ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ದೊಡ್ಡಬಳ್ಳಾಪುರ ಆಯುರ್ವೇದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಖುದ್ಸಿಯ ತಸ್ನೀಯ ತಿಳಿಸಿದರು.ಇಲ್ಲಿನ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಯುರ್ವೇದ ವೈದ್ಯಕೀಯ ವಿಜ್ಞಾನದ ಸಮಗ್ರ ವ್ಯವಸ್ಥೆಯಾಗಿದೆ. ಆಯುರ್ವೇದ ಜೀವನದ ವಿಜ್ಞಾನವಾಗಿದೆ. ಇದರಿಂದಾಗಿ ಪ್ರತಿಯೊಬ್ಬರು ವಿಜ್ಞಾನ ಮತ್ತು ಪ್ರಾಮುಖ್ಯತೆಯನ್ನು ಅರಿಯಬೇಕಾಗಿದೆ ಎಂದರು.
ಭಾರತದ ಹೆಮ್ಮೆಯ ವಿಜ್ಞಾನಿ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಪ್ರತಿವರ್ಷ ಫೆ.28 ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತದೆ. ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ಯುವಜನರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ವೈಜ್ಞಾನಿಕ ಮನೋಭಾವ, ವಿಜ್ಞಾನದ ಬಗ್ಗೆ ಆಸಕ್ತಿ, ಹೊಸ ಅವಿಷ್ಕಾರಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಸಕ್ತ ಬೆಳವಣಿಗೆ ಮತ್ತು ಅಭಿವೃದ್ಧಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದರು.ಪ್ರತಿಜ್ಞಾ ವಿಧಿ ಬೋಧನೆ:
ನಾನು ಭಾರತೀಯ ಸಂವಿಧಾನದ ಅನ್ವಯ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳುತ್ತೇನೆ. ನಾನು ಪ್ರಶ್ನೆ ಮಾಡದೇ ಯಾವುದೇ ತರ್ಕ ಒಪ್ಪುವುದಿಲ್ಲ ಹಾಗೂ ಸಂವಿಧಾನದ ಮೂಲಭೂತ ಕರ್ತವ್ಯದ ಆಶಯದಂತೆ ಮೌಢ್ಯತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ, ಜೀವ ಜಗತ್ತಿಗೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳುತ್ತೆನೆಂದು ಈ ಮೂಲಕ ರಾಷ್ಟ್ರೀಯ ವಿಜ್ಞಾನ ದಿನದಂದು ಪ್ರತಿಜ್ಞೆ ಮಾಡುತ್ತೇನೆ ಎಂಬ ಪ್ರತಿಜ್ಞಾವಿಧಿಯನ್ನು ಕೈಗೊಳ್ಳಲಾಯಿತು.ಕಾರ್ಯಕ್ರಮದಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಕಲಿಕಾ ವೈದ್ಯರಾದ ಡಾ.ಆಯಿಷ, ಡಾ.ನಿಖಿತಾ, ಆಸ್ಪತ್ರೆಯ ಸಿಬ್ಬಂದಿ ಮಲ್ಲಿಕಾರ್ಜುನ್, ಶ್ವೇತಾ, ಲೀಲಾವತಿ, ಯಶವಂತ್, ರುದ್ರೇಶ್ ಭಾಗವಹಿಸಿದ್ದರು.