- ಜಿ.ಬಿ.ವಿನಯ ಕುಮಾರ್ ಸಲಹೆ । ಯರಲಬನ್ನಿಕೋಡಲ್ಲಿ ಕರಿಯಮ್ಮ, ಮಾತಂಗಮ್ಮ ಪ್ರತಿಷ್ಠಾಪನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ದೇವಸ್ಥಾನಗಳನ್ನು ಕಟ್ಟುವುದರ ಜೊತೆ ಜೊತೆಗೆ ಶಾಲೆಗಳನ್ನು ನಿರ್ಮಿಸಬೇಕು, ಉತ್ತಮ ಗ್ರಂಥಾಲಯಗಳನ್ನು ಪ್ರಾರಂಭಿಸಬೇಕು ಎಂದು ಇನ್‌ಸೈಟ್ ಐಎಎಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಹೇಳಿದರು.ತಾಲೂಕಿನ ಯರಲಬನ್ನಿಕೋಡು ಗ್ರಾಮದಲ್ಲಿ ಕರಿಯಮ್ಮ ದೇವಿ, ಶ್ರೀ ಮಾತಂಗಮ್ಮ ದೇವಾಲಯದ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ಕರಿಗಲ್ಲು ಸ್ಥಾಪನೆ ಮತ್ತು ನೂತನ ಗೋಪುರ ಕಳಸಾರೋಹಣ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಅವರು ಮಾತನಾಡಿದರು.
ಪುಸ್ತಕಗಳ ಖರೀದಿಗೆ ಹಣ ನೆರವು:ಗ್ರಾಮಸ್ಥರು ದೇವಸ್ಥಾನಗಳನ್ನು ನಿರ್ಮಿಸುವಲ್ಲಿ ತೋರುವ ಶ್ರದ್ಧೆ- ಕಾಳಜಿಯನ್ನು ಉತ್ತಮ ಸುಸಜ್ಜಿತ ಶಾಲೆಗಳನ್ನು ನಿರ್ಮಿಸುವಲ್ಲಿಯೂ ತೋರಬೇಕು. ಪ್ರತಿಯೊಂದು ಗ್ರಾಮದಲ್ಲಿ ಉತ್ತಮ ಗ್ರಂಥಾಲಯಗಳನ್ನು ಸ್ಥಾಪಿಸಬೇಕು, ಗ್ರಂಥಾಲಯಕ್ಕೆ ಪಸ್ತಕಗಳ ಖರೀದಿಗೆ ನಾನು ಹಣ ಕೊಡುತ್ತೇನೆ ಎಂದ ಅವರು, ತಾನು ಶಿಕ್ಷಣ ಕ್ಷೇತ್ರದಿಂದ ಬಂದಿರುವುದರಿಂದ ಈ ಮಾತು ಅನಿವಾರ್ಯವಾಗಿ ಹೇಳಬೇಕಾಗಿದೆ ಎಂದರು.
ನಮ್ಮ ಸಂಸ್ಥೆ ಈ ಬಾರಿಯೂ ಯುಪಿಎಸ್ ಪರೀಕ್ಷೆಯಲ್ಲಿ ಟಾಪರ್ ಆಗಿದೆ. 24ನೇ ರ‍್ಯಾಂಕ್ ಪಡೆದಿರುವ ರಂಗ ಮಂಜಪ್ಪ ಅವರು ನಮ್ಮ ಸಂಸ್ಥೆ ವಿದ್ಯಾರ್ಥಿ ಎಂದು ಹೇಳಲಿಕ್ಕೆ ನನಗೆ ಹೆಮ್ಮ ಎನಿಸುತ್ತದೆ ಎಂದು ವಿನಯಕುಮಾರ ಹೇಳಿದರು.ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲಿ ಮಾರಿಹಬ್ಬಕ್ಕೆ ಕೋಟಿಗೂ ಅಧಿಕ ರು. ವೆಚ್ಚ ಮಾಡುತ್ತಾರೆ. ಚುನಾವಣೆಗೆ ಲಕ್ಷಗಟ್ಟಲೇ ಹಣ ಖರ್ಚು ಮಾಡುತ್ತಾರೆ. ದೇವಸ್ಥಾನ ನಿರ್ಮಾಣಕ್ಕೆ ₹2 ರಿಂದ ₹3 ಕೋಟಿ ಖರ್ಚು ಮಾಡುತ್ತಾರೆ. ಆದರೆ, ಶಾಲೆಗಳ ರಿಪೇರಿಗೆ ದುಡ್ಡು ಕೊಡ್ರಪ್ಪ ಎಂದರೆ ಯಾರೂ ಕೊಡೋದಿಲ್ಲ. ದೇವಸ್ಥಾನಗಳನ್ನು ನಿರ್ಮಿಸುವ ಗ್ರಾಮಗಳಲ್ಲಿ ಇನ್ನುಮುಂದೆ ಯಾರೂ ಪೊಲೀಸ್ ಸ್ಟೇಷನ್, ಕೋರ್ಟ್‌ಗಳಿಗೆ ಹೋಗಬಾರದು ಎಂದು ಮನವಿ ಮಾಡಿದರು.
ಗ್ರಾಮದ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಗ್ರಾಮವನ್ನು ಚರಂಡಿಮುಕ್ತ ಮಾಡುವುದಾಗಿಯೂ ಹೇಳಿದರು.ಹಿರೇಕಲ್ಮಠದ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚಿಂತೆಗಳನ್ನು ಮರೆಸುವ ಶಕ್ತಿ ದೇವಾಲಯಗಳು, ಮಠಗಳಿಗಿದೆ. ಶಾಲೆಗಳು ಬಹಳಷ್ಟಿವೆ. ಆದರೆ ಮಕ್ಕಳ ಸಂಖ್ಯೆ ಕಡಿಮೆ ಇದೆ. ಸರ್ಕಾರಿ ಶಾಲೆಗಳು ಅನಾದರಕ್ಕೆ ಒಳಗಾಗಿವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಕಳಪೆ ಫಲಿತಾಂಶ ಬರುತ್ತದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ರಾಮಘಟ್ಟದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೆ.ಎಚ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಕೆ.ಜಿ. ಬಸವನಗೌಡ, ಮಾಜಿ ಅಧ್ಯಕ್ಷ ಎಚ್.ಆರ್. ಲಕ್ಷ್ಮಣ್ ರಾವ್, ದೀಪಾ ಜಗದೀಶ್ ಮಾತನಾಡಿದರು.ಗ್ರಾಪಂ ಸದಸ್ಯ ಎಂ.ಟಿ. ಸಿದ್ದೇಶ್ ಸ್ವಾಗತಿಸಿ. ಶಿಕ್ಷಕ ಬಸವನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಮಲ್ಲೇಶ್ ನಿರೂಪಿಸಿದರು. ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆಂಗಲಹಳ್ಳಿ ಷಣ್ಮುಖಪ್ಪ, ಬಿಜೆಪಿ ಜಿಲ್ಲಾ ಮುಖಂಡ ದೇವರಾಜ್ ನೆಲಹೊನ್ನೆ, ಚಂದ್ರಶೇಖರಪ್ಪ, ಎಚ್.ಎ. ಗದ್ದಿಗೇಶ್, ಮರುಳಸಿದ್ದಪ್ಪ ಉಪಸ್ಥಿತರಿದ್ದರು.
- - -(ಕೋಟ್) ಭಕ್ತಿ, ಸಂಸ್ಕೃತಿ ಉಳಿಯಬೇಕಾದರೆ ದೇವಸ್ಥಾನಗಳ ಅಗತ್ಯ ಕಂಡುಬರುತ್ತದೆ. ದೇವಸ್ಥಾನಗಳು ನೆಮ್ಮದಿಯ ತಾಣಗಳು. ಕೆಲವು ದೇವಸ್ಥಾನಗಳ ನಿರ್ವಹಣೆ ಸರಿಯಾಗಿ ಮಾಡುವುದೇ ಇಲ್ಲ. ದೇಗುಲಗಳಲ್ಲಿ ಸ್ವಚ್ಛತೆ, ಶ್ರದ್ಧೆ ಮೂಡಿಸುವ ವಾತಾವರಣ ನಿರ್ಮಿಸಬೇಕು.
- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ- - -
-4ಎಚ್.ಎಲ್.ಐ3:ಯರಲಬನ್ನಿಕೋಡು ಗ್ರಾಮದಲ್ಲಿ ನಡೆದ ಧರ್ಮಸಭೆಯನ್ನು ಶಾಸಕ ಡಿ.ಜಿ. ಶಾಂತನಗೌಡ ಉದ್ಘಾಟಿಸಿದರು. ಜಿ.ಬಿ. ವಿನಯ್‌ಕುಮಾರ್, ಎಂ.ಪಿ. ರೇಣುಕಾಚಾರ್ಯ, ಮಠಾಧೀಶರು, ಗಣ್ಯರು ಇದ್ದರು.