ಹೊನ್ನಾವರ: ವಿದ್ಯಾರ್ಥಿಗಳು ಪ್ರಾತ್ಯಕ್ಷಿತೆಯೊಂದಿಗೆ ಜೀವನದ ಅನುಭವ ಪಡೆಯಲು ಹಾಗೂ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಪೂರಕ ಎಂದು ಶಾಲೆಯ ಪೂರ್ವ ವಿದ್ಯಾರ್ಥಿ ಹಾಗೂ ದಾನಿಗಳಾದ ಎನ್.ಆರ್.ಹೆಗಡೆ, ರಾಘೋಣ ಹೇಳಿದರು.
ಅವರು ತಾಲೂಕಿನ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯಲ್ಲಿ ನೂತನವಾಗಿ ಆಗಮಿಸಿದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರವನ್ನು ನೀಡಿ ಶಾಲಾ ಸಂಸತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾನತೆಯ ಸಂಕೇತವಾಗಿ ಸಮವಸ್ತ್ರವನ್ನು ವಿತರಿಸಿ, ವಿದ್ಯಾರ್ಥಿಗಳ ಮಹತ್ವಾಕಾಂಕ್ಷೆ ಮಹತ್ತರವಾಗಿರಬೇಕು. ಜೀವನದಲ್ಲಿ ಯಶಸ್ಸನ್ನು ಸಾಧಿಸಿಕೊಳ್ಳಿ. ನೀವು ವಿದೇಶದಲ್ಲಿ ನೆಲೆಸಿದರೂ ಮಾತೃ ನೆಲವನ್ನು ಮರೆಯಬಾರದು. ಕಲಿತ ಶಾಲೆಗೆ ಕೊಡುಗೆಯನ್ನು ನೀಡಬೇಕೆಂದು ನುಡಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಕಂದಾಯ ಅಧಿಕಾರಿಯಾದ ಕೆ.ಎಸ್.ಭಟ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿ , ಶಾಲೆಗೆ ಮತ್ತು ಊರಿಗೆ ಕೀರ್ತಿಯನ್ನು ತರಬೇಕು ಎಂದು ಆಶಿಸಿದರು.ಕರ್ಕಿ ಗ್ರಾಪಂ ಅಧ್ಯಕ್ಷೆ ವೀಣಾ ಶೇಟ್ ಮಾತನಾಡಿ, ಹಿರಿಯರ ಮಾರ್ಗದರ್ಶನದಲ್ಲಿ ಆದರ್ಶವನ್ನು ರೂಢಿಸಿಕೊಂಡರೆ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯ ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಲ್.ಎಂ. ಹೆಗಡೆ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ ಮತ್ತು ಜವಾಬ್ದಾರಿಯ ಸಮಾನ ಹಂಚಿಕೆಗೆ ಶಾಲಾ ಸಂಸತ್ ನಂತಹ ಚಟುವಟಿಕೆಗಳು ಪೂರಕ. ಮಾತನ್ನು ಕೇಳುವಿಕೆ ಮತ್ತು ಕೇಳದಿರುವಿಕೆ ನಡುವಿನ ಹೊಂದಾಣಿಕೆಯ ಪರಿಕ್ರಮವೇ ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ಶಾಲಾ ಸಂವಿಧಾನದ ಮಹತ್ವ ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಜಾನನ ಹೆಗಡೆ ಮಾತನಾಡಿ, ಕೊಡುವ ಗುಣ ಎಲ್ಲರಲ್ಲು ಇರುವುದಿಲ್ಲ. ಆದರೆ ಕೇಳದೇ ಪ್ರತಿ ವರ್ಷ ನಮ್ಮ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿ, ವಿದ್ಯಾರ್ಥಿಗಳ ಭಾವನೆಯನ್ನು ಒಂದಾಗಿಸಿದ ದಾನಿಗಳಾದ ರಾಘೋಣ ಅವರಿಗೆ ಅಭಿವಂದನೆ ಸಲ್ಲಿಸಿದರು.
ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ವಿಶ್ವನಾಥ್ ನಾಯ್ಕ ಪ್ರಮಾಣ ವಚನ ಬೋಧಿಸಿದರು. ಪೂಜಾ ಭಟ್ ವಂದಿಸಿದರು. ಸೀಮಾ ಭಟ್ ನಿರೂಪಿಸಿದರು.