ಇರುವ ಗಿಡ ಕಡಿದು ನೆರಳಿಗಾಗಿ ಹುಡುಕಾಟ

KannadaprabhaNewsNetwork | Published : Apr 23, 2025 12:31 AM

ಸಾರಾಂಶ

ತಾಂತ್ರಿಕತೆಗೆ ಮಾರು ಹೋಗಿರುವ ಮನುಷ್ಯ ಕಟ್ಟಡ ನಿರ್ಮಾಣಕ್ಕೆ ಗಿಡ-ಮರ ಕಡಿಯುತ್ತಿದ್ದಾನೆ. ಪ್ರತಿಯೊಬ್ಬರು ಅರಣ್ಯ, ವನ್ಯಜೀವಿ ಹಾಗೂ ವಾಯುಮಾಲಿನ್ಯ, ಜಲಮಾಲಿನ್ಯ ಹಾಳಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ.

ಕುಷ್ಟಗಿ:

ಗಿಡಗಳನ್ನು ಕಡಿದು ನೆರಳಿಗಾಗಿ ಹುಡುಕಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸದ ಸಂಗತಿ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ ಹೇಳಿದರು.

ತಾಲೂಕಿನ ಗುಡಿಕಲಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಅರಣ್ಯ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ಆಶ್ರಯದಲ್ಲಿ ನಡೆದ ವಿಶ್ವ ಭೂಮಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಲ್ಲಿರುವ ಸಂಪನ್ಮೂಲ ಸಂರಕ್ಷಿಸಿ ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದರು.

ತಾಂತ್ರಿಕತೆಗೆ ಮಾರು ಹೋಗಿರುವ ಮನುಷ್ಯ ಕಟ್ಟಡ ನಿರ್ಮಾಣಕ್ಕೆ ಗಿಡ-ಮರ ಕಡಿಯುತ್ತಿದ್ದಾನೆ. ಪ್ರತಿಯೊಬ್ಬರು ಅರಣ್ಯ, ವನ್ಯಜೀವಿ ಹಾಗೂ ವಾಯುಮಾಲಿನ್ಯ, ಜಲಮಾಲಿನ್ಯ ಹಾಳಾಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ದಿನದಿಂದ ದಿನಕ್ಕೆ ಕಾಡಿನ ಪ್ರಮಾಣ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಶೇ. 20ರಷ್ಟು ಇದ್ದರೆ, ಜಿಲ್ಲೆಯಲ್ಲಿ ಶೇ.7ರಷ್ಟಿದೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಭೂಮಿ ಮಾರಾಟ ಮಾಡುವುದನ್ನು ಬಿಡಬೇಕಾಗಿದೆ. ಇದರ ಜತೆಗೆ ನಾವು ಭೂಮಿಯ ಮೇಲಿರುವ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ಒಂದು ಎಕರೆಯ ಭೂಮಿಯಲ್ಲಿ ಕನಿಷ್ಠ ಎಂಟು ಗಿಡಗಳನ್ನಾದರೂ ನೆಡಬೇಕು. ಮುಂದಿನ ದಿನಗಳಲ್ಲಿ ಭೂಮಿ ಇರಲಾರದೆ ಹೋದರೆ ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಲಿದ್ದು ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಎಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಶಿವರಾಜ ಮೇಟಿ ಮಾತನಾಡಿ, ಜನಸಂಖ್ಯೆ ಹೆಚ್ಚಾದಂತೆ ಭೂಮಿ ಹೆಚ್ಚಾಗುವುದಿಲ್ಲ. ಲಭ್ಯವಿರುವ ಭೂಮಿಯಲ್ಲಿ ಜೀವನ ಸಾಗಿಸಬೇಕಾಗಿದೆ ಎಂದರು.

ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕಿ ಇಂದಿರಾ ಸುಹಾಸಿನಿ, ಅಪರ ಸರ್ಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಸತೀಶ ಲುಕ್ಕ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ, ಪೊಲೀಸ್‌ ಇಲಾಖೆ ಸಿಬ್ಬಂದಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ಇದ್ದರು.

Share this article