ಶಿವಕುಮಾರ ಕುಷ್ಟಗಿ
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 1117 ಶಾಲೆಗಳಲ್ಲಿ ಗುರುವಾರ ಪ್ರಾರಂಭೋತ್ಸವ ಜರುಗಲಿವೆ. ಒಟ್ಟು 698 ಸರ್ಕಾರಿ ಶಾಲೆಗಳಿದ್ದು, ಅವುಗಳಲ್ಲಿ 115 ಸರ್ಕಾರಿ ಹೈಸ್ಕೂಲ್‌ಗಳು, 583 ಪ್ರಾಥಮಿಕ ಶಾಲೆಗಳಿವೆ. ಇನ್ನುಳಿದ 419 ಖಾಸಗಿ ಶಾಲೆಗಳಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ವಿಶೇಷ ಗಮನ ನೀಡಲಾಗಿದೆ.
ಜಿಲ್ಲೆಯಲ್ಲಿ ಕಳೆದ ಸಾಲಿನ ದಾಖಲಾತಿ ಮತ್ತು ಈ ವರ್ಷ ಹೊಸದಾಗಿ ಒಂದನೇ ತರಗತಿಗಳಿಗೆ ಬರಬಹುದಾದ ಮಕ್ಕಳ ಸಂಖ್ಯೆ ಸೇರಿ ಒಟ್ಟು 1,83,796 ಮಕ್ಕಳು ದಾಖಲಾತಿಯಾಗಿದೆ. ಈ ಎಲ್ಲ ಮಕ್ಕಳು ಶಾಲೆಗೆ ಹಾಜರಾಗುವಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಶಾಲಾ ಶಿಕ್ಷಕರು, ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತ ವಿಶೇಷ ಅಭಿಯಾನವನ್ನೇ ನಡೆಸಿದೆ.ವಿಶೇಷ ಅಭಿಯಾನ: ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿಯೇ ವಿಶೇಷ ಸಭೆಯನ್ನು ನಡೆಸಿ, ಶಾಲೆಗಳಲ್ಲಿ ಕಲಿಕಾ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕನಿಷ್ಠ ಒಂದು ಕೊಠಡಿಯನ್ನಾದರೂ ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇದು ಮಾದರಿ ಕೊಠಡಿಯಾಗಿದ್ದು, ವಿಶೇಷ ಚಿತ್ರಗಳು, ಮಕ್ಕಳ ಕಲಿಕಾ ವಿಷಯಕ್ಕೆ ಬೇಕಾದ ಪೂರಕ ಅಂಶಗಳನ್ನು ಈ ಕೊಠಡಿಗಳು ಹೊಂದಿದೆ. ಸದ್ಯ ಇದೇ ಕೊಠಡಿಗಳೇ ಆಕರ್ಷಣೆಯ ಕೇಂದ್ರಬಿಂದುವಾಗಿವೆ.
ಇಂದು ಶಿಕ್ಷಕರು ಬರುತ್ತಾರೆ: ಶಾಲಾ ಪ್ರಾರಂಭೋತ್ಸವ ಮೇ 29ರಂದು ನಡೆಯುತ್ತಿದ್ದರೂ ಗುರುವಾರ ಕೇವಲ ಶಿಕ್ಷಕರು ಮಾತ್ರ ಶಾಲೆಗೆ ಬರುತ್ತಾರೆ. ಮೇ 30ರಿಂದ ಮಕ್ಕಳು ಶಾಲೆಗೆ ಆಗಮಿಸಲಿದ್ದು, ಜಿಲ್ಲೆಯ ಕೆಲವಾರು ಸರ್ಕಾರಿ ಶಾಲೆಗಳು ಮತ್ತು ಕೆಲವು ಖಾಸಗಿ ಶಾಲೆಗಳು ಮಕ್ಕಳ ಸ್ವಾಗತಕ್ಕೆ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಜಿಲ್ಲೆಯಾದ್ಯಂತ ಮಕ್ಕಳ ಶಾಲಾ ಸ್ವಾಗತ ಹಬ್ಬದ ರೀತಿಯಲ್ಲಿ ನಡೆಯುತ್ತಿದೆ.
ಸುರಕ್ಷತಾ ಕ್ರಮ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಫೆಬ್ರವರಿಯಲ್ಲಿಯೇ ನಡೆಸಿದ ವಿಶೇಷ ಸರಣಿ ಸಭೆಯಿಂದಾಗಿ ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿಯೂ ಶೌಚಾಲಯ ಮತ್ತು ಕಲಿಕಾ ವಾತಾವರಣವನ್ನು ಹೊಂದಿರುವ ಒಂದು ಕೊಠಡಿ ನಿರ್ಮಾಣ ಮಾಡಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ವಿಶೇಷ ಗಮನ ನೀಡಲಾಗಿದೆ. ಹಳೆಯ ಕಟ್ಟಡದಲ್ಲಿ ನಡೆಯುವ ಶಾಲೆಗಳಲ್ಲಿ ಪ್ರತ್ಯೇಕ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜೂ. 2ರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆಗಳಿಗೆ ತೆರಳಿ ಅವರನ್ನು ಮರಳಿ ಶಾಲೆಗೆ ಕರೆತರುವ ವಿಶೇಷ ಅಭಿಯಾನ ನಡೆಸಲಾಗುತ್ತಿದೆ ಎಂದು ಗದಗ ಡಿಡಿಪಿಐ ಆರ್.ಎಸ್. ಬುರುಡಿ ಹೇಳಿದರು.