ಪ್ರತಿದಿನ ಬೆಳಗ್ಗೆ ಶಾಲೆಗೆ ಆಗಮಿಸುವ ಶಿಕ್ಷಕರಿಗೆ ಒಂದಿಲ್ಲೊಂದು ಅಹಿತಕರ ಘಟನೆಗಳು ಕಂಡುಬರುತ್ತಿವೆ
ಕುಕನೂರು: ತಾಲೂಕಿನ ಮಂಡಲಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳ ಬೀಗ ಮುರಿದು ಕಿಡಿಗೇಡಿಗಳು ಮದ್ಯಪಾನ ಹಾಗೂ ಧೂಮಪಾನ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಎಸ್‌ಡಿಎಂಸಿ ಹಾಗೂ ಶಿಕ್ಷಕರು ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ಶಾಲೆಯಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗಿದ್ದು, ಪ್ರತಿದಿನ ಬೆಳಗ್ಗೆ ಶಾಲೆಗೆ ಆಗಮಿಸುವ ಶಿಕ್ಷಕರಿಗೆ ಒಂದಿಲ್ಲೊಂದು ಅಹಿತಕರ ಘಟನೆಗಳು ಕಂಡುಬರುತ್ತಿವೆ. ಕೆಲ ದಿನಗಳ ಹಿಂದೆ ಶಾಲೆಯ ಕಾಂಪೌಂಡ್ ಗೇಟ್‌ನ ಬೀಗ ಮುರಿಯಲಾಗಿತ್ತು. ಮತ್ತೊಂದು ಸಂದರ್ಭದಲ್ಲಿ ಶಾಲೆಯ ನಾಮಫಲಕ ಕಿತ್ತು ಹಾಕಲಾಗಿತ್ತು. ಶಾಲಾ ಆವರಣದಲ್ಲಿ ಮದ್ಯದ ಬಾಟಲಿ, ಬೀಡಿ ಹಾಗೂ ಸಿಗರೇಟ್ ತುಂಡು ಪತ್ತೆಯಾಗಿದ್ದು, ಶಾಲೆಯೊಳಗೆ ಅಕ್ರಮ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಕಿಡಿಗೇಡಿಗಳು ಶಾಲೆಯ ತರಗತಿ ಕೊಠಡಿ ಹಾಗೂ ಅಕ್ಷರ ದಾಸೋಹ ಯೋಜನೆಯ ಬಿಸಿಯೂಟ ಕೊಠಡಿಯ ಬಾಗಿಲು ಮುರಿದು ಒಳ ಪ್ರವೇಶಿಸಿ ಮದ್ಯಪಾನ ನಡೆಸಿದ್ದಾರೆ. ಬಳಿಕ ಮದ್ಯದ ಖಾಲಿ ಬಾಟಲಿ ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರು ಕುಕನೂರು ಪೊಲೀಸ್ ಠಾಣೆಗೆ ದೂರು ನೀಡಿ ಶಾಲೆಗೆ ಭದ್ರತೆ ಒದಗಿಸಿ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಶಿಕ್ಷಣ ಮತ್ತು ಸಂಸ್ಕಾರದ ಕೇಂದ್ರವಾಗಿರುವ ಶಾಲೆಯಲ್ಲೇ ಇಂತಹ ಘಟನೆ ಮರುಕಳಿಸುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಶಾಲಾ ಆವರಣದಲ್ಲಿ ರಾತ್ರಿ ಗಸ್ತು ಹೆಚ್ಚಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.