ಅರೆಮಲೆನಾಡಲ್ಲೂ ಉರಿ ಬಿಸಿಲಿನ ತಾಪ

KannadaprabhaNewsNetwork |  
Published : Mar 23, 2025, 01:36 AM IST
ಮುಂಡಗೋಡ: ಉರಿ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸಿ ಹೋಗಿದ್ದಾರೆ. ಅತಿ ಹೆಚ್ಚು ತಾಪಮಾನ ಈಗ ಕಾಣಲಾಗುತ್ತಿದ್ದು, ಜನರಲ್ಲಿ ದಿಗ್ಬ್ರಾಂತಿ ಮೂಡಿಸಿದೆ.  | Kannada Prabha

ಸಾರಾಂಶ

ಉರಿ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸಿ ಹೋಗಿದ್ದಾರೆ.

ಸಂತೋಷ ದೈವಜ್ಞ

ಮುಂಡಗೋಡ: ಉರಿ ಬಿಸಿಲಿನ ತಾಪಮಾನದಿಂದ ಜನರು ತತ್ತರಿಸಿ ಹೋಗಿದ್ದಾರೆ. ಅತಿಹೆಚ್ಚು ತಾಪಮಾನ ಈಗ ಕಾಣಲಾಗುತ್ತಿದ್ದು, ಜನರಲ್ಲಿ ದಿಗ್ಬ್ರಾಂತಿ ಮೂಡಿಸಿದೆ.

ದಿನ ಬೆಳಗಾಗಿ ಸೂರ್ಯ ಉದಯಿಸುತ್ತಿದ್ದಂತೆ ಪ್ರಾರಂಭವಾಗುವ ಬಿಸಿಲಿನ ತಾಪಮಾನ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಸೆಕೆಯಿಂದ ಜನರು ನಿಲ್ಲಲಾಗದೇ ಕುಳಿತುಕೊಳ್ಳಲಾಗದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನದ ನಂತರವಂತೂ ಫ್ಯಾನ್‌ಗಳು ಕೂಡ ಬಿಸಿಗಾಳಿ ಸೂಸುತ್ತವೆ. ಅಷ್ಟೊಂದು ಬಿಸಿಲಿನ ರಭಸವಿದೆ. ಹೊರಗೆ ತಿರುಗಾಡುವವರ ಪರಿಸ್ಥಿತಿಯಂತೂ ಹೇಳತೀರದು. ಬೆವರು ಸುರಿಸುತ್ತಲೇ ತಿರುಗಾಡಬೇಕು. ಚಪ್ಪಲಿ ಇಲ್ಲದೇ ನಡೆದಾಡುವವರ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.

ಹಿಂದೆ ಈ ಭಾಗದಲ್ಲಿ ಶೇ.೩೪-೩೫ ಉಷ್ಣಾಂಶ ವರದಿಯಾದರೆ ಆಶ್ಚರ್ಯಪಡಬೇಕಿತ್ತು. ಆದರೆ ಈಗ ನಿತ್ಯ ೩೮ಕ್ಕೂ ಅಧಿಕ ಉಷ್ಣಾಂಶ ದಾಖಲಾಗುತ್ತಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕೆಲವೊಂದು ದಿನ ಉಷ್ಣಾಂಶ ೪೦ ಡಿಗ್ರಿ ಆಗಿರುವ ಉದಾಹರಣೆ ಇದೆ. ಈ ಮೊದಲು ವಿಜಯಪುರ, ಬೀದರ್, ರಾಯಚೂರ, ಬಳ್ಳಾರಿ ಸೇರಿದಂತೆ ಬಯಲು ಸೀಮೆ ಪ್ರದೇಶದಲ್ಲಿ ಮಾತ್ರ ಹೆಚ್ಚು ಉಷ್ಣಾಂಶ ಕಾಣಲಾಗುತ್ತಿತ್ತು. ಆದರೆ ಈಗ ಅರ್ಧಕ್ಕೂ ಹೆಚ್ಚು ಪ್ರದೇಶ ಅರಣ್ಯದಿಂದ ಕೂಡಿರುವ ಅರೆ ಮಲೆನಾಡು ಮುಂಡಗೋಡ ಭಾಗದಲ್ಲೂ ಹೆಚ್ಚು ಉಷ್ಣಾಂಶ ಕಂಡುಬರುತ್ತಿದೆ. ಮಲೆನಾಡು ಕೂಡ ಬಯಲು ಸೀಮೆ ಪ್ರದೇಶಕ್ಕೆ ಹೊರತಾಗಿಲ್ಲ ಎಂಬುವುದನ್ನು ಸಾಬೀತುಪಡಿಸುತ್ತಿದೆ. ಅಂತರ್ಜಲ ಕ್ಷೀಣಿಸುತ್ತ ಸಾಗಿರುವುದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ತಾಪಕ್ಕೆ ಅರಣ್ಯ ಪ್ರದೇಶದ ಗಿಡ ಮರಗಳ ಎಲೆ ಸಂಪೂರ್ಣ ಒಣಗಿ ಉದುರಿ ಬೀಳುತ್ತಿವೆ.

ತಂಪು ಪಾನೀಯಕ್ಕೆ ಬೇಡಿಕೆ:

ಬಿಸಿಲಿನ ತಾಪ ತಡೆಯಲಾಗದ ಜನ ತಂಪು ಪಾನೀಯದ ಮೊರೆ ಹೋಗುತ್ತಿದ್ದಾರೆ. ಈ ಮೊದಲು ಕೆಲವೇ ಕೆಲ ಸ್ಥಳಗಳಲ್ಲಿ ಮಾತ್ರ ಎಳನೀರು, ಹಣ್ಣಿನ ವ್ಯಾಪಾರ ನಡೆಯುತ್ತಿತ್ತು. ಆದರೆ ಈಗ ಪಟ್ಟಣದ ಎಲ್ಲ ಪ್ರದೇಶದಲ್ಲಿ ಎಳನೀರು ಕಾಣಸಿಗುತ್ತಿದೆ. ₹೪೦ ಇದ್ದ ಎಳನೀರಿನ ಬೆಲೆ ಈಗ ₹೬೦ಕ್ಕೆ ಏರಿಕೆಯಾಗಿದೆ. ಹಣ್ಣಿನ ಪ್ಯಾಪಾರ ಕೂಡ ಜೋರಾಗಿಯೇ ನಡೆಯುತ್ತಿದೆ. ಕಲ್ಲಂಗಡಿ, ಕರ್ಬೂಜ, ಪೈನಾಪಲ್ ಗೆ ಬೇಡಿಕೆ ಹೆಚ್ಚಿದೆ.

ಜೀವಜಲ ಕೊರತೆ:

ಭೂಮಿಯಲ್ಲಿನ ಅಂತರ್ಜಲ ಮಟ್ಟ ಕುಗ್ಗಿರುವುದರಿಂದ ಕುಡಿಯುವ ನೀರಿನ ಅಭಾವ ಎದುರಾಗಿದೆ. ತಾಲೂಕಿನ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಬೋರ್‌ವೆಲ್ ನೀರು ಕಡಿಮೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ. ಕೆಲವೆಡೆ ಸ್ಥಳೀಯ ಸಂಸ್ಥೆಗಳು ಬೇರೆ ಕಡೆಯಿಂದ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ.

ನಾಡಿಗೆ ಕಾಡು ಪ್ರಾಣಿ:

ಬಿಸಿಲಿನ ಬೇಗೆಯಿಂದ ಗಿಡ ಮರಗಳೆಲ್ಲ ಒಣಗಿವೆ. ಸಣ್ಣ ಪುಟ್ಟ ಕೆರೆ-ಕಟ್ಟೆಗಳು ಕೂಡ ಬತ್ತಿರುವುದರಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಜೀವ ಕಳೆದುಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಅಲ್ಲಲ್ಲಿ ನೀರಿನ ತೊಟ್ಟಿಗಳನ್ನಿಟ್ಟು ಅದರಲ್ಲಿ ನೀರು ತುಂಬಿಸಿ ಕಾಡು ಪ್ರಾಣಿಗಳಿಗೆ ಅನುಕೂಲ ಮಾಡಿ ಕೊಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಸುತ್ತಮುತ್ತಲಿನ ಬಹುತೇಕ ಕೆರೆ-ಕಟ್ಟೆಗಳೆಲ್ಲ ಬತ್ತಿವೆ. ಇದರಿಂದ ಕುಡಿಯಲು ನೀರು ಸಿಗದೇ ಜಾನುವಾರು ಪರದಾಡುತ್ತಿದ್ದು, ಕಾಡು ಪ್ರಾಣಿಗಳು ಕೂಡ ನೀರನ್ನು ಅರಸಿ ನಾಡಿಗೆ ಬರುತ್ತಿವೆ. ಸರ್ಕಾರ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಅಗತ್ಯವಿರುವ ಕಡೆ ಪ್ರಾಣಿಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಗೌಳಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!