ವಿಜ್ಞಾನ, ಆಧ್ಯಾತ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ: ಎಸ್.ಸೋಮನಾಥ್

KannadaprabhaNewsNetwork |  
Published : Feb 21, 2024, 02:01 AM IST
20ಕೆಎಂಎನ್ ಡಿ24 | Kannada Prabha

ಸಾರಾಂಶ

ಚಂದ್ರಯಾನ-3ರ ಯಶಸ್ಸಿನೊಂದಿಗೆ ಚರಿತ್ರೆ ಸೃಷ್ಟಿಸಿದ ಇಸ್ರೋ ಸಂಸ್ಥೆ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ಶಾಲು, ಹಾರ, ಮೈಸೂರುಪೇಟ ಹಾಕಿ, ಪ್ರಶಸ್ತಿ ಪದಕವನ್ನೊಳಗೊಂಡ ಸ್ಮರಣಿಕೆ, ಶ್ರೀರಾಮನ ಮೂರ್ತಿ ಸೇರಿದಂತೆ 5 ಲಕ್ಷ ರು. ನಗದು ನೀಡಿ ಅತ್ಯಂತ ಗೌರವದಿಂದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲವಿಜ್ಞಾನ ಮತ್ತು ಆಧ್ಯಾತ್ಮ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಾಗಾಗಿ ಉಪಗ್ರಹ ತಯಾರಿಕೆ ಮತ್ತು ಉಡಾವಣೆ ಕಾರ್ಯ ವಿಜ್ಞಾನವೇ ಆದರೂ ಇದರ ಯಶಸ್ವಿಗೆ ಸಾರ್ಥಕತೆಯನ್ನು ಕೋರಿ ಆಧ್ಯಾತ್ಮ ಮತ್ತು ದೇವರ ಅನುಗ್ರಹಕ್ಕಾಗಿ ದೇವಸ್ಥಾನಕ್ಕೂ ಹೋಗಿದ್ದೆವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್. ಸೋಮನಾಥ್ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಭವನದಲ್ಲಿ ಮಂಗಳವಾರ ನಡೆದ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ 11ನೇ ವಾರ್ಷಿಕ ಪಟ್ಟಾಭೀಷೆಕ ಮಹೋತ್ಸವದಲ್ಲಿ ಮಾತನಾಡಿ, ನಮ್ಮೆಲ್ಲರ ಆಲೋಚನೆ ಶ್ರಮ ಹಾಗೂ ದೇವರ ಅನುಗ್ರಹದಿಂದ ವಿಶ್ವವೇ ನಿಬ್ಬರಗಾಗುವಂತಹ ಕಾರ್ಯ ಸಾಧನೆ ನಮ್ಮಿಂದ ನೆರವೇರಿದೆ. ನಿರಂತರ ಪರಿಶ್ರಮದಿಂದ ಮಾತ್ರ ಶ್ರೇಷ್ಠ ಗುರಿಯನ್ನು ಸಾಧಿಸಬಹುದು. ಇದಕ್ಕೆ ನಿದರ್ಶನವಾಗಿ ನಮ್ಮ ಹತ್ತು ವರ್ಷಗಳ ಶ್ರಮ ಚಂದ್ರಯಾನ-3 ಯಶಸ್ವಿಯ ಸಾರ್ಥಕ ಸಾಧನೆಯಾಗಿದೆ. ಚಂದ್ರಯಾನ-3 ಕೇವಲ ನನ್ನೊಬ್ಬನಿಂದ ಮಾತ್ರ ಸಾಧ್ಯವಾದುದಲ್ಲ, ನಮ್ಮ ಸಂಸ್ಥೆ ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಸೇರಿದಂತೆ ಇಡೀ ತಂಡದ ಪರಿಶ್ರಮದ ಪ್ರತಿಫಲ ಎಂದು ಬಣ್ಣಿಸಿದರು.

ಭಾರತದ ಈ ಸಾರ್ಥಕ ಸಾಧನೆಯನ್ನು ಕುರಿತು ದೃಶ್ಯ ಮಾಧ್ಯಮದ ಮೂಲಕ ಅಮೆರಿಕ ಸಂಯುಕ್ತ ಸಂಸ್ಥಾನದ ವಿದ್ಯಾರ್ಥಿಗಳಿಗೆ ಬೋಧಿಸುತ್ತಾರೆ ಎಂದರೆ ಭಾರತದ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಉನ್ನತ ಮಟ್ಟದಲ್ಲಿ ರಾರಾಜಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ನಮ್ಮ ಈ ಸಾಧನೆಯನ್ನು ಪರಿಗಣಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ನೀಡುತ್ತಿರುವ ಈ ವಿಜ್ಞಾತಂ ಪ್ರಶಸ್ತಿಯು ಕೇವಲ ನನ್ನೊಬ್ಬನಿಗೆ ಸೀಮಿತವಲ್ಲ. ಇಸ್ರೋದ ಪ್ರತಿನಿಧಿಯಾಗಿ, ಇಸ್ರೋ ಬಳಗದ ಎಲ್ಲ ವಿಜ್ಞಾನಿಗಳ ಪರವಾಗಿ ಬಹಳ ವಿನೀತ ಭಾವದಿಂದ ಸ್ವೀಕರಿಸುತ್ತಿದ್ದೇನೆ. ಸಮಸ್ತ ವಿಜ್ಞಾನಿ ಸಂಕುಲಕ್ಕೆ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ಪ್ರಶಸ್ತಿ ಸ್ವೀಕಾರದ ವೇಳೆ ಭಾವುಕರಾದರು.

ಇಡೀ ವಿಶ್ವವೇ ಮೆಚ್ಚಿಕೊಳ್ಳುವ ಈ ಸಂದರ್ಭ ಭಾರತ ವಿಶ್ವ ಗುರುವಾಗುವ ಭಾವನೆ ನಮ್ಮೆಲ್ಲರನ್ನೂ ಆವರಿಸಿದೆ. ನಾವು ಈ ಉಪಗ್ರಹ ತಯಾರಿಕೆಯ ಪ್ರತಿ ಹಂತದಲ್ಲೂ ಹಣಕ್ಕೆ ತುಂಬಾ ಮಹತ್ವ ನೀಡಿದ್ದೇವೆ. ಏಕೆಂದರೆ ಅಲ್ಲಿ ಬಳಸುತ್ತಿರುವ ಪ್ರತಿಯೊಂದು ಪೈಸೆಯು ಸಾರ್ವಜನಿಕರದ್ದು ಎಂಬುದು ನಮ್ಮೆಲ್ಲರ ಮನದಾಳದಲ್ಲಿತ್ತು ಎಂದರು.

ಅಂತರಿಕ್ಷದಲ್ಲಿ ಈಗಾಗಲೇ 50 ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿವೆ. ನಾವು ರವಾನಿಸುವ ಈ ಚಂದ್ರಯಾನ-3 ಭಾರತದ ತಂತ್ರಜ್ಞಾನ ಯುಗದ ಮಹತ್ತರ ಬದಲಾವಣೆಗಾಗಿ, ತಮ್ಮೆಲ್ಲರ ಭವಿತವ್ಯದ ಏಳಿಗೆಗಾಗಿ ರೂಪಿಸಿದ್ದೇವೆ ಹಾಗೂ ಯಶಸ್ವಿಯಾಗಿದ್ದೇವೆ. ನಿಮ್ಮೆಲ್ಲರ ಹಾರೈಕೆಗಾಗಿ ನಮ್ಮ ಇಡೀ ತಂಡ ಕೃತಜ್ಞವಾಗಿದೆ ಎಂದು ಮನದಾಳದ ಭಾವನೆಗಳನ್ನು ಹಂಚಿಕೊಂಡರು.

ಸಾನಿಧ್ಯವಹಿಸಿದ್ದ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ವಿಜ್ಞಾನ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರೆಡು ಸಂಯೋಜನೆಗೊಂಡರೆ ಮನುಷ್ಯನ ಬದುಕು ಸುಂದರಗೊಳ್ಳುತ್ತದೆ ಎಂದರು.

ಸಮಾರಂಭದಲ್ಲಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಗುಜರಾತ್ ವಡೋದರದ ರಾಜ್‌ಕೋಟ್‌ನ ಆರ್ಶ್ ವಿದ್ಯಾಮಂದಿರದ ಅಧ್ಯಕ್ಷ ಸ್ವಾಮಿ ಪರಮಾತ್ಮಾನಂದ ಸರಸ್ವತಿ, ಕ್ರಿಯೇಟಿವ್ ಟೀಚಿಂಗ್ ಅಕಾಡೆಮಿ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಗಿ, ಹರಿಯಾಣದ ರೋಹ್ಟಕ್‌ನ ಬಾಬಾ ಮಸ್ತ್‌ನಾಥ್ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜಸ್ಥಾನದ ತಿಜಾರ ಶಾಸಕ ಮಹಂತ್ ಬಾಲಕ್‌ನಾಥ್‌ಯೋಗಿ ಮಾತನಾಡಿದರು.

ಇದೇ ವೇಳೆ ಶ್ರೀ ಕ್ಷೇತ್ರಕ್ಕೆ ಸಂಬಂಧಿಸಿದ ಗೋರಕ್ಷಾ ಬೋಧೆ, ಗುರು ತೋರಿದ ಸ್ವರ್ಣ ಪಥ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ ಮಾತನಾಡಿದರು.

5 ಲಕ್ಷ ರು. ನಗದು, ವಿಜ್ಞಾತಂ ಪ್ರಶಸ್ತಿ ಪ್ರದಾನ

ಇದೇ ವೇಳೆ ಸಮಾರಂಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್.ಸೋಮನಾಥ್ ಅವರಿಗೆ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ನಿರ್ಮಲಾನಂದನಾಥಶ್ರೀಗಳು ಪ್ರದಾನ ಮಾಡಿದರು.

ಚಂದ್ರಯಾನ-3ರ ಯಶಸ್ಸಿನೊಂದಿಗೆ ಚರಿತ್ರೆ ಸೃಷ್ಟಿಸಿದ ಇಸ್ರೋ ಸಂಸ್ಥೆ ಮುಖ್ಯಸ್ಥ ಎಸ್.ಸೋಮನಾಥ್ ಅವರಿಗೆ ಶಾಲು, ಹಾರ, ಮೈಸೂರುಪೇಟ ಹಾಕಿ, ಪ್ರಶಸ್ತಿ ಪದಕವನ್ನೊಳಗೊಂಡ ಸ್ಮರಣಿಕೆ, ಶ್ರೀರಾಮನ ಮೂರ್ತಿ ಸೇರಿದಂತೆ 5 ಲಕ್ಷ ರು. ನಗದು ನೀಡಿ ಅತ್ಯಂತ ಗೌರವದಿಂದ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ