ಹಾವೇರಿ: ಜಗತ್ತಿನಲ್ಲಿ ಯಾವುದು ಬಲಿಷ್ಠವಾದ ರಾಷ್ಟ್ರ ಎಂದು ಕರೆಸಿಕೊಂಡಿದೆಯೋ ಆ ರಾಷ್ಟ್ರ ಹೇರಳವಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತದೆ. ಇದು ಆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.
ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಭಾವ ಬೀರಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಟೆಲಿ ಕಮ್ಯುನಿಕೇಷನ್, ಕೃಷಿ, ಉತ್ಪಾದನೆ ವಲಯ, ಕಾರ್ಮಿಕ ವಲಯಗಳ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಅವಲಂಬಿತವಾಗಿದೆ. ಇದು ಪ್ರತಿ ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿ ಜೀವಣಮಟ್ಟವನ್ನು ಸುಧಾರಣೆ ಮಾಡುತ್ತದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಭಾವ ಬೀರಿದೆ. ಆರೋಗ್ಯ ಕ್ಷೇತ್ರದಲ್ಲಿ ಎಂಐಆರ್, ರೋಬೊಟಿಕ್ ಸರ್ಜರಿ, ಲಸಿಕೆ ಸಂಶೋಧನೆ ಮುಂತಾದವು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಕರಿಯಾಗಿದೆ. ಮೊದಲು ಮಾನವನ ಜೀವಿತಾವಧಿಯು 35 ವರ್ಷಕ್ಕೆ ಸೀಮಿತವಾಗಿತ್ತು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆರೋಗ್ಯ ಕ್ಷೇತ್ರದಲ್ಲಿ ಬಳಕೆ ಮಾಡಿಕೊಂಡಿರುವ ಪರಿಣಾಮ ಮಾನವನ ಜೀವಿತಾವಧಿಯನ್ನು 70 ವರ್ಷಕ್ಕೆ ಹೆಚ್ಚಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕೈಕೊಂಡ ಸಂಶೋಧನೆಗಳು ಇದಕ್ಕೆ ಮೂಲ ಕಾರಣವಾಗಿದೆ ಎಂದರು.ಸಾರಿಗೆ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ. ಆಟೋನಮಿ ಟೆಕ್ನಾಲಜಿ, ಹೈಪರ್ ಟೆಕ್ನಾಲಜಿ ಮೂಲಕ ಎಲೆಕ್ಟ್ರಿಕಲ್ ಬೈಕ್ ಮತ್ತು ಬಸ್ ಗಳು ಬಂದಿದ್ದು ಸಾರಿಗೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ಸಾಕಾರಗೊಳಿಸಿವೆ. ಇಂದು ಅಮೆರಿಕಾದವರು ನಾಸಾದ ಮೂಲಕ ಚಂದ್ರನಲ್ಲಿ ವಾಸಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ದೇಶ ಹೆಚ್ಚಿನ ಪ್ರಮಾಣದಲ್ಲಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಇದು ದೇಶದ ಅಭಿವೃದ್ಧಿಗೆ ಪೂರವಾಗಿದೆ. ಕೃಷಿ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಕ್ರಾಂತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ಬದಲಾಯಿಸಿದೆ. ಇದಿಲ್ಲದಿದ್ದರೆ ಜಗತ್ತು ಯಾವ ರೀತಿ ಇರಬಹುದು ಎಂದು ಅಂದಾಜಿಸಲು ಕಷ್ಟ ಸಾಧ್ಯ ಎಂದರು.
ಸಿಎಸ್ಐಆರ್ - ಎನ್ಎಎಲ್ನ ಮುಖ್ಯ ವಿಜ್ಞಾನಿ ಡಾ. ವಿಪಿಎಸ್ ನಾಯ್ಡು, ಡಾ. ಶಿವರಾಮ ಬಿ.ಎಸ್., ಡಿಡಿಪಿಐ ಮೋಹನ್ ದಂಡಿನ, ಬಿಇಒ ಎಂ.ಎಚ್. ಪಾಟೀಲ್, ವಿದ್ಯಾಶಿಲ್ಪ ಶಾಲೆಯ ಕಾರ್ಯದರ್ಶಿ ಸೌಮ್ಯಾ ಮಾಳಿ ಇತರರು ಇದ್ದರು.