-ಎಸ್ಬಿಆರ್ ಕಾಲೇಜಿನಲ್ಲಿ ‘ವಿಜ್ಞಾನ ಪರಂಪರೆಗೆ ಪ್ರಾಚೀನ ಭಾರತೀಯ ಕೊಡುಗೆ’ ಡಾ. ವಿ. ಎಚ್. ಮೂಲಿಮನಿ ವಿಶೇಷ ಉಪನ್ಯಾಸ
-----ಕನ್ನಡಪ್ರಭ ವಾರ್ತೆ ಕಲಬುರಗಿ
ಭವಿಷ್ಯದ ಜ್ಞಾನಕ್ಕೂ ಬುನಾದಿ ನೀಡುವ ತತ್ವಗಳನ್ನು ಪ್ರಾಚೀನ ಭಾರತೀಯರು ಅಭಿವೃದ್ಧಿಪಡಿಸಿದ್ದಾರೆ, ಇಂದು ನಾವು ಪಾಶ್ಚಾತ್ಯ ವಿಜ್ಞಾನವನ್ನು ಮಾದರಿಯಾಗಿ ತೆಗೆದುಕೊಳ್ಳುತ್ತಿದ್ದರೂ, ನಾವು ನಮ್ಮ ಪುರಾತನ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಅರಿವನ್ನು ಮರೆತಿದ್ದೇವೆ. ಇದನ್ನು ಮರಳಿ ಅನಾವರಣಗೊಳಿಸಬೇಕಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ. ವಿ.ಹೆಚ್. ಮೂಲಿಮನಿ ಹೇಳಿದ್ದಾರೆ.ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಕಲಬುರಗಿಯಲ್ಲಿ “ವಿಜ್ಞಾನ ಪರಂಪರೆಗೆ ಪ್ರಾಚೀನ ಭಾರತೀಯ ಕೊಡುಗೆ” ಎಂಬ ಮಹತ್ವದ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಾರತೀಯರು ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಶಾಸ್ತ್ರ ಮತ್ತು ತಾರಾಜ್ಞಾನ ಕ್ಷೇತ್ರಗಳಲ್ಲಿ ಪಾಶ್ಚಾತ್ಯರಿಗಿಂತ ಶತಮಾನಗಳ ಹಿಂದೆ ಹೇಗೆ ನಿಪುಣರಾಗಿದ್ದರು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿದರು.ವೇದಗಳಲ್ಲಿ ಭೂಮಿ, ಗ್ರಹಣ, ಕಾಲಮಾಪನ ಮತ್ತು ಪ್ರಕೃತಿ ಚಕ್ರದ ಬಗ್ಗೆ ವೈಜ್ಞಾನಿಕ ಚಿಂತನೆಗಳ ವಿವರ, ಭಾರತೀಯ ಋಷಿಗಳು ತತ್ವಾಂಶಗಳನ್ನು ತಮ್ಮ ಜೀವನಶೈಲಿಯಲ್ಲಿ ಹೇಗೆ ಅಳವಡಿಸಿಕೊಂಡಿದ್ದರು ಎಂಬುದನ್ನು ವಿವರಿಸಿದರು.
ಈ ಉಪನ್ಯಾಸ ವಿದ್ಯಾರ್ಥಿಗಳಲ್ಲಿ ಪ್ರಾಚೀನ ಭಾರತೀಯ ವಿಜ್ಞಾನ ಪರಂಪರೆ ಬಗ್ಗೆ ಜಾಗೃತಿ ಮೂಡಿಸಿ, ನವಚಿಂತನೆಗೆ ಪ್ರೇರಣೆ ನೀಡಿತು.ಡಾ. ಮೂಲಿಮನಿ ಅವರು, ವೇದಗಳಲ್ಲಿ ವಿವರಣೆಗೊಂಡಿರುವ ಧ್ವನಿತತ್ವ, ಐತಿಹಾಸಿಕ ವೈದ್ಯಶಾಸ್ತ್ರದ ದೃಷ್ಟಿಯಿಂದ ಸುಶ್ರುತ ಸಂಹಿತೆ, ಚರಕ ಸಂಹಿತೆ, ಜ್ಯೋತಿಶಾಸ್ತ್ರದ ಕ್ಷೇತ್ರದಲ್ಲಿ ಆರ್ಯಭಟ ಮತ್ತು ಭಾಸ್ಕರಾಚಾರ್ಯರ ಕೊಡುಗೆ, ಭೌತಶಾಸ್ತ್ರದಲ್ಲಿ ಕಣ ಸಿದ್ಧಾಂತದ ಪರಿಕಲ್ಪನೆ, ಗಣಿತದಲ್ಲಿ ಶೂನ್ಯಾವಲೋಕನ ಮತ್ತು ದಶಮಾಂಶ ಪದ್ಧತಿಯ ಬೆಳವಣಿಗೆಗಳನ್ನು ವಿವರಿಸಿ ಮಕ್ಕಳ ಗಮನ ಸೆಳೆದರು.
ಎಸ್ಬಿಆರ್ ಮೇಲ್ವಿಚಾರಕರಾದ ಡಾ. ಶ್ರೀಶೈಲ ಹೊಗಾಡೆ ಮಾತನಾಡಿ, ‘ಈ ಉಪನ್ಯಾಸ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಚಿಂತನೆ ಬೆಳೆಸುವಲ್ಲಿ ಬಹುಪಾಲು ಸಹಾಯ ಮಾಡುತ್ತದೆಂದು ಅಭಿಪ್ರಾಯಪಟ್ಟರು.ಕಾಲೇಜಿನ ಪ್ರಾಚಾರ್ಯ ಎನ್.ಎಸ್. ದೇವರಕಲ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವೃಂದರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.-----
ಫೋಟೋ- ಎಸ್‌ಬಿಆರ್ 1 ಮತ್ತು ಎಸ್ಬಿಆರ್ 2ಕಲಬುರಗಿಯಲ್ಲಿರುವ ಎಸ್ಬಿಆರ್ ಕಾಲೇಜಿನಲ್ಲಿ ಡಾ. ಮೂಲಿಮನಿಯವರು ಭಾರತೀಯ ವಿಜ್ಞಾನ ಚಿಂತನೆಯ ಕುರಿತಂತೆ ಉಪನ್ಯಾಸ ನೀಡಿ ಮಕ್ಕಳ ಗಮನ ಸೆಳೆದರು.