ರಾಣಿಬೆನ್ನೂರು: ನಗರದಲ್ಲಿ ಆದಷ್ಟು ಶೀಘ್ರದಲ್ಲಿ ಸೈನ್ಸ್ ಪಾರ್ಕ್ ತೆರೆದು ವಿದ್ಯಾರ್ಥಿಗಳಿಗೆ ವಿಜ್ಞಾನ ಹಾಗೂ ಖಗೋಳಶಾಸ್ತ್ರದ ಕುರಿತು ಪ್ರತ್ಯಕ್ಷ ಅನುಭವ ಮೂಡಿಸಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕು ಘಟಕ, ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ, ಶಿಕ್ಷಕಿಯರ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉದ್ಘಾಟನೆ, ನೂತನ ಪದಾಧಿಕಾರಿಗಳ ಸೇವಾ ಸ್ವೀಕಾರ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕಿಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶದಲ್ಲಿ ಪುರುಷ ಪ್ರಧಾನ ಸಮಾಜ ವ್ಯವಸ್ಥೆಯಿದ್ದಾಗ ಸಾವಿತ್ರಿಬಾಯಿ ಪುಲೆ ಮಹಿಳೆಯರಿಗೆ ಶಿಕ್ಷಣ ಕೊಡಿಸಲು ಹೋರಾಟ ಮಾಡಿದರು. ಇಂದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಮಹಿಳೆಯರಿಗೆ ಪ್ರಾಧಾನ್ಯ ದೊರಕುತ್ತಿದೆ. ನಮ್ಮ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಪ್ರೌಢಶಾಲಾ ಹಂತದಲ್ಲಿಯೇ ಲೈಂಗಿಕ ಹಾಗೂ ನೀತಿ ಶಿಕ್ಷಣ ಕೊಡಿಸಲು ಮುಂದಾಗಿದ್ದಾರೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಕರ ಲಾಠಿ ಹೋಗಿ ಪೊಲೀಸರ ಲಾಠಿ ಪರಿಸ್ಥಿತಿ ಬಂದಿದೆ. ಇಂತಹ ಸಮಾಜಕ್ಕೆ ಅವಕಾಶ ಮಾಡಿಕೊಡದೆ ಮಕ್ಕಳಿಗೆ ಉತ್ತಮ ನಡತೆ, ಸಂಸ್ಕಾರ ನೀಡುವುದು ಅವಶ್ಯವಾಗಿದೆ. ಮಕ್ಕಳಿಗೆ ಮಾತೃ ಭಾಷೆ ಜತೆಗೆ ಔದ್ಯೋಗಿಕ ಭಾಷೆ ಅವಶ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಇಂಗ್ಲಿಷ್ ಭಾಷೆ ಕಲಿಸಲು ಶಿಕ್ಷಣ ಮಂತ್ರಿಗಳು ಈಗಾಗಲೆ ಚಾಲನೆ ನೀಡಿದ್ದಾರೆ. ಭಾರತ ಅಭಿವೃದ್ಧಿ ಹೊಂದಿದ ದೇಶವಾಗಲು ಶಿಕ್ಷಣಕ್ಕೆ ಒತ್ತು ಕೊಡಬೇಕು. ಈ ನಿಟ್ಟಿನಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಕ್ಷೇತ್ರದ ಅಭ್ಯುದಯಕ್ಕೆ ವಿಶೇಷ ಒತ್ತು ನೀಡಿದ್ದೇನೆ ಎಂದರು.ಲಿಂಗದಹಳ್ಳಿ ಹಿರೇಮಠದ ಡಾ. ವೀರಭದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಎನ್.ಆರ್. ಚೂಡಾಮಣಿ ಅಧ್ಯಕ್ಷತೆ ವಹಿಸಿದ್ದರು.
ಪಿಕೆಕೆ ಇನಿಷಿಯೇಟಿವ್ಸ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ ಮಾತನಾಡಿ, ಸಂಘಟನೆ ಒಗ್ಗಟ್ಟಾಗಿ ನಡೆದಾಗ ಮಾತ್ರ ಸಮಾನತೆ ಸಿಗಲು ಸಾಧ್ಯ. ಎಲ್ಲ ಮಹಿಳೆಯರಿಗೆ ಇರುವ ಹಠವನ್ನು ರೂಢಿಸಿಕೊಂಡಾಗ ಮಾತ್ರ ಜಯ ಗಳಿಸಲು ಸಾಧ್ಯ. ಹೆಣ್ಣು ಮಕ್ಕಳಿಗೆ ತಾರತಮ್ಯ ಮಾಡದೇ ಚೆನ್ನಾಗಿ ಓದಿಸಬೇಕು. ಶಿಕ್ಷಕರು ಪ್ರತಿ ದಿನ ಸಾಧಕರನ್ನು ಗುರುತಿಸುವ ಕೆಲಸ ಮಾಡಬೇಕು ಎಂದರು.ಮಹಿಳಾ ಆರೋಗ್ಯ ವಿಷಯ ಕುರಿತು ಸ್ತ್ರೀರೋಗ ತಜ್ಞೆ ಡಾ. ಹೇಮಾ ಪಾಟೀಲ ಉಪನ್ಯಾಸ ನೀಡಿದರು.
ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಗೌರವ ಅಧ್ಯಕ್ಷೆ ಕಮಲವ್ವ ಬಣಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಹಾವೇರಿ ಡಯಟ್ ಕಾಲೇಜಿನ ಉಪನ್ಯಾಸಕಿ ವಿಜಯಾ ಪಾಟೀಲ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಂಘದ ಅಧ್ಯಕ್ಷ ಮಲ್ಲೇಶ ಕರಿಗಾರ, ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಶ ಕೋಟಿಹಾಳ, ಬಿ.ಪಿ. ಶಿಡೇನೂರ, ಇಸ್ಮಾಯಿಲ್ ಐರಣಿ, ಸಹನಾ ದೈವಜ್ಞ, ಎಂ.ಸಿ. ಬಲ್ಲೂರ, ಎ.ಎ. ಮುಲ್ಲಾ, ವಿ.ಎಚ್. ಕೆಂಚರಡ್ಡಿ, ಎಂ.ಎನ್. ರಡ್ಡಿ, ಬಸವರಾಜ ನಾಯಕ ಮತ್ತಿತರರಿದ್ದರು.