ರೈತರ ಆದಾಯ ಹೆಚ್ಚಳಕ್ಕೆ ವೈಜ್ಞಾನಿಕ ಸಂಶೋಧನೆ ಅಗತ್ಯ

KannadaprabhaNewsNetwork |  
Published : Nov 15, 2026, 02:00 AM IST
೪೦ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿದ ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ.  | Kannada Prabha

ಸಾರಾಂಶ

ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸುವ ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ ರೈತರ ಹೊಲಗಳಿಗೆ ತಲುಪಬೇಕು.

ಧಾರವಾಡ:

ಕೃಷಿ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೈಜ್ಞಾನಿಕ ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಭಿವೃದ್ಧಿಪಡಿಸುವ ಹೊಸ ತಂತ್ರಜ್ಞಾನ ಮತ್ತು ಸಂಶೋಧನೆಗಳು ಪ್ರಯೋಗಾಲಯಗಳಿಗೆ ಸೀಮಿತವಾಗದೆ ರೈತರ ಹೊಲಗಳಿಗೆ ತಲುಪಬೇಕು. ಆಗ ಮಾತ್ರ ವಿವಿಗಳ ಉದ್ದೇಶ ಸಾರ್ಥಕವಾಗುತ್ತದೆ ಎಂದು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು.

ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ೪೦ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರೈತರು ಬೆವರು ಸುರಿಸಿದಾಗ ಮಾತ್ರ ದೇಶದ ಜನರ ಹಸಿವು ನೀಗುತ್ತದೆ. ಕೃಷಿಯೇ ದೇಶದ ಆರ್ಥಿಕತೆಯ ಪ್ರಮುಖ ಯಂತ್ರ ಆಗಿದೆ. ಆದರೆ, ಇಂದು ಹವಾಮಾನ ವೈಪರೀತ್ಯದಿಂದ ಕೃಷಿ ಕ್ಷೇತ್ರ ಸಂಕಷ್ಟ ಎದುರಿಸುತ್ತಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ಪ್ರಕೃತಿ ವಿಕೋಪಗಳನ್ನು ತಡೆಯಲು ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಲೇ ಆಹಾರ ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಜವಾಬ್ದಾರಿ ಕೇವಲ ವಿದ್ಯಾರ್ಥಿಗಳಿಗೆ ಪದವಿ, ಸ್ನಾತಕೋತ್ತರ ಪದವಿ ನೀಡುವುದು ಅಥವಾ ಸಂಶೋಧನೆ ನಡೆಸುವುದಕ್ಕೆ ಸೀಮಿತವಾಗಿಲ್ಲ. ದೇಶದ ಬಹುಸಂಖ್ಯಾತ ಜನರ ಬದುಕಿಗೆ ಆಧಾರವಾಗಿರುವ ಕೃಷಿ ಕ್ಷೇತ್ರವನ್ನು ಬಲಪಡಿಸುವ ಹೊಣೆಗಾರಿಕೆ ವಿಶ್ವವಿದ್ಯಾಲಯಗಳ ಮೇಲಿದೆ. ರೈತರ ಆದಾಯ ಹೆಚ್ಚಿಸುವ ಹೊಸ ತಳಿ, ರೋಗ ನಿರೋಧಕ ಬೀಜ, ಹೆಚ್ಚಿನ ಇಳುವರಿ ಹಾಗೂ ಪೌಷ್ಟಿಕಾಂಶ ಹೆಚ್ಚಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಇಂದು ಕೃಷಿ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದರೂ ರೈತರಿಗೆ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಕಬ್ಬು ಬೆಳೆಗಾರರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವ ಪರಿಸ್ಥಿತಿ ಇದೆ. ಕಬ್ಬು ಬೆಳೆಯಲು ರೈತರು ಸಾಕಷ್ಟು ವೆಚ್ಚ ಮಾಡುತ್ತಿದ್ದರೂ ಸೂಕ್ತ ಆದಾಯ ಸಿಗುತ್ತಿಲ್ಲ. ಭತ್ತ, ರಾಗಿ ಹಾಗೂ ಜೋಳ ಬೆಳೆಗಾರರ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಬೆಳೆ ಕೈಗೆ ಬಂದ ನಂತರವೂ ಸಾಲ ತೀರಿಸಲು ಸಾಧ್ಯವಾಗದಿದ್ದರೆ ಕೃಷಿ ಮಾಡಿದ ಪ್ರಯೋಜನವೇನು ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕೃಷಿ ವಿಜ್ಞಾನಿಗಳು ಮುಂದಾಗಬೇಕು ಎಂದರು.

ಕೃಷಿ ವಿಶ್ವವಿದ್ಯಾಲಯದ ನಿಜವಾದ ಶ್ರೇಷ್ಠತೆ ಅದರ ಕಟ್ಟಡಗಳು ಮತ್ತು ಮೂಲಸೌಕರ್ಯಗಳಲ್ಲ. ರೈತರ ಬದುಕಿನಲ್ಲಿ ಉಂಟುಮಾಡುವ ಬದಲಾವಣೆಯಲ್ಲಿದೆ. ವಿಶ್ವವಿದ್ಯಾಲಯದ ಸಂಶೋಧನೆಗಳು ರೈತರಿಗೆ ನೇರವಾಗಿ ಪ್ರಯೋಜನವಾಗಬೇಕು. ರೈತರ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಸೂಕ್ತ ತಾಂತ್ರಿಕ ಪರಿಹಾರ ನೀಡಿದಾಗ ಮಾತ್ರ ಸಂಶೋಧನೆಗೆ ನಿಜವಾದ ಮೌಲ್ಯ ದೊರೆಯುತ್ತದೆ ಎಂದು ಹೇಳಿದರು.

ನೇಗಿಲ ಯೋಗಿ:

ಮೂರು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಶೀಘ್ರದಲ್ಲೇ ''''ನೇಗಿಲ ಯೋಗಿ'''' ಯೋಜನೆ ಪ್ರಾರಂಭಿಸಲಿದೆ. ಬರಗಾಲದ ಸಂದರ್ಭದಲ್ಲಿ ರೈತರಿಗೆ ನೆರವಾಗುವ ಜತೆಗೆ ಮುಂದಿನ ವರ್ಷಗಳಲ್ಲಿ ಅಂತರ್ಜಲ ಹೆಚ್ಚಳ ಮತ್ತು ಮಣ್ಣಿನಲ್ಲಿ ತೇವಾಂಶ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇಂಗು ಗುಂಡಿ, ಕೃಷಿ ಹೊಂಡ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ನೀರಿನ ಸಂಗ್ರಹಣೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬೆಳೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿರುವ ಕುರಿತು ಮಾತನಾಡಿದ ಸಚಿವರು, ಪರಿಹಾರ ಪಾವತಿಗೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ತೊಂದರೆಗಳು ಹಾಗೂ ದಾಖಲೆಗಳಲ್ಲಿನ ಲೋಪಗಳು ಕಂಡುಬಂದಿವೆ. ವಿಶೇಷವಾಗಿ ಕೆವೈಸಿ ದಾಖಲೆಗಳಲ್ಲಿ ತಪ್ಪುಗಳಿರುವುದರಿಂದ ಕೆಲ ರೈತರಿಗೆ ಹಣ ಪಾವತಿಯಾಗಿಲ್ಲ. ಈ ಸಮಸ್ಯೆಗಳನ್ನು ಸರಿಪಡಿಸಿ ಅರ್ಹ ರೈತರಿಗೆ ಪರಿಹಾರ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಈ ಕುರಿತು ಮೊದಲ ಪರಿಶೀಲನೆ ನಡೆಸಿದ್ದು, ದಾಖಲೆಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಿ ಪಾವತಿ ಪ್ರಕ್ರಿಯೆ ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ಬಿ. ಪ್ರಕಾಶ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು , ನವದೆಹಲಿಯ ಶಿಕ್ಷಣ ವಿಭಾಗದ ಉಪ ಮಹಾನಿರ್ದೇಶಕಾದ ಡಾ. ಯಶಪಾಲ್ ಸಿಂಗ್ ಮಲಿಕ್, ಶಾಸಕರಾದ ಎಫ್.ಎಚ್. ಜಕ್ಕಪ್ಪನವರ, ಎನ್.ಎಚ್. ಕೋನರೆಡ್ಡಿ, ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಅಡಿವೇಶ ಗಿರೆಪ್ಪ ಇಟಗಿ, ಕುಲಸಚಿವೆ ಜಯಶ್ರೀ ಶಿಂತ್ರಿ, ಪಾರ್ವತಿ ಎಸ್. ಕುರ್ಲೆ, ರವಿಕುಮಾರ ಮಾಳಿಗೇರ, ವೀರನಗೌಡ ಪಿ. ಪೊಲೀಸ್‌ಗೌಡರ, ಬಸವರಾಜ ಕುಂದಗೋಳಮಠ, ಮಾಲತೇಶ ಸಿ. ಶ್ಯಾಗೋಟ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.ರೈತರ ಕಣ್ಣೀರು ಭೂಮಿಗೆ ಬಿದ್ದರೆ ಅದು ಬರಗಾಲ, ಅವರ ಬೆವರು ಭೂಮಿಗೆ ಬಿದ್ದರೆ ಅದು ಸುಭಿಕ್ಷ ಕಾಲ ಎಂಬ ಮಾತಿನಂತೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಬೇಕು. ರೈತರ ಬದುಕು ಸುಧಾರಿಸುವಂತಹ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವುದು ಕೃಷಿ ವಿಶ್ವವಿದ್ಯಾಲಯಗಳ ಪ್ರಮುಖ ಗುರಿಯಾಗಬೇಕು.

ಪಿ.ಎಂ. ನರೇಂದ್ರಸ್ವಾಮಿ ಕೃಷಿ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫಿಲ್ಟರ್‌ ಮಾಡದೇ ಕಲುಷಿತ ನೀರು ಪೂರೈಕೆ ?
ಚಳಿಗಾಲದ ಅಧಿವೇಶನಕ್ಕೆ ಹೆಸ್ಕಾಂ ಸಕಲ ಸಿದ್ಧತೆ