ಕೃಷಿ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಅವಶ್ಯ

KannadaprabhaNewsNetwork |  
Published : Feb 10, 2025, 01:47 AM IST
ಕೃಷಿ ಕಾಲೇಜು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಕೃಷಿ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಕ್ತವಾಗಿ ಹಾಗೂ ಸ್ಥಳೀಯವಾಗಿ ನಿರ್ಧರಿಸಲು, ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಇತರೆ ಇಲಾಖೆಗಳ ಸಹಯೋಗದಲ್ಲಿ ಸೂಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಕೃಷಿ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಸೂಕ್ತವಾಗಿ ಹಾಗೂ ಸ್ಥಳೀಯವಾಗಿ ನಿರ್ಧರಿಸಲು, ಕೃಷಿ ವಿಜ್ಞಾನ ಕೇಂದ್ರಗಳು, ಪ್ರಗತಿಪರ ರೈತರು, ಇತರೆ ಇಲಾಖೆಗಳ ಸಹಯೋಗದಲ್ಲಿ ಸೂಕ್ತವಾಗಿ ನಿರ್ಣಯ ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ತಿಳಿಸಿದರು.

ನಗರದ ಹೊರವಲಯದ ಹಿಟ್ನಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ೨೬ನೇ ಮತ್ತು ೬ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿರು. ವಿಜಯಪುರದಲ್ಲಿ ಬೆಳೆಯುವ ವಿವಿಧ ಬೆಳೆಗಳಾದ ತೊಗರಿ, ಅಜವಾನ, ಕಬ್ಬು, ದಾಳಿಂಬೆ ಇತ್ಯಾದಿ ಬೆಳೆಗಳಿಗೆ ಬರುವ ಸಮಸ್ಯೆಗಳಾದ ಹೊಸ ತಳಿಗಳ ಬಗ್ಗೆ ಮಾಹಿತಿ, ಬೇಸಾಯಕ್ರಮ ಮತ್ತು ಕೀಟ, ರೋಗ ಹತೋಟಿ ಕ್ರಮಗಳ ಬಗ್ಗೆ ತರಬೇತಿಗಳ ಮೂಲಕ ರೈತರಿಗೆ ಸಹಾಯ ಮಾಡಬೇಕು. ಎಲ್ಲ ಬೆಳೆಗಳ ಮೌಲ್ಯವರ್ಧನೆ, ಮಾರುಕಟ್ಟೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

ಸಂಶೋಧನಾ ನಿರ್ದೇಶಕ ಡಾ.ಬಿ.ಡಿ.ಬಿರಾದಾರ ಮಾತನಾಡಿ, ರೈತರು ಬದುಗಳಲ್ಲಿ ಬಹುವಾರ್ಷಿಕ ಮೇವಿನ ಗಿಡಗಳನ್ನು ಬೆಳೆಯಬೇಕು. ರೈತರು ಹೆಚ್ಚಿನ ಪ್ರಮಾಣದಲ್ಲಿ ಕೀಟ ನಾಶಕಗಳ ಸಿಂಪರಣೆಯಿಂದ ನೈಸರ್ಗಿಕ ಕೀಟಗಳು ಹಾಳಾಗಿವೆ. ಇವುಗಳ ತಡೆಗೆ ಪರತಂತ್ರ ಜೀವಿಗಳನ್ನು ಅಭಿವೃದ್ದಿ ಪಡಿಸಿ ಹಾನಿಕಾರಕ ಕೀಟಗಳನ್ನು ಹತೋಟಿಯಲ್ಲಿಡಬೇಕು ಎಂದು ಮಾಹಿತಿ ನೀಡಿದರು.ಜಂಟಿ ಕೃಷಿ ನಿರ್ದೇಶಕಿ ಡಾ.ರೂಪಾ.ಎಲ್ ಮಾತನಾಡಿ, ರೈತರ ಬೆಳೆಗಳು ಕೀಟಗಳ ರೋಗದಿಂದ ಹಾನಿಯಾಗದಂತೆ ವಿಜ್ಞಾನಿಗಳ ತಂಡವನ್ನು ರಚಿಸಿ ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ ವಿಶೇಷ ತರಬೇತಿ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು. ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಆರ್.ಬಸವರಾಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವೈಜ್ಞಾನಿಕ ಸಲಹಾ ಸಮಿತಿಗಳು ಜಿಲ್ಲೆಗೆ ಒಂದು ದಿಕ್ಷೂಚಿಯಾಗಿವೆ. ಇಲ್ಲಿ ಹೊರಹೊಮ್ಮಿದ ಸಲಹೆಗಳಿಂದ ಜಿಲ್ಲೆಯಲ್ಲಿ ಕೃಷಿ ವಿಜ್ಞಾನ ಕೇಂದ್ರಗಳು ಕ್ಷೇತ್ರ ಪರಿಶೀಲನೆ ಮತ್ತು ಮುಂಚೂಣಿ ಪ್ರಾತ್ಯಕ್ಷಿಕೆಗಳ ಮೂಲಕ ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಲು ಅನುಕೂಲವಾಗಲಿದೆ ಎಂದರು.ವಿಜಯಪುರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಎಸ್.ಎಮ್.ವಸ್ತ್ರದ ಹಾಗೂ ಇಂಡಿಯ ಹಿರಿಯ ವಿಜ್ಞಾನಿ ಡಾ.ಶಿವಶಂಕರಮೂರ್ತಿಗಳು ವೈಜ್ಞಾನಿಕ ಸಲಹಾ ಸಮಿತಿ ಸಭೆಯ ವರದಿವಾಚಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಪ್ರಗತಿಪರ ರೈತರು ಹೈನುಗಾರಿಕೆ ಮತ್ತು ಮೇವಿನ ಬೆಳೆಗಳ ಕುರಿತು ಸೂಕ್ತ ಮಾರ್ಗದರ್ಶನ, ಅಣುಬೆ ಮೌಲ್ಯವರ್ಧನೆ, ಮಹಿಳೆಯರ ಸಬಲೀಕರಣಕ್ಕಾಗಿ ಉಪ್ಪಿನಕಾಯಿ ಸೇರಿ ವಿವಿಧ ವಿಷಯಗಳ ಕುರಿತು ವಿವರಗಳನ್ನು ನೀಡಿದರು.ಸಭೆಯಲ್ಲಿ ಕೃಷಿ ಮಹಾವಿದ್ಯಾಲಯ ಡೀನ್ ಡಾ.ಎ.ಎಸ್.ಸಜ್ಜನ, ಸಹ ವಿಸ್ತರಣಾ ನಿರ್ದೇಶಕ ಡಾ.ಆರ್.ಬಿ.ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಬಿ.ಜಗ್ಗಿನವರ, ವಿಜಯಪುರ ಹಾಗೂ ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಪ್ರಗತಿಪರ ರೈತರಾದ ಸಿದ್ದಪ್ಪ ಬಾಲಗೊಂಡ, ಚಂದ್ರಶೇಖರ ರೆಡ್ಡಿ, ನಿಂಗನಗೌಡ ಪಾಟೀಲ, ಸಿದ್ದು ಕವಡೆಕರ, ಭೀಮನಗೌಡ ಪಾಟೀಲ, ಅಂಕಿತ ಪಾಟೀಲ ಮುಂತಾದವರು ಇದ್ದರು.

ಕೋಟ್‌

ಪ್ರಸ್ತುತ ದಿನಗಳಲ್ಲಿ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದು, ಅದನ್ನು ತಡೆಯಲು ಯುವಕರ ನಡಿಗೆ ಕೃಷಿಯ ಕಡೆಗೆ ಎಂಬ ತತ್ವವನ್ನು ಆಳವಡಿಸಿ ಹೆಸರಾಂತ ಸ್ವಾಮಿಜಿಗಳಿಂದ ಕೃಷಿ ದೀಕ್ಷೆ ನೀಡಿ ಅವರನ್ನು ಕೃಷಿಯತ್ತ ಆಸಕ್ತಿ ವಹಿಸುವಂತೆ ಮಾಡಬೇಕಾಗಿದೆ. ರೈತರು ಸುಸ್ಥಿರ ಬದುಕು ಮತ್ತು ಆದಾಯ ದ್ವಿಗುಣಗೊಳಿಸಲು ವೈಜ್ಞಾನಿಕ ಮಾರ್ಗಗಳ ಜೊತೆಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ಶ್ರಮಿಸಬೇಕು.

ಡಾ.ಪಿ.ಎಲ್.ಪಾಟೀಲ, ಧಾರವಾಡ ಕೃಷಿ ವಿವಿಯ ಕುಲಪತಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ