ಶಾಲೆಗಳು ದೇವಾಲಯಗಳಾಗಲಿ: ಸಂಸದ ಈ.ತುಕಾರಾಂ

KannadaprabhaNewsNetwork |  
Published : Nov 22, 2025, 02:30 AM IST
ಸ | Kannada Prabha

ಸಾರಾಂಶ

ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆತು ಅವರು ದೇಶದ ಆಸ್ತಿಯಾಗಬೇಕು.

ಸಂಡೂರು: ಶಾಲೆಗಳು ದೇವಾಲಯಗಳಾಗಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆತು ಅವರು ದೇಶದ ಆಸ್ತಿಯಾಗಬೇಕು. ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಎಲ್‌ಕೆಜಿಯಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಗುಣಾತ್ಮಕ ಶಿಕ್ಷಣವನ್ನು ದೊರಕುವಂತೆ ಮಾಡುವ ಮೂಲಕ ವಿದ್ಯಾದೇವತೆ ಸರಸ್ವತಿಯ ಋಣ ತೀರಿಸುವ ಕೆಲಸ ಮಾಡೋಣ ಎಂದು ಸಂಸದ ಈ. ತುಕಾರಾಂ ತಿಳಿಸಿದರು.ಪಟ್ಟಣದಲ್ಲಿ ಕೆಕೆಆರ್‌ಡಿಬಿ ಅನುದಾನ ₹3 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಕುಮಾರಸ್ವಾಮಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದೆಹಲಿಯ ಕೇಜ್ರಿವಾಲ್ ಶಾಲಾ ಮಾದರಿಯಲ್ಲಿ 3 ಕೋಟಿ ವೆಚ್ಚದಲ್ಲಿ ಜಿ+1 ಮಾದರಿಯಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ. ಶಾಲಾ ಕಂಪೌಂಡ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲು ₹47 ಲಕ್ಷ ಅನುದಾನ ಒದಗಿಸಲಾಗುತ್ತಿದೆ. ಎಸ್‌ಕೆಎಂಇ ಲಿಮಿಟೆಡ್ ಕಂಪನಿಯವರು ತಮ್ಮ ಸಿಎಸ್‌ಆರ್ ಯೋಜನೆ ಅಡಿಯಲ್ಲಿ ₹25 ಲಕ್ಷ ವೆಚ್ಚದಲ್ಲಿ ಶಾಲೆಗೆ ಬೇಕಾದ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಇದು ನನ್ನ ಸ್ನೇಹಿತರು ಓದಿದ ಶಾಲೆ. ನಾನು ಅಭ್ಯಾಸ ಮಾಡಿದ ಯಶವಂತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ₹2.30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವೆ ಎಂದರು.

ಶಿಕ್ಷಣ, ಆರೋಗ್ಯ, ರಸ್ತೆ, ಶುದ್ಧ ಕುಡಿಯುವ ನೀರು ಪೂರೈಕೆ ನಮ್ಮ ಮೊದಲ ಆದ್ಯತೆಯಾಗಿದ್ದು, ಅವುಗಳನ್ನು ಪೂರೈಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೀಗ ತಾಲೂಕಿನಲ್ಲಿ 79 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿದ್ದು, ಇನ್ನು 43 ಶಾಲೆಗಳಿಗೆ ಮಂಜೂರಾತಿ ದೊರೆತಿದೆ. ನಾವು ಚಿಕ್ಕವರಿದ್ದಾಗ ಶಿಕ್ಷಣ ಪಡೆಯಲು ನಾವು ಅನುಭವಿಸಿದ ತೊಂದರೆಗಳನ್ನು ಇಂದಿನ ವಿದ್ಯಾಥಿಗಳು ಅನುಭವಿಸಬಾರದು. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಿಗೆ ಅಗತ್ಯವಾಗಿರುವ ಮೂಲ ಸೌಕರ್ಯವನ್ನು ಒದಗಿಸುವ ಮೂಲಕ ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಲ್ಲಿಯೇ ತಾಲೂಕನ್ನು ಮಾದರಿ ಕ್ಷೇತ್ರವನ್ನಾಗಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕಿ ಅನ್ನಪೂರ್ಣ ಈ ತುಕಾರಾಂ ಮಾತನಾಡಿ, ಸುಸಂಸ್ಕೃತ ಸಮಾಜ ನಿರ್ಮಾಣ ಗುಣಾತ್ಮಕ ಶಿಕ್ಷಣ ಹಾಗೂ ಉತ್ತಮ ಗುರುಗಳು ಅವಶ್ಯಕ. ಅಕ್ಷರ ಸಂಸ್ಕೃತಿಯನ್ನು ಬೆಳೆಸಿದ ಶಾಲೆ ಶ್ರೀಕುಮಾರಸ್ವಾಮಿ ಶಾಲೆ. ಸಂಸದರು ಅನುದಾನ ತಂದು ತಾವು ಓದಿದ, ತಮ್ಮ ಸ್ನೇಹಿತರು ಓದಿದ ಶಾಲೆಯನ್ನು ಅಭಿವೃದ್ಧಿ ಪಡಿಸಿರುವುದಲ್ಲದೆ, ನಾನು ಓದಿದ ಕಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ₹2 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಂಡಿದ್ದಾರೆ. ನಾನು ಶಾಸಕಿಯಾಗಿ ಅಧಿಕಾರ ಸ್ವೀಕರಿಸಿದಾಗ, ತಾಲ್ಲೂಕಿಗೆ ಸರ್ಕಾರಿ ನರ್ಸಿಂಗ್ ಕಾಲೇಜು ಸ್ಥಾಪನೆಯ ಬೇಡಿಕೆ ಮಂಡಿಸಿದ್ದೆ. ನಾನು ಶಾಸಕಿಯಾಗಿ ಒಂದು ವರ್ಷವಾಗುತ್ತಿದೆ. ಈಗ ತಾಲ್ಲೂಕಿಗೆ ಸರ್ಕಾರಿ ನರ್ಸಿಂಗ್ ಕಾಲೇಜು ಮಂಜೂರಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜು ಆರಂಭವಾಗಲಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ ಅವರು ಸ್ವಾಗತಿಸಿದರು. ಮಂಜುನಾಥ್ ಹಾದಿಮನಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪಾ ತಿಪ್ಪೇಸ್ವಾಮಿ, ಪುರಸಭೆ ನಿಕಟಪೂರ್ವ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಸದಸ್ಯರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಏಕಾಂಬ್ರಪ್ಪ, ಎಸ್‌ಕೆಎಂಇ ಕಂಪನಿಯ ಎಜಿಎಂ ಚಂದ್ರಕಾಂತ್ ಪಾಟೀಲ್, ಮಾಳವಿಕ ರೋಣ, ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ ಕರಿಶೆಟ್ಟಿ, ಪಿಡಬ್ಲುಡಿ ಎಇಇ ಪ್ರಕಾಶ್ ನಾಯ್ಕ್, ಗುತ್ತಿಗೆದಾರರಾದ ನಾಗರಾಜ, ಮುಖಂಡರಾದ ಜಿಲಾನ್ ಸಾಬ್, ಗಡಂಬ್ಲಿ ಚನ್ನಪ್ಪ, ತುಮಟಿ ಅಂಜಿನಪ್ಪ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ