ಕನ್ನಡಪ್ರಭ ವಾರ್ತೆ ಸಿಂದಗಿ
ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮತ್ತು ಸೃಜನಶೀಲತೆ ಹೆಚ್ಚಿಸುತ್ತವೆ ಎಂದು ಶಿಕ್ಷಣ ಸಂಯೋಜಕ ಬಿ.ಬಿ.ಪಾಟೀಲ ಹೇಳಿದರು.ಪಟ್ಟಣದ ಸಮರ್ಥ ವಿದ್ಯಾ ವಿಕಾಸ ಸಂಸ್ಥೆಯ ವಿದ್ಯಾನಿಕೇತನ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಆಹಾರ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಮೇಳಗಳು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವುದಲ್ಲದೆ ಸೃಜನಶೀಲತೆ ಹೆಚ್ಚಿಸುತ್ತವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವಲ್ಲಿ ವಿಜ್ಞಾನ ಪ್ರದರ್ಶನ ಸಹಕಾರಿ ಎಂದು ತಿಳಿಸಿದರು.
ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಮತ್ತು ಆಹಾರಮೇಳಗಳು ಒಟ್ಟಿಗೆ ಆಚರಿಸುತ್ತಿರುವುದು ವಿಶೇಷ. ಮಕ್ಕಳು ಜಂಕ್ ಫುಡ್‌ಗಳಿಂದ ದೂರವಿದ್ದು, ದೇಶಿ ಆಹಾರಗಳ ಸೇವನೆಯಿಂದ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಆಹಾರ ಮೇಳದಲ್ಲಿ ಮಕ್ಕಳು ಕರದಂಟು, ಶೇಂಗಾ ಲಾಡು, ಬೇಸನ ಲಾಡು, ರವೇ ಲಾಡು, ಮಜ್ಜಿಗೆ, ವಿವಿಧ ತರಹ ಶಂಕರಪಾಳ್ಯ, ಚಕ್ಕಲಿಯಂತಹ ದೇಶಿ ತಿಂಡಿಗಳ ಪ್ರದರ್ಶನ ಮಾಡಲಾಯಿತು.ವಿಜ್ಞಾನ ಮೇಳದಲ್ಲಿ ಕಸ ವಿಲೇವಾರಿ ತ್ಯಾಜ್ಯ ನಿರ್ವಹಣೆ, ಚಂದ್ರಯಾನ, ಸೌರವ್ಯೂಹ ಮಾದರಿ, ಅರಣ್ಯ ಸಂರಕ್ಷಣೆ ಮಾದರಿಗಳು, ರಾಕೆಟ್ ಉಡಾವಣೆ, ಎಟಿಎಂ ಮಷೀನ್ ಮಾದರಿಗಳು, ಭೂಕಂಪನ ಅಲಾರಾಂ, ಆಹಾರ ಸರಪಳಿ, ಮಳೆ ನೀರಿನ ಸಂಗ್ರಹ, ಮೂತ್ರ ಜನಕಾಂಗ ಮಾದರಿಗಳು, ಗಾಳಿ ಶಕ್ತಿ ಯಂತ್ರಗಳು, ಹಗಲು ರಾತ್ರಿಗಳ ಸಂಯೋಜನೆ ಚಟುವಟಿಕೆ, ಡ್ರೋನ್ ಕ್ಯಾಮೆರಾದಂತಹ ಮಾದರಿಗಳು ವಿಜ್ಞಾನ ಮೇಳದಲ್ಲಿ ಪ್ರದರ್ಶಿಸಲಾಯಿತು. ಗಣಿತ ವಿಭಾಗದಿಂದ ಆಕೃತಿಗಳ ಪರಿಕಲ್ಪನೆ ತಂತ್ರಜ್ಞಾನದಿಂದ ಸಂಖ್ಯೆಗಳನ್ನು ಪರಿಚಯಿಸುವುದು, ಗಣಿತ ವಿಸ್ಮಯಗಳ ಮತ್ತು ಭಾಷಾ ಸಂಘಗಳಿಂದ ಅನುಭವ ಮಂಟಪ, ಚಿತ್ರಗಳಿಂದ ಕಥೆ ವಿವರಿಸುವುದು, ಅಕ್ಷರ ವರ್ಣಮಾಲೆಗಳು, ವಚನ ಪ್ರಕಾರಗಳು ಮನಸೂರೆಗೊಂಡವು.
ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಮಾತನಾಡಿದರು. ನಿರ್ದೇಶಕ ಪಿ.ಡಿ.ಕುಲಕರ್ಣಿ, ಹೋಟೆಲ್ ಉದ್ಯಮಿ ರವೀಂದ್ರ ಶೆಟ್ಟಿ, ಮುಖ್ಯಗುರುಮಾತೆ ಎಸ್.ಐ.ಅಸ್ಕಿ, ವಿದ್ಯಾನಿಕೇತನ ಮತ್ತು ಪ್ರೇರಣಾ ಶಾಲೆಯ ಮುಖ್ಯಗುರುಮಾತೆ ಎಂ.ಪಿ.ಬುಕ್ಕಾ ಇದ್ದರು. ಸಾನ್ವಿ ಬಾಗಲಕೋಟೆ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಸತೀಶ ಕುಲಕರ್ಣಿ ಸ್ವಾಗತಿಸಿದರು. ವಿ.ಎ.ನಾಯಕ ನಿರೂಪಿಸಿದರು. ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.