ನಾಳೆಯಿಂದ ಮಕ್ಕಳಿಗೆ ಶಾಲೆ ಪುನಾರಂಭ

KannadaprabhaNewsNetwork |  
Published : May 29, 2025, 12:21 AM ISTUpdated : May 29, 2025, 07:06 AM IST
28ಸಿಎಚ್‌ಎನ್‌51ಚಾಮರಾಜನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಶಾಲೆಗಳಿಗೆ ಮುಖ್ಯಶಿಕ್ಷಕರು ಸಮವಸ್ತ್ರವನ್ನು ತೆಗೆದುಕೊಂಡು ಪರಿಶೀಲಿಸುತ್ತಿರುವುದು. | Kannada Prabha

ಸಾರಾಂಶ

ಚಾಮರಾಜನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಶಾಲೆಗಳಿಗೆ ಮುಖ್ಯಶಿಕ್ಷಕರು ಸಮವಸ್ತ್ರವನ್ನು ತೆಗೆದುಕೊಂಡು ಪರಿಶೀಲಿಸುತ್ತಿರುವುದು.

ಎನ್. ರವಿಚಂದ್ರ

 ಚಾಮರಾಜನಗರ : 2025-26ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಮೇ 30ರಂದು ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ.

ಜಿಲ್ಲೆಯಲ್ಲಿರುವ 1102 ಶಾಲೆಗಳಲ್ಲಿ ಹಲವು ಸಿದ್ಧತೆಗಳನ್ನು ಶಾಲಾ ಶಿಕ್ಷಣ ಇಲಾಖೆ ಕೈಗೊಂಡಿದ್ದು, ಮೇ 29ರಂದೇ ಶಾಲೆಯ ಮುಖ್ಯಶಿಕ್ಷಕರು ಹಾಗೂ ಸಹ ಶಿಕ್ಷಕರು ಶಾಲೆಯನ್ನು ವಿಶೇಷವಾಗಿ ತಳಿರುತೋರಣಗಳಿಂದ ಶೃಂಗರಿಸಲಿದ್ದು, ಮೇ 30ರಂದು ಶಾಲೆಗೆ ಆಗಮಿಸುವ ಮಕ್ಕಳಿಗೆ ಸಿಹಿಯನ್ನು ನೀಡಿ ಸ್ವಾಗತಿಸಲು ಸಿದ್ದವಾಗಿದೆ.

ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ಮೊದಲ ದಿನದಲ್ಲೇ ಮಕ್ಕಳಿಗೆ ನೀಡಬೇಕು ಎಂಬ ನಿಟ್ಟಿನಲ್ಲಿ ಈಗಾಗಲೇ ಸಮವಸ್ತ್ರಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ತಲುಪಿದ್ದು, ಅಲ್ಲಿಂದ ಶಾಲೆಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಪಠ್ಯಪುಸ್ತಕವನ್ನು ವಿತರಣೆ ಮಾಡಲು ಕಳೆದ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರಂತೆ ಸರ್ಕಾರಿ ಶಾಲೆಗಳಲ್ಲಿ ಉಚಿತ ವಿತರಣೆಗೆ 10,08,449 ಪಠ್ಯ ಪುಸ್ತಕ ಮಾರಾಟಕ್ಕೆ 4,27,221 ಪಠ್ಯ ಪುಸ್ತಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ 6,31,446 ಪಠ್ಯಪುಸ್ತಕ ಉಚಿತ ವಿತರಣೆಗೆ ಹಾಗೂ 3,25,440 ಪಠ್ಯ ಪುಸ್ತಕ ಮಾರಾಟಕ್ಕೆ ಬಂದಿದ್ದು, ಶಾಲೆಗಳಿಗೆ ತಲುಪಿಸಲಾಗಿದೆ. ವಾರದೊಳಗೆ ಉಳಿದ ಪಠ್ಯಪುಸ್ತಕಗಳು ಪಠ್ಯ ಪುಸ್ತಕ ಪೂರೈಕೆದಾರರಿಂದ ಇಲಾಖೆಗೆ ತಲುಪಲಿದೆ ಎಂದು ಪಠ್ಯಪುಸ್ತಕ ನೋಡಲ್‌ ಅಧಿಕಾರಿ ಗಿರೀಶ್‌ ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಮಕ್ಕಳಿಗೆ ವಾರಕ್ಕೆ ಎರಡು ದಿನ ಮಾತ್ರ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಆದರೆ ಈ ವರ್ಷದಿಂದ ಅಜಿಂ ಪ್ರೇಮ್‌ ಜಿ ವತಿಯಿಂದ ನಾಲ್ಕುದಿನ ಹಾಗೂ ಸರ್ಕಾರದಿಂದ 2 ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ. ಶಾಲೆ ಪ್ರಾರಂಭದ ದಿನವೇ ಮಕ್ಕಳಿಗೆ ಬಿಸಿಊಟ ಪ್ರಾರಂಭವಾಗಬೇಕು ಮೊದಲ ದಿನ ಬಿಸಿಯೂಟದ ಜೊತೆಗೆ ಸಿಹಿ ಸಹ ಸಿಗಲಿದೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ನಮ್ಮ ಶಾಲೆ ನಮ್ಮ ಜವಾಬ್ದಾರಿ ಎಂಬ ವಿಶೇಷ ಆಂದೋಲನವನ್ನು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ 5 ತಾಲೂಕಿನಿಂದ 2 ಶಾಲೆಯಂತೆ 10 ಶಾಲೆಯನ್ನು ಆಯ್ಕೆಮಾಡಿಕೊಂಡು ನಡೆಸಲಾಗಿದೆ.

ವಿಶೇಷ ದಾಖಲಾತಿ ಆಂದೋಲನವನ್ನು ಮೇ 27ರಿಂದ ಮೇ 31ರವರಗೆ ಮತ್ತು ಸಾಮಾನ್ಯ ದಾಖಲಾತಿ ಆಂದೋಲನವನ್ನು ಜೂ. 2ರಿಂದ ಜೂ. 30ರವರಗೆ ಕೈಗೊಂಡಿದ್ದು, ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಕ್ರಮಕೈಗೊಳ್ಳಲಾಗಿದೆ.

ಶಿಥಿಲ ಕಟ್ಟಡದಿಂದ ಮಕ್ಕಳ ರಕ್ಷಣೆ:

ಶಾಲೆಯಲ್ಲಿ ಶಿಥಿಲ ಕಟ್ಟಡಗಳಿದ್ದರೆ ಶಿಥಿಲ ಕಟ್ಟಡಗಳಲ್ಲಿ ಮಕ್ಕಳನ್ನು ಕೂರಿಸದಂತೆ ಎಚ್ಚರವಹಿಸಿ ಶಿಥಿಲ ಕಟ್ಟಡ ಎಂದು ಸೂಚನೆಯನ್ನು ಅಂಟಿಸಲಾಗಿದೆ. ಶಾಲೆಯಲ್ಲಿ ಮಕ್ಕಳಿಗೆ ಅವಘಡಗಳು ಉಂಟಾಗದಂತೆ ಎಚ್ಚರಿಕೆಯನ್ನು ವಹಿಸಲು ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನಾ ಪತ್ರ ಹೊರಡಿಸಿದ್ದಾರೆ.

ವಿಭಿನ್ನವಾಗಿ ಶಾಲೆ ಪ್ರಾರಂಭೋತ್ಸ ಮಾಡಬೇಕು ಎಂಬುದು ನಮ್ಮ ಆಶಯ. ಸಮವಸ್ತ್ರ ಒಂದು ಸೆಟ್‌ ಬಂದಿದ್ದು ವಿತರಣೆ ಮಾಡಲಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗೆ ದಾಖಲಿಸಲು 10 ಶಾಲೆಯಲ್ಲಿ ಪ್ರಯೋಗಿಕವಾಗಿ ಕಾರ್ಯಕ್ರಮ ಮಾಡಿದ್ದೇವೆ. ಪಠ್ಯ ಪುಸ್ತಕ ಶೇ.90ರಷ್ಟು ಶಾಲೆಗಳಿಗೆ ತಲುಪಿದೆ. ಸಮವಸ್ತ್ರ 100ಕ್ಕೆ ನೂರರಷ್ಟು ಮಕ್ಕಳಿಗೆ ತಲುಪಲಿದೆ.

-ರಾಮಚಂದ್ರ ರಾಜೇ ಅರಸ್‌, ಡಿಡಿಪಿಐ, ಚಾಮರಾಜನಗರ

PREV
Read more Articles on

Recommended Stories

ಡಾ.ಪ್ರಭಾಕರ್‌ ಕೋರೆ 78ನೇ ಜನ್ಮದಿನ ಅರ್ಥಪೂರ್ಣ ಆಚರಣೆ
ರಾಜಕೀಯ ದುರುದ್ದೇಶಕ್ಕೆ ದೇವಾಲಯಗಳ ಬಳಕೆ ಸಲ್ಲದು