ಬೇಸಿಗೆ ರಜೆಗಳು ಕಳೆದು ಶುಕ್ರವಾರದಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಶುಕ್ರವಾರ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಹಾವೇರಿ: ಬೇಸಿಗೆ ರಜೆಗಳು ಕಳೆದು ಶುಕ್ರವಾರದಿಂದ 2024-25ನೇ ಸಾಲಿನ ಶೈಕ್ಷಣಿಕ ವರ್ಷ ಶುಕ್ರವಾರ ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಕರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಶಾಲೆ ಪುನಾರಂಭವಾಗುವ ದಿನವೇ 1ರಿಂದ 10ನೇ ತರಗತಿವರೆಗಿನ ಎಲ್ಲ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ನೀಡಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾದ್ಯಂತ ಮೇ 31ರಂದು ಶಾಲಾ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇ ೨೯ರಿಂದಲೇ ಶೈಕ್ಷಣಿಕ ವರ್ಷ ಆರಂಭಗೊಂಡಿದ್ದು ಕಳೆದ ಎರಡು ದಿನಗಳಿಂದ ಶಿಕ್ಷಕರು ಶಾಲಾ ಪ್ರಾರಂಭೋತ್ಸವಕ್ಕೆ ಬೇಕಾದ ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಿಂದ ಶಾಲೆಗೆ ರಜೆ ಇದ್ದ ಕಾರಣ ಶಾಲಾ ಕೊಠಡಿ, ಆವರಣವನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಅದ್ಧೂರಿಯಾಗಿ ಶಾಲೆಗೆ ಬರ ಮಾಡಿಕೊಳ್ಳಲು ತಯಾರಿ ನಡೆಸಿದ್ದು, ಶುಕ್ರವಾರದಿಂದ ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಶುರುವಾಗಲಿದೆ.ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಆರ್‌ಪಿ, ಬಿಆರ್‌ಸಿ, ಸೇರಿ ಇತರೆ ಅಧಿಕಾರಿಗಳನ್ನೊಳಗೊಂಡಂತೆ ಡಿಡಿಪಿಐ ನೇತೃತ್ವದ ಸಭೆಯಲ್ಲಿ ಸಲಹೆ ಸೂಚನೆ ನೀಡಿದ್ದು, ಇಲಾಖೆ ನಿಯಮಾನುಸಾರ ಶಾಲಾ ಆರಂಭಕ್ಕೆ ಆಯಾ ಶಾಲಾ ಮುಖ್ಯಶಿಕ್ಷಕರಿಗೆ ವಾರ್ಷಿಕ ಕ್ರಿಯಾಯೋಜನೆ ಪಟ್ಟಿ ಕಳುಹಿಸಲಾಗಿದೆ.
2 ಜೊತೆ ಸಮವಸ್ತ್ರ: ಈ ವರ್ಷದ ವಿಶೇಷವೆಂದರೆ ವಿದ್ಯಾರ್ಥಿಗಳಿಗೆ ಶಾಲಾರಂಭದ ದಿನವೇ ಎರಡು ಜೊತೆ ಸಮವಸ್ತ್ರ ನೀಡಲಾಗುತ್ತಿದೆ. ಪ್ರತಿ ವರ್ಷ ತಡವಾಗಿ ಸಮವಸ್ತ್ರ ನೀಡುತ್ತಿದ್ದ ಸರ್ಕಾರ, ಈ ಸಲ ಮುಂಚಿತವಾಗಿ ಸಿದ್ಧತೆ ನಡೆಸಿ ಸಮವಸ್ತ್ರಗಳನ್ನು ಪೂರೈಸಿದೆ. ಈಗಾಗಲೇ ಪ್ರತಿ ಶಾಲೆಗಳಿಗೆ ಸಮವಸ್ತ್ರ ಪೂರೈಕೆಯಾಗಿದ್ದು, ಶುಕ್ರವಾರವೇ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಜೂನ್‌ನಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ನಡೆಯಲಿದೆ. ಜತೆಗೆ ಪರಿಹಾರ ಬೋಧನೆಗೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲ ಖಾಸಗಿ ಶಾಲೆಗಳಲ್ಲಿ ತರಗತಿಗಳನ್ನು ಆರಂಭಿಸಿದ್ದು ಕೆಲ ಶಾಲೆಗಳು ಶಾಲಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಜಿಲ್ಲೆಯಲ್ಲಿ ಒಟ್ಟು ೧೧೩೦ ಪ್ರಾಥಮಿಕ ಹಾಗೂ ೧೫೪ ಪ್ರೌಢ ಶಾಲೆಗಳು ಸೇರಿದಂತೆ ೧೨೮೪ ಶಾಲೆಗಳಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ೧ರಿಂದ ೧೦ನೇ ತರಗತಿವರೆಗೆ ಸುಮಾರು ೧.೭೫ ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಜೂನ್‌ನಲ್ಲಿ ಜಿಲ್ಲಾದ್ಯಂತ ಪರಿಹಾರ ಬೋಧನೆಯ ತರಗತಿಗಳು ನಡೆಯಲಿದ್ದು ಹಿಂದಿನ ತರಗತಿಯ ವಿಷಯವನ್ನು ಮಕ್ಕಳಿಗೆ ಪುನರಾವರ್ತನೆಯನ್ನು ಶಿಕ್ಷಕರು ಮಾಡಲಿದ್ದಾರೆ. ನಂತರ ಆ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗುತ್ತದೆ. ಇದರ ಫಲಿತಾಂಶದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಬಗ್ಗೆ ತಿಳಿದು ಅದರನುಸಾರ ಮಕ್ಕಳ ಕಲಿಕೆಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ.
ಜಿಲ್ಲೆಗೆ ಶೇ.೪೩ರಷ್ಟು ಪಠ್ಯಪುಸ್ತಕ ಪೂರೈಕೆ: ಜಿಲ್ಲೆಗೆ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ೧ರಿಂದ ೧೦ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಒಟ್ಟು ೨೯,೭೪,೮೪೩ ಪಠ್ಯ ಪುಸ್ತಕಗಳು ಅಗತ್ಯವಾಗಿದ್ದು, ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ೧೩,೦೭,೮೩೮ ಪಠ್ಯ ಪುಸ್ತಕಗಳನ್ನು ಸ್ವೀಕರಿಸಿದ್ದು ಶೇ.೪೩.೯೬ರಷ್ಟು ಪಠ್ಯ ಪುಸ್ತಕಗಳು ಪೂರೈಕೆ ಆಗಿವೆ. ಜಿಲ್ಲೆಯ ಖಾಸಗಿ ಶಾಲೆಗಳಿಂದ ೭,೦೮,೨೫೪ ಪುಸ್ತಕಗಳಿಗೆ ಬೇಡಿಕೆ ಇತ್ತು. ಈಗಾಗಲೇ ೩,೮೦,೦೯೫ ಪುಸ್ತಕಗಳು ಪೂರೈಕೆಯಾಗಿವೆ.
ಮೆನು ಪ್ರಕಾರ ಅಡುಗೆ: ಶಿಕ್ಷಣ ಇಲಾಖೆ ನಿಗದಿಪಡಿಸಿದ ಮೆನು ಪ್ರಕಾರ ಅಡುಗೆ ತಯಾರಿಸಬೇಕು ಹಾಗೂ ಮಕ್ಕಳಿಗೆ ಊಟ ವಿತರಿಸುವ ಮುಂಚಿತವಾಗಿ ಶಿಕ್ಷಕರು ಕಡ್ಡಾಯವಾಗಿ ಆಹಾರ ಗುಣಮಟ್ಟವನ್ನು ಅರ್ಧಗಂಟೆ ಮುಂಚಿತವಾಗಿ ಊಟ ಮಾಡಿ ಪರೀಕ್ಷಿಸಿ ಮಕ್ಕಳಿಗೆ ಆಹಾರ ವಿತರಿಸಬೇಕು. ಆಹಾರ ದೃಢೀಕರಣ ವಹಿಯಲ್ಲಿ ನಮೂದಿಸಬೇಕು. ಶಾಲೆಯಲ್ಲಿ ಉಳಿದ ಮಾತ್ರೆಗಳನ್ನು ಪರಿಶೀಲಿಸಿ ಅವಧಿ ಮೀರಿದ ಮಾತ್ರೆಗಳನ್ನು ಆರೋಗ್ಯ ಇಲಾಖೆಗೆ ಹಿಂತಿರುಗಿಸಬೇಕು ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ಸೂಚನೆ ನೀಡಿದ್ದಾರೆ. ಪ್ರಸಕ್ತ ೨೦೨೪-೨೫ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳು ಪ್ರಾರಂಭವಾಗಿದ್ದು, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗಳಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡು ಮಧ್ಯಾಹ್ನ ಉಪಾಹಾರ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಶಾಲೆಯ ನೀರಿನ ಟ್ಯಾಂಕ್, ಸಿಂಟೆಕ್ಸ್, ನೀರಿನ ತೊಟ್ಟೆಗಳು, ಡ್ರಮ್‌ಗಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಕ್ಕೆ ಹಾಗೂ ಶಾಲಾ ಮಕ್ಕಳಿಗೆ ಕುಡಿಯಲು ಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ಜಿಪಂ ಸಿಇಒ ಅಕ್ಷಯ ಶ್ರೀಧರ ಹೇಳಿದರು.