ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧೆ: ರಿಯಾಜ್ ಫರಂಗಿಪೇಟೆ

KannadaprabhaNewsNetwork |  
Published : Feb 26, 2024, 01:37 AM IST
25ಕೆಪಿಎಲ್4:ಕೊಪ್ಪಳದ ನಗರದ ಶಾದಿಮಹಲಿನಲ್ಲಿ ಭಾನುವಾರ ಜರುಗಿದ  ಎಸ್ಡಿಪಿಐ ಪಕ್ಷದ ಸಮಾವೇಶದಲ್ಲಿ ಎಸ್ಡಿಪಿಐ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಪರಂಗಿಪೇಟೆ ಮಾತನಾಡಿದರು. | Kannada Prabha

ಸಾರಾಂಶ

ಮುಸ್ಲಿಂ ಸಮುದಾಯ ಅನಿವಾರ್ಯದ ರಾಜಕೀಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧಿಸಲಿದೆ.

ಕೊಪ್ಪಳ: ಮುಸ್ಲಿಂ ಸಮುದಾಯ ಅನಿವಾರ್ಯದ ರಾಜಕೀಯ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧಿಸಲಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಫರಂಗಿಪೇಟೆ ಹೇಳಿದರು.

ನಗರದ ಶಾದಿಮಹಲಿನಲ್ಲಿ ಭಾನುವಾರ ಜರುಗಿದ ಎಸ್‌ಡಿಪಿಐ ಸಮಾವೇಶದಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐ ಸಂವಿಧಾನದ ಆಶಯಗಳೊಂದಿಗೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಕ್ಷದ ಕಾರ್ಯಕರ್ತರು ಸಾಮಾಜಿಕ ನ್ಯಾಯಕ್ಕಾಗಿ ಧ್ವನಿ ಎತ್ತಲು ಸಿದ್ಧರಿರಬೇಕು. ಪಕ್ಷ ಯಾವುದೇ ಧರ್ಮದ ವಿರೋಧಿ ಅಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ ಎಂದರು.ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮರು ಶೇ. 95 ಮತವನ್ನು ಕಾಂಗ್ರೆಸ್ಸಿಗೆ ಹಾಕಿದ್ದು ಸಮುದಾಯದ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ನೆಮ್ಮದಿಯಿಂದ ಓದಲು ಅವಕಾಶ ಕೊಡುತ್ತಾರೆ, ದೌರ್ಜನ್ಯ ಮಾಡುವ ಸಂಘಟನೆ, ವ್ಯಕ್ತಿಗಳನ್ನು ಜೈಲಿಗೆ ಹಾಕುತ್ತಾರೆ ಎಂದುಕೊಂಡಿದ್ದೆವು. ಆದರೆ ಮುಸ್ಲಿಂ‌ ಮಹಿಳೆಯರ ಅವಹೇಳನ ಮಾಡಿದ ಪ್ರಭಾಕರ ಭಟ್ ಬಂಧಿಸಲು ಆಗಲಿಲ್ಲ. 2ಬಿ ಮುಸ್ಲಿಂ ಮೀಸಲಾತಿ ಸಿಗುವ ನಿರೀಕ್ಷೆ ಸುಳ್ಳಾಗಿದೆ. ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನ ಕೊಡುವ ಮಾತು ಹೇಳಿದ್ದರು. ಬಜೆಟ್‌ನಲ್ಲಿ ಶೇ. 1ಕ್ಕಿಂತ ಕಡಿಮೆ ಅನುದಾನ ಘೋಷಿಸಿದ್ದಾರೆ ಎಂದರು.ಒಗ್ಗಟ್ಟಾಗಿ ರಾಜಕೀಯ ಶಕ್ತಿಯಾಗಿ ಬೆಳೆಯುವ ಬಗ್ಗೆ ಮುಸ್ಲಿಮರು ಆತ್ಮಾವಲೋಕನ ಮಾಡಬೇಕಿದೆ. ರಾಜಕೀಯ ನಾಯಕರ ಹಿಂಬಾಲಕರಾಗದೇ ಪ್ರಬುದ್ಧತೆಯ ರಾಜಕಾರಣ ಮಾಡಿದರೆ ಕೊಪ್ಪಳದಲ್ಲಿ ಮುಂದಿನ ಶಾಸಕರು ಎಸ್‌ಡಿಪಿಐನವರು ಆಗುತ್ತಾರೆ ಎಂದರು.ದೇಶದಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುತ್ತಿದೆ. ದೇಶದಲ್ಲಿ ಬಿಜೆಪಿ ಸೋಲಿಸುವುದು ಇಂಡಿಯಾ ಮೈತ್ರಿಕೂಟದಿಂದ ಸಾಧ್ಯವಿಲ್ಲ. ದಲಿತರು, ಅಲ್ಪಸಂಖ್ಯಾತರು ಸೇರಿದ ಪಕ್ಷಗಳ ಮಹಾಮೈತ್ರಿಯಿಂದ ಬಿಜೆಪಿ ಸೋಲಿಸಲು ಸಾಧ್ಯ. ಆದರೆ ಇಂಡಿಯಾ ಮೈತ್ರಿಕೂಟದಲ್ಲಿ ಮುಸ್ಲಿಂ ನಾಯಕತ್ವದ ಪಕ್ಷಗಳನ್ನು ಸೇರಿಸಿಕೊಂಡಿಲ್ಲ ಎಂದರು.ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹುಜೂರ್ ಅಹಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಜಾಮುದ್ದೀನ್ ಮಾಳೆಕೊಪ್ಪ, ಜಿಲ್ಲಾ ಸಮಿತಿ ಸದಸ್ಯ ಸಲೀಂ ಖಾದ್ರಿ, ಪಕ್ಷದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹಮ್ಮದ್ ಸಾದಿಕ್, ಕಾರ್ಯದರ್ಶಿ ಅರ್ಷದ್ ಶೇಕ್, ಉಪಾಧ್ಯಕ್ಷ ಫಾರೂಕ್, ಜಿಲ್ಲಾ ಅಧ್ಯಕ್ಷ ಸಲೀಂ ಮನಿಯಾರ್, ಜಿಲ್ಲಾ ಕಾರ್ಯದರ್ಶಿ ಯುಸೂಫ್ ಮೋದಿ ಇದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ