ರಜೆಯಲ್ಲಿ ವಿಶೇಷ ತರಗತಿ ನಡೆಸುತ್ತಿದ್ದ ಶಾಲೆಗಳಿಗೆ ಮುತ್ತಿಗೆ

KannadaprabhaNewsNetwork |  
Published : Sep 26, 2025, 01:00 AM IST
ಸರಕಾರ ದಸರಾ ರಜೆ ನೀಡಿದ್ದರೂ ಸಹ ಕಾನೂನು ಬಾಹೀರವಾಗಿ ವಿಶೇಷ ತರಗತಿ, ಪರೀಕ್ಷೆ ನಡೆಸುತ್ತಿದ್ದ ಗದಗ ಲೋಯಲಾ ಕಾನ್ವೇಂಟ, ಸೇಂಟ್ ಜೋನ್ಸ ಶಾಲೆಗಳ ಮೇಲೆ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ದಿಢೀರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರ ರಾಜ್ಯದಲ್ಲಿನ ಎಲ್ಲ ಶಾಲೆ, ಕಾಲೇಜುಗಳಿಗೆ ಸೆ. 20 ರಿಂದ ಅಕ್ಟೋಬರ್ 7ರ ವರೆಗೆ ರಜೆ ಘೋಷಿಸಿದೆ. ಆದರೆ, ಈ ಕ್ರಿಶ್ಚಿಯನ್ ಶಾಲೆಗಳಲ್ಲಿ ಅಧ್ಯಯನ ಮಾಡುವ ಹಿಂದೂ ವಿದ್ಯಾರ್ಥಿಗಳಿಗೆ ತೊಂದರೆ ನೀಡಲು ವಿಶೇಷ ತರಗತಿ, ಪರೀಕ್ಷೆಗಳನ್ನು ನಡೆಸುತ್ತಿವೆ. ಇದು ಹಿಂದೂಗಳ ಧಾರ್ಮಿಕ ಭಾವನೆ ಹತ್ತಿಕ್ಕುವ ಪ್ರಯತ್ನವಾಗಿದೆ.

ಗದಗ: ಸರ್ಕಾರ ದಸರಾ ರಜೆ ನೀಡಿದ್ದರೂ ಸಹ ಕಾನೂನು ಬಾಹೀರವಾಗಿ ವಿಶೇಷ ತರಗತಿ, ಪರೀಕ್ಷೆ ನಡೆಸುತ್ತಿದ್ದ ಇಲ್ಲಿನ ಲೋಯಲಾ ಕಾನ್ವೆಂಟ್, ಸೇಂಟ್ ಜಾನ್ಸ್ ಶಾಲೆಗಳಿಗೆ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಗುರುವಾರ ದಿಢೀರ್‌ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಆಡಳಿತ ಮಂಡಳಿ ಹಾಗೂ ಶ್ರೀರಾಮ ಸೇನೆಯ ಕಾರ್ಯಕರ್ತರ ನಡುವೆ ಕೆಲಕಾಲ ತೀವ್ರ ವಾಗ್ವಾದ ನಡೆಯಿತು. ಶ್ರೀರಾಮ ಸೇನೆಯ ಕಾರ್ಯಕರ್ತರು ಲೋಯಲಾ ಕಾನ್ವೆಂಟ್, ಸೇಂಟ್ ಜಾನ್ಸ್ ಶಾಲೆಯ ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತ ಶ್ರೀರಾಮ ಸೇನೆಯ ಕಾರ್ಯಕರ್ತರ ಕೋಪವನ್ನು ಶಮನಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸ್ಥಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕರೆಯಿಸುವಂತೆ ಪಟ್ಟು ಹಿಡಿದರು. ಆಗ ಪೊಲೀಸರು ಮಧ್ಯಪ್ರವೇಶಿಸಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಶೆಟ್ಟೆಪ್ಪನವರನ್ನು ಲೋಯಲಾ ಕಾನ್ವೆಂಟ್‌ಗೆ ಕರೆಯಿಸಿದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಸಮಾಧಾನಪಡಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ವೇಳೆ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಮಹೇಶ ರೋಖಡೆ ಮಾತನಾಡಿ, ರಾಜ್ಯ ಸರ್ಕಾರ ರಾಜ್ಯದಲ್ಲಿನ ಎಲ್ಲ ಶಾಲೆ, ಕಾಲೇಜುಗಳಿಗೆ ಸೆ. 20 ರಿಂದ ಅಕ್ಟೋಬರ್ 7ರ ವರೆಗೆ ರಜೆ ಘೋಷಿಸಿದೆ. ಆದರೆ, ಈ ಕ್ರಿಶ್ಚಿಯನ್ ಶಾಲೆಗಳಲ್ಲಿ ಅಧ್ಯಯನ ಮಾಡುವ ಹಿಂದೂ ವಿದ್ಯಾರ್ಥಿಗಳಿಗೆ ತೊಂದರೆ ನೀಡಲು ವಿಶೇಷ ತರಗತಿ, ಪರೀಕ್ಷೆಗಳನ್ನು ನಡೆಸುತ್ತಿವೆ. ಇದು ಹಿಂದೂಗಳ ಧಾರ್ಮಿಕ ಭಾವನೆ ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಈ ಕ್ರಿಶ್ಚಿಯನ್ ಶಾಲೆ, ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳ ಧಾರ್ಮಿಕ ಸಂಕೇತಗಳನ್ನು ಕಸಿದುಕೊಂಡು ಕಸದ ಬುಟ್ಟಿಗೆ ಹಾಕುವ ಮೂಲಕ ಅವಮಾನಿಸಲಾಗುತ್ತಿದೆ. ಇದರಿಂದಾಗಿ ಅನೇಕ ಹಿಂದೂ ವಿದ್ಯಾರ್ಥಿಗಳು ಈ ಶಾಲೆಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಇಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಇಲ್ಲಿ ಶಾಲೆಗೆ ಆಗಮಿಸುವ ಹಿಂದೂ ವಿದ್ಯಾರ್ಥಿನಿಯರ ಕೈಯಲ್ಲಿನ ಬಳೆಗಳನ್ನು ತೆಗೆಯಿಸಲಾಗುತ್ತಿದೆ. ಪರಿಣಾಮವಾಗಿ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಹಿಂದೂ ಆಚರಣೆ, ಸಂಪ್ರದಾಯಗಳ ಬಗ್ಗೆ ಅನ್ಯಭಾವನೆ ಮೂಡಿಸುವ ಮೂಲಕ ಹಿಂದೂ ವಿದ್ಯಾರ್ಥಿನಿಯರನ್ನು ಮತಾಂತರಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ್ದ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್. ಶೆಟ್ಟೆಪ್ಪನವರ ಅವರು, ಈ ಶಾಲೆಗಳಿಗೆ ಸರ್ಕಾರಿ ಆದೇಶ ಉಲ್ಲಂಘಿಸಿದ್ದಕ್ಕಾಗಿ ನೊಟೀಸ್ ಜಾರಿ ಮಾಡುವುದಾಗಿ ಹೇಳಿದ ನಂತರ ಶ್ರೀರಾಮ ಸೇನೆಯ ಕಾರ್ಯಕರ್ತರು ಪ್ರತಿಭಟನೆಯನ್ನು ಹಿಂಪಡೆದರು.

ಈ ವೇಳೆ ಶ್ರೀರಾಮ ಸೇನೆಯ ಹಿರಿಯ ಕಾರ್ಯಕರ್ತ ಸತೀಶ ಕುಂಬಾರ, ಅಶೋಕ ಭಜಂತ್ರಿ, ಸಂಜು ಚಟ್ಟಿ, ಮಹೇಶ ಹೊಸೂರು, ಭರತ್ ಲದ್ದಿ, ಕೃಷ್ಣ ಚುರ್ಚಪ್ಪನವರ, ಮಂಜುನಾಥ ಗುಡಿಮನಿ, ಹುಲಿಗೆಪ್ಪ ವಾಲ್ಮೀಕಿ, ಅನಿಲ ಮುಳ್ಳಾಳ, ಈರಪ್ಪ ಹೆಬಸೂರ, ಶಿವು ದಂಡಿನ, ಈರಪ್ಪ ವಾಲ್ಮೀಕಿ, ಶರಣಪ್ಪ ಲಕ್ಕುಂಡಿ, ವಿನಾಯಕ ಬೆಟಗೇರಿ, ಬಸವರಾಜ ಹುಲಕೋಟಿ, ಕುಮಾರ ನಡಗೇರಿ, ವೆಂಕಟೇಶ ದೊಡ್ಡಮನಿ, ರಾಮು ಗೌಡರ ಮುಂತಾದವರಿದ್ದರು.

PREV

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ