ಧಾರವಾಡ: ಜನಿವಾರ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆ ಸಮಯದಲ್ಲಿ ಇಂತಹ ಘಟನೆಗಳು ನಡೆದಿರುವುದು ಖಂಡನೀಯ. ಇಂತಹ ಕೆಲಸವನ್ನು ಯಾರು ಮಾಡಿದ್ದಾರೆ ಎಂದು ಸಂಪೂರ್ಣ ಮಾಹಿತಿ ಇಲ್ಲ. ಹೀಗಾಗಿ ಈ ವಿಚಾರವಾಗಿ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದರು.ಬಿಆರ್ಟಿಎಸ್ ಬದಲು ಜಾರಿಗೆ ತರುವ ಹೊಸ ಯೋಜನೆ ಕುರಿತು ಯಾರಿಗೂ ಸಂಪೂರ್ಣ ಮಾಹಿತಿ ಇಲ್ಲ. ಹೊಸ ಯೋಜನೆಯ ಡಿಪಿಆರ್ ಸಿದ್ಧವಾದ ಬಳಿಕವೇ ಸರ್ಕಾರದ ವೆಚ್ಚ, ಸಾಧಕ ಮತ್ತು ಬಾಧಕಗಳ ಕುರಿತು ಗಮನಿಸಲಾಗುವುದು. ಈಗಾಗಲೇ ಒಪ್ಪಂದವಾಗಿದ್ದು, 90 ದಿನಗಳಲ್ಲಿ ಡಿಪಿಆರ್ ನೀಡುವುದಾಗಿ ಹೇಳಿದ್ದಾರೆ. ಬಳಿಕವೇ ಸಮಗ್ರ ಚರ್ಚೆ ನಡೆಸಿ ಜನರಿಗೆ ಅನುಕೂಲವಾಗುವ ಯೋಜನೆ ರೂಪಿಸಲಾಗುವುದು ಎಂದರು.
ಗಿಗ್ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅಗ್ರಿಗೇಟರ್ ಸಂಸ್ಥೆಗಳಿಂದ ಸುಂಕ ಸಂಗ್ರಹ ಮಾಡಲಾಗುವುದು. ಕಾರ್ಮಿಕರು ತಮ್ಮ ಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ ಸೈಕಲ್ ಹಾಗೂ ಬೈಕ್ಗಳಲ್ಲಿ ಕೆಲಸ ಮಾಡುತ್ತಾರೆ. ಅವರು ರಸ್ತೆಯಲ್ಲಿ ಸೇವಿಸುವ ಇಂಗಾಲದ ಪ್ರಮಾಣವೂ ಅಧಿಕ. ಆರೋಗ್ಯವನ್ನೂ ಲೆಕ್ಕಿಸದೆ ದುಡಿಯುವವರನ್ನು ಗಮನದಲ್ಲಿಟ್ಟುಕೊಂಡು ಸೆಸ್ ಸಂಗ್ರಹ ಮಾಡಲಾಗುವುದು ಎಂದರು.ಎಲ್ಲ ಅಗ್ರಿಗೇಟರ್ ಕಂಪನಿಗಳಿಗೆ ಸಾರಾಸಗಟಾಗಿ ಶೇ. 5ರಷ್ಟು ಸೆಸ್ ವಿಧಿಸುವುದಿಲ್ಲ. ಇದನ್ನು ಅವಸರದಲ್ಲಿ ಅಂತಿಮಗೊಳಿಸುವುದಿಲ್ಲ. ಗಿಗ್ ಮಂಡಳಿ ರಚನೆಗೆ ಸಂಪುಟ ಅನುಮೋದನೆ ನೀಡಿದೆ. ಮಂಡಳಿ ರಚನೆಯಾಗಿ ನಿಯಮ ರಚಿಸುವಾಗ ಸಂಬಂಧಿಸಿದವರ ಅಭಿಪ್ರಾಯ ಪಡೆಯುತ್ತೇವೆ. ಆಸಕ್ತರನ್ನು ಸೇರಿಸಿ ಚರ್ಚಿಸುತ್ತೇವೆ. ಶೇ. 5ರಷ್ಟು ಸೆಸ್ ಯಾರಿಗೆ ಸಂಗ್ರಹಿಸಬೇಕು. ಶೇ. 5ರೊಳಗೆ ಯಾರಿಗೆ ಸಂಗ್ರಹ ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಇಡೀ ದೇಶದಲ್ಲೇ ಒಂದು ಅತ್ಯುತ್ತಮ ಗಿಗ್ ಮಸೂದೆಯನ್ನು ನಮ್ಮ ರಾಜ್ಯ ಮಾಡಿದೆ. ನಮ್ಮ ಗಿಗ್ ಮಸೂದೆಯನ್ನು ಮಾದರಿಯಾಗಿಟ್ಟುಕೊಂಡು ಬೇರೆ ರಾಜ್ಯಗಳಲ್ಲೂ ಬರಲಿದೆ. ಇದು ನಮ್ಮ ಹೆಮ್ಮೆ ಎಂದರು.
ಎಲ್ಲ ಕೆರೆಗಳಿಗೆ ನೀರು: ಏತ ನೀರಾವರಿ ಮೂಲಕ ಬೇಡ್ತಿ ನಾಲಾದಿಂದ 107 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ₹180 ಕೋಟಿ ಅನುದಾನ ನೀಡಿದೆ. ಮೊದಲ ಹಂತವಾಗಿ 42 ಕೆರೆಗಳನ್ನು ತುಂಬಿಸಲಾಗಿದೆ. ಇದೀಗ ಉಳಿದ ಕೆರೆಗಳನ್ನು ತುಂಬಿಸಲು ಸಹ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕಲಟಗಿ ಕ್ಷೇತ್ರದಲ್ಲಿನ ಎಲ್ಲ ಕೆರೆಗಳನ್ನು ಬೇಡ್ತಿ ನಾಲಾ ಮೂಲಕ ತುಂಬಿಸುವ ಕೆಲಸವಾಗಲಿದೆ ಎಂದು ಸಂತೋಷ ಲಾಡ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.