ಪ್ರಜಾಪ್ರಭುತ್ವದ ಮೌಲ್ಯ ತಿಳಿಸುವ ಶಾಲಾ ಯುವ ಸಂಸತ್‌

KannadaprabhaNewsNetwork |  
Published : Nov 12, 2026, 02:00 AM IST
ಹಾವೇರಿ: ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಸ್ಪರ್ಧೆಗೆ ಡಯಟ್ ಪ್ರಾಚಾರ್ಯ ಝಡ್.ಎಂ.ಖಾಜಿ ಚಾಲನೆ ನೀಡಿದರು.                | Kannada Prabha

ಸಾರಾಂಶ

ಯುವ ಸಂಸತ್‌ ಕಾರ್ಯಕ್ರಮದ ನೋಡಲ್ ಅಧಿಕಾರಿ ಅಮೀರ ಭಾಷಾ ಮಾತನಾಡಿ, ಯುವ ಸಂಸತ್ತು ಕೇವಲ ಸ್ಪರ್ಧೆಯಲ್ಲ, ಇದು ವಿದ್ಯಾರ್ಥಿಗಳನ್ನು ಭವಿಷ್ಯ ಜವಾಬ್ದಾರಿ ನಾಗರಿಕರನ್ನಾಗಿ ರೂಪಿಸುವ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ ಎಂದರು.

ಹಾವೇರಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯ, ಸಂಸದೀಯ ಕಾರ್ಯವೈಖರಿ ಹಾಗೂ ಜವಾಬ್ದಾರಿ ಪ್ರಜೆಗಳಾಗಿ ಬೆಳೆಯುವ ಉದ್ದೇಶದಿಂದ ಶಾಲಾ ಯುವ ಸಂಸತ್‌ ಸ್ಪರ್ಧೆ ಆಯೋಜಿಲಾಗಿದ್ದು, ವಿದ್ಯಾರ್ಥಿಗಳು ಇಂಥಹ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಕೊಂಡು ದೇಶದ ಸತ್ಪ್ರಜೆಯಾಗಲು ಶ್ರಮಿಸಬೇಕೆಂದು ಡಯಟ್‌ ಪಾಚಾರ್ಯ ಝಡ್.ಎಂ. ಖಾಜಿ ಹೇಳಿದರು.

ನಗರದ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಜಿಲ್ಲಾ ಪಂಚಾಯಿತಿ, ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿ ದೆಸೆಯಿಂದಲೇ ಇಂತಹ ಕಾರ್ಯಕ್ರಮಗಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಆತ್ಮವಿಶ್ವಾಸ, ಸಮಸ್ಯೆ ವಿಶ್ಲೇಷಣಾ ಸಾಮರ್ಥ್ಯ, ಪ್ರಜಾಪ್ರಭುತ್ವದ ಅರಿವು, ವಾಕ್ ಚಾತುರ್ಯ, ಚರ್ಚಾ ಕೌಶಲ್ಯ ಸೇರಿದಂತೆ ಹಲವು ಮೌಲ್ಯಗಳು ಬೆಳೆಯುತ್ತವೆ. ಇದರ ಸದುಪಯೋಗ ಪಡೆದುಕೊಂಡು ಭವ್ಯ ಭವಿಷ್ಯ ರೂಪಿಸಿಕೊಳ್ಳಬೇಕೆಂದು ಹೇಳಿದರು.

ಯುವ ಸಂಸತ್‌ ಕಾರ್ಯಕ್ರಮದ ನೋಡಲ್ ಅಧಿಕಾರಿ ಅಮೀರ ಭಾಷಾ ಮಾತನಾಡಿ, ಯುವ ಸಂಸತ್ತು ಕೇವಲ ಸ್ಪರ್ಧೆಯಲ್ಲ, ಇದು ವಿದ್ಯಾರ್ಥಿಗಳನ್ನು ಭವಿಷ್ಯ ಜವಾಬ್ದಾರಿ ನಾಗರೀಕರನ್ನಾಗಿ ರೂಪಿಸುವ ಪ್ರಜಾಪ್ರಭುತ್ವದ ಪಾಠಶಾಲೆಯಾಗಿದೆ. ಇಂದಿನ ಮಕ್ಕಳೇ ನಾಳಿನ ನಾಗರಿಕರಾಗಿದ್ದು, ಸಂಸದೀಯ ವ್ಯವಹಾರಗಳ ರೀತಿಯಲ್ಲಿ ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಹೇಳಿದರು.

ನಂತರ ಕಾರ್ಯಕಲಾಪದಲ್ಲಿ ಸಂತಾಪ ಸೂಚಿ, ಪ್ರಶ್ನೋತ್ತರ ವೇಳೆ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆ, ತುರ್ತು ವಿಷಯದ ಮೇಲೆ ಚರ್ಚೆ, ವಿಧೇಯಕಗಳ ಮಂಡನೆ, ಅಂಗೀಕಾರ ಹೀಗೆ ಹಲವಾರು ಅಂಶಗಳು ನಡೆದವು. ಮುಖ್ಯಮಂತ್ರಿ ಮತ್ತು ಮಂತ್ರಿಮಂಡಲ, ವಿರೋಧ ಪಕ್ಷದ ನಾಯಕರು, ಶಾಸಕರು ಈ ಅಣುಕು ಸಂಸತ್ತಿನಲ್ಲಿ ಪಾಲ್ಗೊಂಡರು. ಬರ ಪರಿಹಾರ, ಸಾರಿಗೆ ದರ ಹೆಚ್ಚಳ, ಡಿಜಿಟಲ್ ದುರುಪಯೋಗ, ಕಬ್ಬಿಗೆ ಬೆಂಬಲ ಬೆಲೆ, ಅನುದಾನ ತಾರತಮ್ಯ, ಸರ್ಕಾರಿ ಶಾಲೆಗಳ ಬಲವರ್ಧನೆ ಹೀಗೆ ಹಲವಾರು ವಿಷಯಗಳ ಮೇಲೆ ಸ್ವಾರಸ್ಯಕರ ಚರ್ಚೆ ನಡೆದವು.

ಸಮಾರಂಭದಲ್ಲಿ ವಿಷಯ ಪರೀವಿಕ್ಷಕ ಕವಿತಾ ಮಠದ, ಜಿಲ್ಲಾ ಉಪಸಮನ್ವಾಧಿಕಾರಿ ಸಿದ್ದಬಸಪ್ಪ ಎಚ್.ಎ. ಝಡ್.ಎ. ಶೀರಳ್ಳಿ, ವಿದ್ಯಾ ಕಾಂಬಳೆ, ದೇವೇಂದ್ರಪ್ಪ ಬಸಮ್ಮನವರ, ಈರಪ್ಪ ಲಮಾಣಿ, ಶೋಭಾ ಜಾಗಟಗೇರಿ, ಅನಸೂಯಾ ರಟಗಲ್ಲ, ನಿಂಗಪ್ಪ ಕಾಟೇನಹಳ್ಳಿ, ರೂಪಾ ಸಜ್ಜನರ ಮತ್ತಿತರರು ಉಪಸ್ಥಿತರಿದ್ದರು,

ಶಿವಬಸವ ಮರಳಿಹಳ್ಳಿ ಸ್ವಾಗತಿಸಿದರು. ಹಜ್ಜು ನದಾಫ್ ಕಾರ್ಯಕ್ರಮ ನಿರೂಪಿಸಿದರು. ಶಂಕರ ಲಮಾಣಿ ವಂದಿಸಿದರು.

ರಾಜ್ಯಮಟ್ಟಕ್ಕೆ ಆಯ್ಕೆ

ಶಿಗ್ಗಾವಿ ತಾಲೂಕಿನ ಹೋತನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸೃಷ್ಠಿ ಅಕ್ಕಿ ಪ್ರಥಮ, ಬ್ಯಾಡಗಿಯ ನವಚೇತನ ವಿದ್ಯಾಲಯದ ಭೂಮಿಕಾ ದ್ವಿತೀಯ ಹಾಗೂ ರಾಣೆಬೆನ್ನೂರು ತಾಲೂಕಿನ ಕಾಕೋಳದ ಸರ್ಕಾರಿ ಪ್ರೌಢಶಾಲೆಯ ಜಯಶ್ರೀ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀಪಾವಳಿಲೀ ರಾಕೆಟ್‌ನಂತೆ ಹಾರಿದ ವಾಯು ಮಾಲಿನ್ಯ!
ಕೌಟುಂಬಿಕ ಕೇಸಲ್ಲಿ ಕುಟುಂಬ ಸಿಲುಕಿಸುವುದು ತರವಲ್ಲ: ಕೋರ್ಟ್‌