ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ
ವಿಜ್ಞಾನ, ವೈಚಾರಿಕತೆ ಎಂದರೆ ದೇವರ ವಿರುದ್ಧ ಅಲ್ಲ ಎಂದು ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದರು.
ಶನಿವಾರ ಪಟ್ಟಣದ ಡಿಸಿಎಂಸಿ ಶಾಲೆ ಆವರಣದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘ ಬೆಳ್ಳಿ ಹಬ್ಬದ ಪ್ರಯುಕ್ತ ಆಯೋಜನೆ ಮಾಡಿದ್ದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆಯೊಂದಿಗೆ ಪವಾಡಗಳ ರಹಸ್ಯ ಬಯಲು ಮಾಡಿ ಮಾತನಾಡಿದರು. ನಾವು ಕಂಡು ಹಿಡಿದ ಹೊಸ ಹೊಸ ತಂತ್ರಜ್ಞಾನಗಳು ಪ್ರತಿ ನಿತ್ಯ ಅಪ್ ಡೇಟ್ ಆಗುತ್ತಿವೆ. ಆದರೆ, ನಮ್ಮ ಮನಸ್ಸು ಮಾತ್ರ ಅಪ್ ಡೇಟ್ ಆಗುತ್ತಿಲ್ಲ. ಎಲ್ಲಾ ಕಡೆ ಮೌಢ್ಯದ ಡಂಗಲ್ ಕಾಣುತ್ತಿದ್ದೇವೆ. ದೇವರ ಬಗ್ಗೆ ನಂಬಿಕೆ ಇರಲಿ. ಆದರೆ, ಮೂಢನಂಬಿಕೆಗಳು ಬೇಡ. ಇನ್ನೊಬ್ಬರಿಗೆ ನೋವಾಗದಂತೆ ಮಾನವೀಯತೆಯಿಂದ ಬದುಕುವುದನ್ನು ಕಲಿಯೋಣ ಎಂದರು.ಮೌಢ್ಯತೆ ಎಂಬುದು ನಿಂತ ನೀರಾದರೆ, ವೈಚಾರಿಕತೆ ಹರಿವ ನೀರಿನಂತೆ. ಮನೆಯ ವಾಸ್ತು ನೋಡುವುದಕ್ಕಿಂತ ಮೊದಲು ಮನಸ್ಸಿನ ವಾಸ್ತುಗಳನ್ನು ಸರಿಪಡಿಸಿಕೊಳ್ಳಿ. ಪಂಚಾಂಗ ನೋಡಿ ಬದುಕುವುದಕ್ಕಿಂತ ನಮ್ಮ ಪಂಚ ಅಂಗಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶ್ಯಾಮಲ ಸತೀಶ್ ಮಾತನಾಡಿ, ಹಲವಾರು ಮೂಢ ನಂಬಿಕೆಗಳು ನಮ್ಮ ಸಮಾಜದಲ್ಲಿ ಈಗಲೂ ಇದೆ. ಅನೇಕ ಸಂದರ್ಭದಲ್ಲಿ ನಂಬಿಕೆ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಹುಲಿಕಲ್ ನಟರಾಜ್ ಪವಾಡ ಬಯಲು ಮಾಡಿ ಮೂಢ ನಂಬಿಕೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮೂಢನಂಬಿಕೆಗಳನ್ನು ಕಡಿಮೆ ಮಾಡೋಣ ಎಂದರು.