ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನ: ಡಾ. ಭಗವಾನ್

KannadaprabhaNewsNetwork |  
Published : Mar 25, 2026, 03:00 AM IST
ಪದವಿ  | Kannada Prabha

ಸಾರಾಂಶ

ದೇಹ ಮತ್ತು ಮನಸ್ಸಿನ ಆರೋಗ್ಯ ರಕ್ಷಣೆಗೆ ಯೋಗಾಭ್ಯಾಸ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ ಅತ್ಯಂತ ಪರಿಣಾಮಕಾರಿಯಾಗಿದ್ದು ಪಾರಂಪರಿಕ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಉಪಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದರು.

ಬೆಳ್ತಂಗಡಿ: ದೇಹ ಮತ್ತು ಮನಸ್ಸಿನ ಆರೋಗ್ಯ ರಕ್ಷಣೆಗೆ ಯೋಗಾಭ್ಯಾಸ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ ಅತ್ಯಂತ ಪರಿಣಾಮಕಾರಿಯಾಗಿದ್ದು ಪಾರಂಪರಿಕ ಪದ್ಧತಿಯ ಬಗ್ಗೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಉಪಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದದಲ್ಲಿ ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜಿನ ಮೂವತ್ತೊಂದನೆ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ ನೂತನ ಪದವೀಧರರಿಗೆ ಶುಭ ಹಾರೈಸಿದರು.ಪ್ರಕೃತಿಯಿಂದ ವಿಮುಖವಾದ ಆಧುನಿಕ ಜೀವನಶೈಲಿ, ಆಹಾರ ಸೇವನಾ ಕ್ರಮ, ಬೀಡಿ, ಸಿಗರೇಟು ಸೇವನೆ, ಮದ್ಯಪಾನ ಮೊದಲಾದ ದುಶ್ಚಟಗಳಿಗೆ ಬಲಿಯಾಗುವುದು ಇತ್ಯಾದಿ ಕಾರಣಗಳಿಂದ ಯುವಜನತೆ ದಾರಿತಪ್ಪುತ್ತಿದ್ದಾರೆ. ಹೆಚ್ಚಾಗಿ ಯುವತಿಯರು ಕೂಡಾ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯಭಾಗ್ಯ ಕಳೆದುಕೊಳ್ಳುತ್ತಿರುವುದು ಖೇದಕರ ಎಂದರು.ಪ್ರಾಚೀನ ಕಾಲದಿಂದಲೂ ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಯೋಗಾಭ್ಯಾಸ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮೊದಲಾದವುಗಳ ಮೂಲಕ ಆರೋಗ್ಯಭಾಗ್ಯ ಕಾಪಾಡಿಕೊಳ್ಳುತ್ತಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ಪ್ರಕೃತಿಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಲಾಗುವುದು. ಇದಕ್ಕಾಗಿ ಬೆಂಗಳೂರಿನಲ್ಲಿ ಸದ್ಯದಲ್ಲಿಯೇ 60 ಎಕ್ರೆ ಪ್ರದೇಶದಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದರು.

ಉಜಿರೆ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಶಾಂತಿವನದಲ್ಲಿ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಸೇವೆ-ಸಾಧನೆಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು.ಕಾಲೇಜು ಮತ್ತು ಆಸ್ಪತ್ರೆಯ ಪ್ರಗತಿಗೆ ವಿಶ್ವವಿದ್ಯಾಲಯದಿಂದ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಕಾಲೇಜಿನ ಉಪಪ್ರಾಂಶುಪಾಲ ಡಾ. ಸುಜಾತೆ ಕೆ.ಜೆ. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಪ್ರಥಮವಾಗಿ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಉಪನ್ಯಾಸಕಿ ಡಾ. ಗೀತಾ ಬಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಬೆಳೆದು ಬಂದ ಹಾದಿ ಹಾಗೂ ಉತ್ತಮ ಸೇವೆ ಬಗ್ಗೆ ಪ್ರಾಂಶುಪಾಲರು ಹಾಗೂ ವೈದ್ಯರನ್ನು ಅಭಿನಂದಿಸಿದರು.ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಕೆ. ವಂದಿಸಿದರು.

ಡಾ. ರಿಷಿಕಾ ಮತ್ತು ಕಾವ್ಯ ಎಂ. ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿ
ಇಂದು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿಸ್ತರಿತ ಕಟ್ಟಡ ಉದ್ಘಾಟನೆ