ಕನ್ನಡಪ್ರಭ ವಾರ್ತೆ ಮಂಡ್ಯ
ಹಣದ ಆಮಿಷಕ್ಕೆ ಒಳಗಾಗಿ ಕಂದಾಯ ಇಲಾಖೆ ಅಧಿಕಾರಿ, ನೌಕರರು, ಭೂ-ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಅಧೀನ ನೌಕರರು ಸಂಚು ರೂಪಿಸಿ ಸುಮಾರು ನಾಲ್ಕು ಕೋಟಿ ರು. ಬೆಲೆಬಾಳುವ ಸರ್ಕಾರಿ ಶಾಲೆಯ ಜಾಗವನ್ನು ಜಿ.ಗೋಪಾಲಕೃಷ್ಣ ಬಿನ್. ಗಂಗಯ್ಯ ಹೆಸರಿಗೆ ಖಾತೆ ಮಾಡಿಕೊಟ್ಟಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.
ಹುಲಿಕೆರೆ ಗ್ರಾಮದ ಸರ್ವೇ ನಂ. ೧೦೧/೧೬ರಲ್ಲಿದ್ದ ಒಂದು ಎಕರೆ ಜಮೀನನ್ನು ಪಟೇಲ್ ದಾಸೇಗೌಡರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದ್ದು ೯ ಆಗಸ್ಟ್ ೧೯೫೫ರಂದು ರಾಜಪ್ರಮುಖರ ಹೆಸರಿನಲ್ಲಿ ಶ್ರೀರಂಗಪಟ್ಟಣ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿತ್ತು. ರಾಜಪ್ರಮುಖರ ಹೆಸರಿನಲ್ಲಿ ಖಾತೆಯಿದ್ದ ಜಮೀನನ್ನು ೩೧ ಮೇ ೨೦೧೭ರಂದು ಶ್ರೀರಂಗಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಲಿಕೆರೆ ಹೆಸರಿಗೆ ಖಾತೆ ಮಾಡಿಕೊಡುವಂತೆ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರು. ದರಂತೆ ೧೩ ಸೆಪ್ಟೆಂಬರ್ ೨೦೨೧ರಂದು ಖಾತೆ ಬದಲಾವಣೆಯಾಗಿತ್ತು.ಈ ನಡುವೆ ಖಾಸಗಿ ವ್ಯಕ್ತಿಯಾದ ಜಿ.ಗೋಪಾಲಕೃಷ್ಣ ಎಂಬುವರ ಜೊತೆ ಸೇರಿದ ಶ್ರೀರಂಗಪಟ್ಟಣ ತಾಲೂಕು ಕಂದಾಯ ಇಲಾಖೆ ಅಧಿಕಾರಿ, ನೌಕರರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಅಧೀನ ನೌಕರರು ಶಾಮೀಲಾಗಿ ಅಕ್ರಮ ಸಂಚು ರೂಪಿಸಿ ಕೋಟ್ಯಂತರ ರು. ಬೆಲೆ ಬಾಳುವ ಸರ್ಕಾರಿ ಶಾಲೆಯ ಜಾಗವನ್ನು ಕಬಳಿಕೆ ಮಾಡುವುದಕ್ಕೆ ಸಂಚು ರೂಪಿಸಿದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸರ್ಕಾರಿ ದಾಖಲೆಗಳಲ್ಲಿದ್ದ ಹೆಸರುಗಳನ್ನು ಒಡೆದುಹಾಕಿರುವ ಬಗ್ಗೆ ಹುಲಿಕೆರೆ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀರಂಗಪಟ್ಟಣ ತಹಸೀಲ್ದಾರ್ ಅವರಿಗೆ ಹುಲಿಕೆರೆ ಗ್ರಾಮದ ಸರ್ವೇ ನಂ.೧೦೧/೧೬ರಲ್ಲಿ ಒಂದು ಎಕರೆ ಜಮೀನನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ. ದೂರಿನ ಜೊತೆಗೆ ಸರ್ವೇ ನಂ.೧೦೧/೧೬ರ ಹಿಸ್ಸಾ, ಸರ್ವೇ ಪಟ್ಟಾ ಪುಸ್ತಕದ ಪ್ರತಿ, ನಕಾಶೆಯನ್ನು ಲಗತ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಷಯಾಗಿ ಮಾಹಿತಿ ಹಕ್ಕು ಕಾಯಿದೆಯಡಿ ದಾಖಲೆಗಳನ್ನು ಕೇಳಿದ್ದರೂ ಶ್ರೀರಂಗಪಟ್ಟಣ ತಹಸೀಲ್ದಾರ್‌ರವರು ಈವರೆಗೆ ಒದಗಿಸಿಲ್ಲ. ಪಾಂಡವಪುರ ಉಪವಿಭಾಗಾಧಿಕಾರಿಗಳು ದಾಖಲೆಗಳನ್ನು ನೀಡುವಂತೆ ಆದೇಶಿಸಿದ್ದರೂ ಇದುವರೆಗೂ ನೀಡಿಲ್ಲ. ವಿಷಯ ನಿರ್ವಾಹಕ ಕೆ.ಎಸ್.ನಟರಾಜು ವ್ಯಾಟ್ಸಾಪ್ ಮೂಲಕ ೩೪ ದಾಖಲೆಗಳನ್ನು ಕಳುಹಿಸಿದ್ದರೂ ಅವು ಅಪೂರ್ಣದಿಂದ ಕೂಡಿವೆ. ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುವ ಸಾಧ್ಯತೆಗಳಿವೆ ಎಂದು ದೂರಿದ್ದಾರೆ.ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಿ ಶಾಲೆಯ ಜಾಗವನ್ನು ಖಾಸಗಿ ವ್ಯಕ್ತಿಯ ಹೆಸರಿಗೆ ಪರಭಾರೆ ಮಾಡಿರುವ ಶ್ರೀರಂಗಪಟ್ಟಣ ತಾಲೂಕು ತಹಸೀಲ್ದಾರ್ ಕಚೇರಿ ಅಧಿಕಾರಿ, ನೌಕರರು,, ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಮತ್ತು ನೌಕರರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.