ಪಾಂಡವಪುರ: ತಾಲೂಕಿನ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನದ ದಿನದ ಅಂಗವಾಗಿ ಶುಕ್ರವಾರ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.
ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಶಾಲೆಯಲ್ಲಿ ಮಕ್ಕಳು ತಯಾರಿಸಿಕೊಂಡು ಬಂದಿದ್ದ ವಿಜ್ಞಾನ ವಸ್ತು ಪ್ರದರ್ಶನದ ಮಾದರಿಗಳನ್ನು ವೀಕ್ಷಣೆ ಮಾಡಿ ಮಕ್ಕಳಿಂದ ಮಾಹಿತಿ ಪಡೆದ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳಿಗೆ ಚಿಕ್ಕವಯಸ್ಸಿನಿಂದಲೇ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಶಾಲೆಗಳಲ್ಲಿ ಪ್ರತಿವರ್ಷವು ವಿಜ್ಞಾನ ವಸ್ತು ಪ್ರದರ್ಶನವನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಬಿಜಿಎಸ್ ಎಲ್ಲಾ ಶಾಲೆಗಳಲ್ಲೂ ಪ್ರತಿವರ್ಷ ವಿಜ್ಞಾನ ವಸ್ತು ಪ್ರದರ್ಶನ ಮಾಡಲಾಗುತ್ತಿದೆ. ಪೋಷಕರು ಹಾಗೂ ಶಿಕ್ಷಕರ ಸಹಕಾರದಿಂದ ಕಾರ್‍ಯಕ್ರಮ ಯಶಸ್ಸಿಯಾಗಿದೆ. ಇಂಥ ಕಾರ್‍ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ಮಕ್ಕಳ ಜೀವನವು ವೈಜ್ಞಾನಿಕವಾದ ರೂಪುರೇಷಗಳನ್ನು ಪಡೆದು ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಲೆಂದು ತಿಳಿಸಿದರು.ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಿ.ಆರ್.ರಮೇಶ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳನ್ನು ಶಾಲಾ ಹಂತದಲ್ಲಿ ನಡೆಸುವುದರಿಂದ ಮಕ್ಕಳ ಮುಂದಿನ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜತೆಗೆ ಮಕ್ಕಳಲ್ಲಿ ಧೈರ್ಯ, ಆತ್ಮಸ್ಥೈರ್ಯವು ಹೆಚ್ಚುತ್ತದೆ ಎಂದರು.