸೂಸುವಿಕೆ ಪರೀಕ್ಷೆಯ ಕುರಿತು, ಇಲಾಖೆಯು ಶುಲ್ಕವನ್ನು ₹ 150ಕ್ಕೆ ನಿಗದಿಪಡಿಸಿದೆ. ಬಿಎಸ್-4 ಮಾನದಂಡಗಳಿಗಿಂತ ಕಡಿಮೆ ಇರುವ ವಾಹನಗಳು ವರ್ಷಕ್ಕೆ ಎರಡು ಬಾರಿ ಹೊಗೆ ಹೊರಸೂಸುವಿಕೆ ಪರೀಕ್ಷೆಗೆ ಒಳಗಾಗಬೇಕು. ಕೆಲವು ಕೇಂದ್ರಗಳು ₹ 300ರ ವರೆಗೆ ಶುಲ್ಕ ವಿಧಿಸುತ್ತಿವೆ ಎಂಬ ದೂರುಗಳಿವೆ. ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಮಲ್ನಾಡದ ತಿಳಿಸಿದರು. ಯಾವುದೇ ಕಾರಣಕ್ಕೂ ವಾಹನ ಪರವಾನಗಿ, ಇನ್ಸುರೆನ್ಸ್ ಹಾಗೂ ಹೊಗೆ ಪ್ರಮಾಣ ಪತ್ರ ಇಲ್ಲದೇ ವಾಹನ ಚಾಲನೆ ಮಾಡಬೇಡಿ. ಜೊತೆಗೆ ಪಾಲಕರು 18 ವರ್ಷದೊಳಗಿನ ಮಕ್ಕಳಿಗೆ ಬೈಕ್ ಅಥವಾ ಕಾರು ಚಾಲನೆ ಅವಕಾಶ ನೀಡಬೇಡಿ ಎಂಬ ಸಲಹೆಯನ್ನು ಶ್ರೀಧರ ತಿಳಿಸಿದರು.
ಈ ವೇಳೆ ಆರ್‌ಟಿಒ ಕಚೇರಿ ಅಧೀಕ್ಷಕ ಸಂಜೀವ ಹೊಂಡದ, ಗಿಲ್ಡ್ ಅಧ್ಯಕ್ಷ ಬಸವರಾಜ ಹೊಂಗಲ, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ ಹಾಗೂ ಸದಸ್ಯರಿದ್ದರು. ಆನ್‌ಲೈನ್ ಸೇವೆ ಬಳಸಿಕೊಳ್ಳಿ...ಕಲಿಕಾ ಪರವಾನಗಿ (ಎಲ್‌ಎಲ್‌ಆರ್) ಮತ್ತು ಚಾಲನಾ ಪರವಾನಗಿ (ಡಿಎಲ್) ನೋಂದಣಿ, ನವೀಕರಣ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗಿದೆ. ನಾಗರಿಕರು ಆಧಾರ್ ದೃಢೀಕರಣ ಬಳಸಿಕೊಂಡು ಸಾರಿಗೆ ಇಲಾಖೆಯ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ 16 ಪ್ರಮುಖ ಸೇವೆ ಪಡೆಯಬಹುದು. ಈ ಕ್ರಮವು ಅನವಶ್ಯಕವಾಗಿ ಆರ್‌ಟಿಒ ಕಚೇರಿಗಳಿಗೆ ಭೇಟಿ ನೀಡುವುದನ್ನು ತಪ್ಪಿಸುತ್ತದೆ. ಎಲ್ಲ ಸೇವೆಗಳನ್ನು ಈಗ ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದು ಶ್ರೀಧರ ಮಲ್ಲಾಡ ಮನವಿ ಮಾಡಿದರು.