ಅವೈಜ್ಞಾನಿಕ ಕಾಮಗಾರಿ ವಿರುದ್ಧ ವೈಜ್ಞಾನಿಕ ಹೋರಾಟ: ಎಂ.ಪಿ ರೇಣುಕಾಚಾರ್ಯ

KannadaprabhaNewsNetwork |  
Published : Jul 10, 2025, 01:46 AM IST
ಪೋಟೊ: 09ಎಸ್‌ಎಂಜಿಕೆಪಿ07 ಭದ್ರಾ ನಾಲೆ ಸೀಳಿ ಕುಡಿಯುವ ನೀರು ಪೂರೈಸುವ ಯೋಜನೆ ವಿರೋಧಿಸಿ ದಾವಣಗೆರೆ ಜಿಲ್ಲೆ ರೈತ ಒಕ್ಕೂಟದ ವತಿಯಿಂದ ಬುಧವಾರ ಶಿವಮೊಗ್ಗದ ನಗರದ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು. | Kannada Prabha

ಸಾರಾಂಶ

ಭದ್ರಾ ನಾಲೆ ಸೀಳಿ ಕುಡಿಯುವ ನೀರು ಪೂರೈಸುವ ಯೋಜನೆ ವಿರೋಧಿಸಿ ದಾವಣಗೆರೆ ಜಿಲ್ಲೆ ರೈತ ಒಕ್ಕೂಟದ ವತಿಯಿಂದ ಬುಧವಾರ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಕಚೇರಿಗೆ ಭಾರೀ ಸಂಖ್ಯೆಯಲ್ಲಿ ರೈತರು ಆಗಮಿಸಿ ಸಾಗರ ರಸ್ತೆಯ ಎರಡೂ ಬದಿಯಲ್ಲಿ ಬಂದ್ ಮಾಡಿ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾ ನಾಲೆ ಸೀಳಿ ಕುಡಿಯುವ ನೀರು ಪೂರೈಸುವ ಯೋಜನೆ ವಿರೋಧಿಸಿ ದಾವಣಗೆರೆ ಜಿಲ್ಲೆ ರೈತ ಒಕ್ಕೂಟದ ವತಿಯಿಂದ ಬುಧವಾರ ಸಾಗರ ರಸ್ತೆಯಲ್ಲಿರುವ ತುಂಗಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಕಚೇರಿಗೆ ಭಾರೀ ಸಂಖ್ಯೆಯಲ್ಲಿ ರೈತರು ಆಗಮಿಸಿ ಸಾಗರ ರಸ್ತೆಯ ಎರಡೂ ಬದಿಯಲ್ಲಿ ಬಂದ್ ಮಾಡಿ ಸ್ಥಳದಲ್ಲೇ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರಿಸುವ ಭರವಸೆ ಲಿಖಿತ ರೂಪದಲ್ಲಿ ಕೊಡುವವರೆಗೆ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದ ಪ್ರತಿಭಟನಾಕಾರರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಶಿವಮೊಗ್ಗದ ಪ್ರವಾಸಿಮಂದಿರದಲ್ಲಿ ಸಭೆ ನಡೆಸಿ ಅಲ್ಲಿಂದ ತುಂಗಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ಮೂಲಕ ಬಂದು ರಸ್ತೆ ಬಂದ್ ಮಾಡಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಅವೈಜ್ಞಾನಿಕ ಕಾಮಗಾರಿ ವಿರುದ್ಧ ವೈಜ್ಞಾನಿಕ ಹೋರಾಟ ಆರಂಭಿಸಿದ್ದೇವೆ. ನಮ್ಮ ಹೋರಾಟ ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೋರಾಟದ ಕಿಚ್ಚು ಹಚ್ಚಿದ್ದು ಶಿವಮೊಗ್ಗ ಜಿಲ್ಲೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮಗೆಲ್ಲಾ ಪ್ರೇರಣೆ. ರಾಜ್ಯ ಸರ್ಕಾರ ಕಣ್ಣಿಗೆ ಕಪ್ಪು ಪಟ್ಟಿ ಹಚ್ಚಿ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸಿದರು.

ವೈಯಕ್ತಿಕವಾಗಿ ಸಿಎಂ, ಡಿಸಿಎಂ ವಿರುದ್ಧ ಟೀಕೆ ಮಾಡಲ್ಲ. ಕುರ್ಚಿ ಕದನ ನಡೀತಿದೆ. ರೈತರ ಪರ ಕೆಲಸ ಮಾಡಲು ಸಮಯ ಇಲ್ಲ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸ್ತೀವಿ. ರಕ್ತ ಚೆಲ್ಲಿಯಾದರೂ ರೈತರಿಗೆ ನ್ಯಾಯ ಕೊಡಿಸ್ತೀವಿ ಎಂದು ಹೇಳಿದರು.

ಮುಖಂಡ ಮಾಡಾಳು ಮಲ್ಲಿಕಾರ್ಜುನ ಮಾತನಾಡಿ, 65000 ಎಕರೆ ಪ್ರದೇಶಕ್ಕೆ ನೀರಿಲ್ಲ, ಅಧಿಕಾರಿಗಳು ಮಾಡಿದ ಯಡವಟ್ಟು ಇದಾಗಿದೆ. ಬೇಸಿಗೆಯಲ್ಲೇ ಎಡದಂಡೆ ನಾಲೆಗೆ ಗೇಟ್ ಕೂರಿಸಬೇಕಿತ್ತು. ಕೇವಲ 50 ಲಕ್ಷ ರು. ಹಣದಲ್ಲಿ ಆಗುವ ಕೆಲಸ ಮಾಡದೇ ಈಗ ಡ್ಯಾಂ ಖಾಲಿ ಮಾಡಲು ದಿನಾಲು 5000 ಕ್ಯುಸೆಕ್ ಬಿಡ್ತಾ ಇದ್ದಾರೆ. ಭದ್ರಾ ಬಲದಂಡೆ ಕಾಲುವೆಯಿಂದ ಕುಡಿಯುವ ನೀರು ಕೊಡಬೇಡಿ ಎಂದು ಒತ್ತಾಯಿಸಿದರು.

ಅಧಿಕಾರಿಗಳು ಸರ್ಕಾರದ ಏಜೆಂಟರಾಗಿ ರೈತ ವಿರೋಧಿ ಕೆಲಸ ಮಾಡುತ್ತಿದ್ದಾರೆ. ರೈತರ ಹೊಟ್ಟೆಯ ಮೇಲೆ ತಣ್ಣಿರು ಬಟ್ಟೆ ಹಾಕಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಟೀಕಿಸಿದರು.

ಮಾಜಿ ಶಾಸಕ ಎಂ. ಬಸವರಾಜ ನಾಯಕ ಮಾತನಾಡಿ, ಇಂದಿನದ್ದು ನಾಲ್ಕನೇ ಹೋರಾಟ. ಬಲದಂಡೆ ನಾಲೆ ೭ ಅಡಿ ಸೀಳಿ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿಗಳು ಇನ್ನೂ ಈ ಕಡೆ ತಲೆ ಹಾಕಿಲ್ಲ. ಯಾವ ಹೋರಾಟಕ್ಕೂ ಹೇಸುವುದಿಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯ ಮಂತ್ರಿಗಳು ನಮ್ಮ ಹೋರಾಟವನ್ನು ಉಪೇಕ್ಷೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕುಡಿಯುವ ನೀರು ಕೊಡಲು ನಮ್ಮ ವಿರೋಧವಿಲ್ಲ, ಆದರೆ, ಅನುಸರಿಸಿದ ವಿಧಾನಕ್ಕೆ ನಮ್ಮ ವಿರೋಧವಿದೆ. ರೈತರ ನಡುವೆ ಕಿಚ್ಚು ಹಚ್ಚಲು ಸರ್ಕಾರ ಹೊರಟಿದೆ. ದಾವಣಗೆರೆ ಜಿಲ್ಲೆಯ ರೈತರ ಆರ್ಥಿಕ ಸ್ಥಿತಿಗೆ ಬೆಂಕಿ ಹಚ್ಚಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶ ಮಾಡಿ ಕಾಮಗಾರಿ ನಿಲ್ಲಿಸದಿದ್ದರೆ ಅನಿರ್ದಿಷ್ಟವಾಧಿ ಹೋರಾಟ ಮುಂದುವರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ಧನಂಜಯ ಕಡ್ಳೇಬೇಳೆ, ಕೊನಗನಳ್ಳಿ ಸತೀಶ್, ನಾಗರಾಜ ಲೋಕಿಕೇರೆ, ಅಜಯಕುಮಾರ್, ಚಂದ್ರಶೇಖರ ಪೂಜಾರ್, ರಾಜಶೇಖರ ನಾಗಪ್ಪ, ಶಿವಕುಮಾರ, ನಾರಾಯಣ, ವಿರೂಪಾಕ್ಷಪ್ಪ ಮೊದಲಾದವರಿದ್ದರು.

ಸ್ಥಳಕ್ಕೆ ಸಿಇಒ ಹೇಮಂತ್ ಕುಮಾರ್ ಬಂದು ಮನವಿ ಪಡೆದರೂ ರೈತರು ಪ್ರತಿಭಟನೆ ನಿಲ್ಲಿಸಲು ಒಪ್ಪಲಿಲ್ಲ. ಪ್ರತಿಭಟನೆ ಮುಂದುವರೆದಿದ್ದು, ರೈತರ ಪ್ರತಿಭಟನೆಯಿಂದಾಗಿ ಸಾಗರ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ

ಶಿವಮೊಗ್ಗದ ನೀರಾವರಿ ನಿಗಮದ ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಎಂಜಿನಿಯರ್ ಕಚೇರಿಗೆ ಎದುರು ದಾವಣಗೆರೆ ಜಿಲ್ಲೆಯ ರೈತರಿಂದ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಇತ್ತು. ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ , ಡಿವೈಎಸ್ಪಿ ಬಾಬು ಅಂಜನಪ್ಪ, ಕೃಷ್ಣಮೂರ್ತಿ, ಅರವಿಂದ್ ಮೊದಲಾದವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿಎಂ ಸಿದ್ದುಗೆ ಇದು ಕೊನೆ ಅಧಿವೇಶನ: ವಿಜಯೇಂದ್ರ
ಬಿವೈವಿ ಕಲೆಕ್ಷನ್‌ ಕಿಂಗ್‌, ಕಲೆಕ್ಷನ್‌ ಬಿಚ್ಚಿಡ್ಲಾ? : ಡಿಕೆ