ಕನ್ನಡಪ್ರಭ ವಾರ್ತೆ, ತುಮಕೂರುಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆ ರಜೆಯಲ್ಲಿದ್ದ ಶಾಲೆಗಳು ಪುನರಾರಂಭಗೊಂಡಿದ್ದು, ಬೇಸಿಗೆ ರಜೆಯ ಖುಷಿಯಲ್ಲಿದ್ದ ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದರು. ಬೇಸಿಗೆ ರಜೆ ಬಳಿಕ ಆರಂಭವಾಗುತ್ತಿರುವ ಸರ್ಕಾರಿ ಶಾಲೆಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಹಬ್ಬದ ರೀತಿಯಲ್ಲಿ ಶಾಲಾ ಪ್ರಾರಂಭೋತ್ಸವ ನಡೆಸಿ ವಿದ್ಯಾರ್ಥಿಗಳನ್ನು ಶಾಲೆಗಳಿಗೆ ಸ್ವಾಗತಿಸಲಾಯಿತು.
ಕೆಲ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಸಿಹಿ ಹಂಚಿ, ಗುಲಾಬಿ ಹೂ ನೀಡುವ ಮೂಲಕ ಶಾಲೆಗೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು. ನಗರದ ಅಗ್ರಹಾರ, ಮರಳೂರು ದಿಣ್ಣೆ, ಎಂ.ಜಿ. ರಸ್ತೆ. ಆರ್ಯಬಾಲಿಕಾ ಶಾಲೆ, ಮೆಳೇಕೋಟೆ, ಗಂಗಸಂದ್ರ, ಸಿರಾ ಗೇಟ್‌ನ ಉತ್ತರ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಜಿಲ್ಲೆಯ ೧೦ ತಾಲೂಕುಗಳಲ್ಲೂ ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣದೊಂದಿಗೆ ಶಾಲೆಗಳನ್ನು ಪ್ರಾರಂಭಿಸಲಾಯಿತು. ಕೆಲ ಖಾಸಗಿ ಶಾಲೆಗಳಲ್ಲಿ ಇಂದು ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶಾಲೆಗಳನ್ನು ಆರಂಭಿಸಲಾಯಿತು. ಎಲ್ಲ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ಶಾಲೆಗಳನ್ನು ನಡೆಸುವ ಜತೆಗೆ ಯೋಗ್ಯವಲ್ಲದ ಕೊಠಡಿಗಳನ್ನು ತರಗತಿಗಳಿಗೆ ಬಳಸದೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಇಲಾಖೆಯ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಈಗಾಗಲೇ ಇಲಾಖೆಯಿಂದ ವಿತರಿಸಲಾಗಿರುವ ಉಚಿತ ಪಠ್ಯಪುಸ್ತಕ, ಸಮವಸ್ತ್ರವನ್ನು ಬಳಕೆ ಮಾಡಿಕೊಳ್ಳುವಂತೆಯೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪೋಷಕರಿಗೆ ಮನವಿ ಮಾಡಿದ್ದಾರೆ.