ಉತ್ತರ ಪ್ರದೇಶದ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ । ಮಸೀದಿಯನ್ನು ಮಂಡಳಿಯ ಒಡೆತನಕ್ಕೆ ಬಿಟ್ಟುಕೊಡಬೇಕೆಂದು ಆಗ್ರಹ
ನಗರದ ಸುಲ್ತಾನ್ ಷರೀಪ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಉತ್ತರ ಪ್ರದೇಶದ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಅಬ್ರಾರ್ ಅಹಮದ್ "೧೯೯೧ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ ೧೯೪೭ ಆಗಸ್ಟ್ ೧೫ ರಂದು ದೇಶದಾದ್ಯಂತ ಈಗಾಗಲೇ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳವನ್ನು (ಬಾಬರಿ ಮಸೀದಿ ಹೊರತುಪಡಿಸಿ) ಯಥಾ ಸ್ಥಿತಿಯಲ್ಲಿ ಮುಂದುವರಿಸಬೇಕೆಂದೂ ಹಾಗೂ ಯಾವುದೇ ರೀತಿಯ ವಿವಾದಗಳಿಗಾಗಲಿ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲ ಎಂದು ಸದರಿ ಕಾಯಿದೆಯಲ್ಲಿ ಅತ್ಯಂತ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಕಾನೂನಿನ ಹೊರತಾಗಿಯೂ ಮಸೀದಿಯ ಮೇಲೆ ದುರುದ್ದೇಶ ಪೂರಿತ ವಿವಾದವನ್ನು ಸೃಷ್ಟಿಸಿ ಸಮುದಾಯಗಳ ನಡುವೆ ದ್ವೇಷ ಸಂಘರ್ಷವನ್ನು ನಡೆಸುವ ಹುನ್ನಾರ ಮಾಡಿರುವುದು ಅತ್ಯಂತ ಖಂಡನೀಯ ಎಂದರು.ವಾರಣಾಸಿ ಜಿಲ್ಲಾ ನ್ಯಾಯಾಧೀಶರು ತನ್ನ ನಿವೃತ್ತಿಯ ಒಂದು ದಿನಕ್ಕೆ ಮೊದಲು ತರಾತುರಿಯಲ್ಲಿ ಪೂಜೆಗೆ ಅವಕಾಶ ಕೊಡುವ ತೀರ್ಪು ನೀಡಿದ ಕ್ರಮವು ಕೂಡ ಅತ್ಯಂತ ಕಳವಳಕಾರಿಯಾಗಿದೆ. ಸುಮಾರು 400 ವರ್ಷಗಳಿಗೂ ಹಿಂದೆ ಸ್ಥಾಪಿಸಲ್ಪಟ್ಟ ಈ ಮಸೀದಿಯಲ್ಲಿ ನಮಾಜ್ ಪ್ರಾರ್ಥನೆ ನಡೆಯುತ್ತಲೇ ಬಂದಿತ್ತು ಎಂದರು.
ಇಂತಹ ಕ್ಷುದ್ರ ವಿವಾದಗಳನ್ನು ಹುಟ್ಟು ಹಾಕುವವರು ಎಷ್ಟೇ ಪ್ರಭಾವಿತರಾಗಿದ್ದರೂ ನ್ಯಾಯಾಲಯವು ಅವರ ಮೇಲೆ ನಿರ್ಧಾಕ್ಷಿಣ್ಯ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಮಾತ್ರವಲ್ಲದೆ ೧೯೯೧ರ ಪ್ರಾರ್ಥನಾ ಸ್ಥಳದ ಕಾಯಿದೆ ಪ್ರಕಾರ ದೇಶದಾದ್ಯಂತ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು ಹಾಗೂ ಯಥಾಸ್ಥಿತಿಯನ್ನು ಕಾಪಾಡಬೇಕು. ಜ್ಞಾನ ವಾಪಿ ಮಸೀದಿಯಲ್ಲಿ ಯಾವುದೇ ಕಾರಣಕ್ಕೂ ವಿವಾದಗಳನ್ನು ಹುಟ್ಟು ಹಾಕಲು ಬಿಡದೆ ಸಂಪೂರ್ಣವಾಗಿ ಮಸೀದಿಯನ್ನು ಮಂಡಳಿಯ ಒಡೆತನಕ್ಕೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು.