ರಾಜ್ಯಮಟ್ಟದ ಐದು ದಿನಗಳ ಕಬ್ ಮತ್ತು ಬುಲ್‌ಬುಲ್ ಉತ್ಸವಕ್ಕೆ ತೆರ
ಇತ್ತೀಚಿನ ದಿನಗಳಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸ್ಕೌಟಿಂಗ್ ಪ್ರಚಲಿತದಲ್ಲಿರುವುದನ್ನು ಕಾಣಬಹುದು. ಸ್ವಯಂಪ್ರೇರಿತ ಶಿಸ್ತಿನ ಜೀವನದ ಆಯ್ಕೆ ಇಂತಹ ಸಂಸ್ಥೆಗಳಿಂದ ಸಾಧ್ಯ ಎಂದು ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಹಾಗೂ ವಿಧಾನಸಭೆ ಮಾಜಿ ಅಧ್ಯಕ್ಷ ಡಾ. ಬಿ.ಎಲ್. ಶಂಕರ್ ಹೇಳಿದರು.ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಸಂಸ್ಥೆಯಿಂದ ಹೌಸಿಂಗ್ ಬೋರ್ಡ್‌ನ ಬಿಜಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ 5 ದಿನಗಳ ಕಬ್ ಮತ್ತು ಬುಲ್‌ಬುಲ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯನ್ನು ನಾವು ಸ್ಕೌಟಿಂಗ್‌ನಲ್ಲಿ ನೋಡಲು ಸಾಧ್ಯ, ಈ ರೀತಿ ಸಂಸ್ಥೆಗಳು ಮಕ್ಕಳನ್ನು ವಿಶ್ವಮಾನವನ್ನಾಗಿ ಮಾಡಲು ಸಹಕಾರಿಯಾಗಿವೆ ಎಂದರು.
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವ ನಾಣ್ಣುಡಿಯಂತೆ ಶಿಸ್ತು, ಸಮಯಪ್ರಜ್ಞೆ, ವಿಧೇಯತೆ, ರಾಷ್ಟ್ರಪ್ರೇಮ, ಸೇವೆ ಇಂತಹ ಒಳ್ಳೆಯ ನಡತೆಗಳನ್ನು ಮಕ್ಕಳಿಗೆ ಕಲಿಸುವಲ್ಲಿ ಈ ಸ್ಕೌಟ್ ಚಳುವಳಿ ಮಹತ್ತರ ಪಾತ್ರ ವಹಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಮಕ್ಕಳು ಸಹಬಾಳ್ವೆ ಮೂಲಕ ಬ್ರಾತೃತ್ವ ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.ಉತ್ಸವದ ಅಂಗವಾಗಿ ಹೊರತರಲಾದ ದಿಕ್ಸೂಚಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಭದ್ರ ಕಾಡಾ ಅಧ್ಯಕ್ಷ ಡಾ. ಅಂಶುಮಂತ್ ಪುಟ್ಟ ಮಕ್ಕಳು ಇಂತಹ ಸಂಸ್ಥೆಗಳ ಸದಸ್ಯರಾಗಿ ದೇಶಕ್ಕೆ ಕೀರ್ತಿ ತಂದು ದೇಶದ ಉತ್ತಮ ಭವಿಷ್ಯ ರೂಪಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ಮಕ್ಕಳಲ್ಲಿ ಧೈರ್ಯ, ಉತ್ಸಾಹ ಹೆಚ್ಚಾಗುತ್ತದೆ. ವಿದ್ಯಾರ್ಥಿಗಳೆಲ್ಲಾ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಉತ್ತಮವಾಗಿ ಬೆಳೆಯಬೇಕು ಎಂದರು.ನಗರಸಭೆ ಸದಸ್ಯೆ ಕವಿತಾ ಶೇಖರ್ ಮತನಾಡಿ, ವಿದ್ಯಾರ್ಥಿಗಳು ಹಾಡಿದ ಉತ್ಸವ ಗೀತೆ ಸ್ಕೌಟಿಂಗ್‌ನಲ್ಲಿ ಕಲಿಯಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಇಂತಹ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆಯಾಗಿದ್ದು ಅವರಲ್ಲಿ ಆತ್ಮಾಭಿಮಾನ ಮತ್ತು ರಾಷ್ಟ್ರಪ್ರೇಮ ಬೆಳೆಸುತ್ತದೆ ಎಂದರು.ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ಚಂದ್ರಶೇಖರ್ ಮಾತನಾಡಿ, ಇಂತಹ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಗಳನ್ನು ಬೆಳೆಸುವ ಜತೆಗೆ ವ್ಯಕ್ತಿತ್ವ ಬೆಳವಣಿಗೆಗೆ ಅನುಕೂಲಕರವಾಗಿದೆ ಎಂದು ಹೇಳಿದರು.