ಉತ್ತಮ ಸಮಾಜ ನಿರ್ಮಾಣದಲ್ಲಿ ಸ್ಕೌಟ್ಸ್‌ ಗೈಡ್ಸ್‌ ಪಾತ್ರವಿದೆ

KannadaprabhaNewsNetwork | Published : Apr 5, 2025 12:46 AM

ಸಾರಾಂಶ

ಸ್ಕೌಟ್ಸ್ ಗೈಡ್ಸ್ ಚಳವಳಿ ಹುಟ್ಟಿರುವುದೇ ಜೀವನ ಮೌಲ್ಯಗಳನ್ನು ಬಿತ್ತಿ ಬದುಕನ್ನು ಉದಾತ್ತವಾಗಿಸುವುದಕ್ಕಾಗಿ, ಸ್ಕೌಟ್ ಅಥವಾ ಗೈಡ್ ಎಂದರೆ ನಂಬಿಕೆಗೆ ಅರ್ಹವಾಗಿರುವುದು, ತಾನು ಭರವಸೆ ನೀಡಿದ್ದನ್ನು ಸಾಧ್ಯವಾದಷ್ಟು ಸಾಧಿಸಲು ಪ್ರಯತ್ನಿಸುತ್ತಾನೆ. ತನ್ನ ನಾಯಕ, ದೇಶಕ್ಕೆ ನಿಷ್ಠನಾಗಿರುವುದು. ಇತರರಿಗೆ ಸಹಾಯ ಮಾಡುವುದು, ಸಮಾಜದ ಇತರೆ ಸಂಗಡಿಗರಿಗೆ ಸಹೋದರ-ಸಹೋದರಿಯ ಸ್ಥಾನಮಾನ ನೀಡಿ ಸಾಮಾಜಿಕ ವರ್ಗದ ವ್ಯತ್ಯಾಸಗಳನ್ನು ಲೆಕ್ಕಿಸದೇ ಸಹಾಯ ಮಾಡುತ್ತಾರೆ. ವಿನಯಶೀಲ ಗುಣವನ್ನು ಹೊಂದಿ ಎಲ್ಲರಿಗೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಸಭ್ಯ ಮತ್ತು ಸಹಾಯಕವಾಗಿರುವುದು.

ಕನ್ನಡಪ್ರಭ ವಾರ್ತೆ ಆಲೂರು

ದೇವರಿಗೆ ಕರ್ತವ್ಯ, ಇತರರಿಗೆ ಕರ್ತವ್ಯ ಮತ್ತು ಸ್ವಯಂ ಕರ್ತವ್ಯ ಎಂಬ ಮೂರು ಮೂಲಭೂತ ತತ್ವಗಳ ಆಧಾರದ ಮೇಲೆ ಸ್ಕೌಟ್ಸ್, ಗೈಡ್ಸ್ ಚಳವಳಿ ಸಾಗಿಬರುತ್ತಿದೆ ಎಂದು ಹಿರಿಯ ಗೈಡರ್ ಎಚ್. ಜಿ. ಕಾಂಚನಮಾಲ ತಿಳಿಸಿದರು.

ಅವರು ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಭೈರಾಪುರದ ಎಸ್.ವಿ.ಪಬ್ಲಿಕ್ ಶಾಲೆಯಲ್ಲಿ ನೂತನ ಸ್ಕೌಟ್ಸ್, ಗೈಡ್ಸ್ ಹಮ್ಮಿಕೊಂಡಿರುವ ಏಳು ದಿನಗಳ ಮೂಲ ತರಬೇತಿ ಶಿಬಿರದಲ್ಲಿ ಮಾತನಾಡಿ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ವೈಯಕ್ತಿಕ ಆಯಾಮಗಳಿಗೆ ಸಂಬಂಧಿಸಿದ ತತ್ವಗಳು ಸ್ಕೌಟಿಂಗ್ ಆಧಾರಿತ ಮೂಲಭೂತ ಕಾನೂನುಗಳು ಮತ್ತು ನಂಬಿಕೆಗಳನ್ನು ರೂಪಿಸುತ್ತದೆ. ಸಂಸ್ಥಾಪಕರಾದ ಲಾರ್ಡ್ ಬೇಡನ್ ಪೊವೆಲ್ ಕಲ್ಪಿಸಿಕೊಂಡ ಮೂಲ ಭರವಸೆ ಮತ್ತು ಕಾನೂನು ಸ್ಫೂರ್ತಿಯ ಉಪಯುಕ್ತ ಮೂಲವಾಗಿದೆ. ಏಕೆಂದರೆ ಅದು ಚಳವಳಿಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ. ಇಲ್ಲಿ ವೈವಿಧ್ಯಮಯ ಚಟುವಟಿಕೆಗಳು, ಆಟಗಳು, ಉಪಯುಕ್ತ ಕೌಶಲಗಳು ಮತ್ತು ಸಮುದಾಯಕ್ಕೆ ಸೇವೆಗಳ ಸಮತೋಲಿತ ಸಂಯೋಜನೆಯಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಸ್ಕೌಟಿಂಗ್, ಗೈಡಿಂಗ್ ಆರಂಭವಾದಾಗಿನಿಂದ ಪ್ರಕೃತಿ ಮತ್ತು ಹೊರಾಂಗಣ ಜೀವನವನ್ನು ಇಲ್ಲಿನ ಚಟುವಟಿಕೆಗೆ ಆದರ್ಶ ಎಂದು ಪರಿಗಣಿಸಲಾಗಿದೆ. ಬೌದ್ಧಿಕ ಬೆಳವಣಿಗೆಯ ದೃಷ್ಟಿಕೋನದಿಂದ ಪ್ರಕೃತಿಯು ಪ್ರಸ್ತುತಪಡಿಸುವ ಹಲವಾರು ಸವಾಲುಗಳು ಯುವಜನರ ಸೃಜನಶೀಲ ಸಾಮರ್ಥ್ಯಗಳನ್ನು ಉತ್ತೇಜಿಸುತ್ತವೆ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಹಿರಿಯ ಫ್ಲಾಕ್ ಲೀಡರ್ ಸೋಫಿಯಾ ಫರ್ನಾಂಡೀಸ್ ಮಾತನಾಡಿ,ಸ್ಕೌಟ್ಸ್ ಗೈಡ್ಸ್ ಚಳವಳಿ ಹುಟ್ಟಿರುವುದೇ ಜೀವನ ಮೌಲ್ಯಗಳನ್ನು ಬಿತ್ತಿ ಬದುಕನ್ನು ಉದಾತ್ತವಾಗಿಸುವುದಕ್ಕಾಗಿ, ಸ್ಕೌಟ್ ಅಥವಾ ಗೈಡ್ ಎಂದರೆ ನಂಬಿಕೆಗೆ ಅರ್ಹವಾಗಿರುವುದು, ತಾನು ಭರವಸೆ ನೀಡಿದ್ದನ್ನು ಸಾಧ್ಯವಾದಷ್ಟು ಸಾಧಿಸಲು ಪ್ರಯತ್ನಿಸುತ್ತಾನೆ. ತನ್ನ ನಾಯಕ, ದೇಶಕ್ಕೆ ನಿಷ್ಠನಾಗಿರುವುದು. ಇತರರಿಗೆ ಸಹಾಯ ಮಾಡುವುದು, ಸಮಾಜದ ಇತರೆ ಸಂಗಡಿಗರಿಗೆ ಸಹೋದರ-ಸಹೋದರಿಯ ಸ್ಥಾನಮಾನ ನೀಡಿ ಸಾಮಾಜಿಕ ವರ್ಗದ ವ್ಯತ್ಯಾಸಗಳನ್ನು ಲೆಕ್ಕಿಸದೇ ಸಹಾಯ ಮಾಡುತ್ತಾರೆ. ವಿನಯಶೀಲ ಗುಣವನ್ನು ಹೊಂದಿ ಎಲ್ಲರಿಗೂ ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗೆ ಸಭ್ಯ ಮತ್ತು ಸಹಾಯಕವಾಗಿರುವುದು.ಪ್ರಾಣಿ ಸ್ನೇಹಿತನಾಗಿ ಅವುಗಳನ್ನು ನೋಯಿಸುವುದಿಲ್ಲ, ಕೊಲ್ಲುವುದಿಲ್ಲ. ಮಿತವ್ಯಯಿಯಾಗಿರುವುದರ ಜೊತೆಗೆ ಅನಗತ್ಯವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸುತ್ತಾನೆ. ಆಲೋಚನೆ, ಮಾತು ಹಾಗೂ ಕಾರ್ಯದಲ್ಲಿ ಶುದ್ಧನಾಗಿರುತ್ತಾನೆ. ಹೀಗೆ ಅನೇಕ ಬದುಕಿನ ಮೌಲ್ಯಗಳನ್ನು ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಬೆಳೆಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಹಿರಿಯ ಸ್ಕೌಟ್ ಮಾಸ್ಟರ್ ಕೆ. ಎಂ. ಸತೀಶ್ ಮಾತನಾಡಿ, ಸ್ಕೌಟಿಂಗ್ ಸಮವಸ್ತ್ರವು ಒಂದು ದೇಶದಲ್ಲಿನ ಸಾಮಾಜಿಕ ಸ್ಥಾನಮಾನದ ಎಲ್ಲಾ ವ್ಯತ್ಯಾಸಗಳನ್ನು ಮರೆಮಾಡುತ್ತದೆ ಮತ್ತು ಸಮಾನತೆಯನ್ನು ಸೃಷ್ಠಿಸುತ್ತದೆ. ಆದರೆ ಇನ್ನೂ ಮುಖ್ಯವಾಗಿ ಇದು ದೇಶ, ಜನಾಂಗ ಮತ್ತು ಧರ್ಮದ ವ್ಯತ್ಯಾಸಗಳನ್ನು ಒಳಗೊಳ್ಳುತ್ತದೆ ಮತ್ತು ಎಲ್ಲರೂ ಒಂದೇ ಮಹಾನ್ ಸಹೋದರತ್ವದ ಸದಸ್ಯರು ಎಂದು ಭಾವಿಸುವಂತೆ ಮಾಡುತ್ತದೆ. ಸ್ಕೌಟಿಂಗ್ ಮತ್ತು ಮಾರ್ಗದರ್ಶಿ ಚಳವಳಿಗಳನ್ನು ಸಾಮಾನ್ಯವಾಗಿ ವಯಸ್ಸು ಮತ್ತು ಶಾಲಾ ದರ್ಜೆಯ ಆಧಾರದ ಮೇಲೆ ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದು ಗುಂಪಿನ ಸದಸ್ಯರ ಪ್ರಬುದ್ಧತೆಗೆ ಅನುಗುಣವಾಗಿ ಚಟವಟಿಕೆಗಳನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. ಈ ವಯಸ್ಸಿನ ವಿಭಾಗಗಳು ಸ್ಥಳೀಯ ಸಂಸ್ಕೃತಿ ಮತ್ತು ಪರಿಸರಕ್ಕೆ ಹೊಂದಿಕೊಳ್ಳುವಂತೆ ಕಾಲಾನಂತರದಲ್ಲಿ ಬದಲಾಗಿದೆ. ೬-೧೦ ವರ್ಷ ವಯಸ್ಸಿನ ಗಂಡು ಮಕ್ಕಳಿಗೆ ಕಬ್ಸ್ ಎಂಥಲೂ, ಹೆಣ್ಣು ಮಕ್ಕಳಿಗೆ ಬುಲ್ ಬುಲ್ಸ್ ಎಂದು ಕರೆಯಲಾಗುತ್ತದೆ. ೧೧-೧೭ ವರ್ಷ ವಯೋಮಿತಿಯ ಗಂಡು ಮಕ್ಕಳಿಗೆ ಸ್ಕೌಟ್ಸ್ ಎಂಥಲೂ ಹೆಣ್ಣು ಮಕ್ಕಳಿಗೆ ಗೈಡ್ಸ್ ಎಂದು ಕರೆಯಲಾಗುತ್ತದೆ. ೧೮-೨೫ ವರ್ಷ ವಯೋಮಿತಿಯ ಗಂಡು ಮಕ್ಕಳಿಗೆ ರೋರ್ಸ್‌ ಎಂಥಲೂ ಕರೆಯಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ೪೦ ಶಿಬಿರಾರ್ಥಿಗಳು ಸೇರಿದಂತೆ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ. ಈ. ಗಿರೀಶ್, ಪ್ರಾಂಶುಪಾಲೆ ನಳಿನಾ ಗಿರೀಶ್, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಕಬ್ ಮಾಸ್ಟರ್ ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article