ಹಳಿಯಾಳ: ಕಬ್ಬಿನ ದರ ನಿಗದಿಗಾಗಿ ಶುಕ್ರವಾರ ಸಂಜೆ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಖಾನೆ ಅಧಿಕಾರಿಗಳ ಹಾಗೂ ಕಬ್ಬು ಬೆಳೆಗಾರರ ಮಧ್ಯೆ ನಡೆದ ಎರಡನೇ ಸಭೆಯೂ ವಿಫಲವಾಗಿದೆ. ಯಾವುದೇ ತೀರ್ಮಾನ ಕಾಣದ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರು ಅಹೋರಾತ್ರಿ ಹೋರಾಟ ಮುಂದುವರಿಸಿದ್ದಾರೆ.
ಕಬ್ಬು ದರ ನಿಗದಿ, ಇನ್ನಿತರ ಬೇಡಿಕೆಗಳಿಗಾಗಿ ಕಬ್ಬು ಬೆಳೆಗಾರರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ ಹಿನ್ನೆಲೆಯಲ್ಲಿ ಸಂಧಾನಕ್ಕೆ ಧಾವಿಸಿದ ಕಾರ್ಖಾನೆಯ ಅಧಿಕಾರಿಗಳ ನಿಯೋಗವು ಸುದೀರ್ಘ ಸಭೆ ನಡೆಸಿತು. ಮೊದಲಿನ ದರ ₹3050 ಪ್ರತಿ ಟನ್ ಕಬ್ಬಿಗೆ ₹50 ಹೆಚ್ಚಿಸಿ ₹3100 ನೀಡುವುದಾಗಿ ಹೇಳಿತ್ತು. ಆದರೆ ಕಬ್ಬು ಬೆಳೆಗಾರರು ಕಾರ್ಖಾನೆಯ ಪ್ರಸ್ತಾವನೆ ತಿರಸ್ಕರಿಸಿ ಪ್ರತಿ ಟನ್ ಕಬ್ಬಿಗೆ ₹3350 ನೀಡಬೇಕೆಂದು ಪಟ್ಟು ಹಿಡಿದರು. ಇನ್ನೊಮ್ಮೆ ದರ ಪರಿಶೀಲನೆ ನಡೆಸಲು ಕಾರ್ಖಾನೆ ಅಧಿಕಾರಿಗಳಿಗೆ ತಹಸೀಲ್ದಾರ್ ಸಲಹೆ ನೀಡಿದರು. ಅದರಂತೆ ಶುಕ್ರವಾರ ಸಂಜೆ ಎರಡನೇ ಸುತ್ತಿನ ಸಭೆ ನಡೆಯಿತು. ಕಾರ್ಖಾನೆಯವರು ನಡೆ ಕಬ್ಬು ಬೆಳಗಾರರನ್ನು ಕೆರಳಿಸಿತು.ನಿನ್ನೆ ₹50 ಇವತ್ತು ₹20 ಮಾತ್ರ ಏರಿಕೆ: ಕಾರ್ಖಾನೆಯವರು ಗುರುವಾರ ₹50 ದರ ಏರಿಕೆ ಮಾಡಿದರೆ ಶುಕ್ರವಾರ ನಡೆದ ಎರಡನೇ ಸಭೆಯಲ್ಲಿ ಕೇವಲ ₹20 ದರ ಏರಿಕೆ ಮಾಡಿದರು. ಕಾರ್ಖಾನೆಯವರ ಘೋಷಿಸಿದ ದರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಬ್ಬು ಬೆಳೆಗಾರರ ಮುಖಂಡರು, ಯಾವುದೇ ಕಾರಣಕ್ಕೂ ಈ ದರವನ್ನು ತಾವು ಒಪ್ಪುವುದಿಲ್ಲ, ಅದರ ಬದಲು ಪ್ರತಿ ಟನ್ ಕಬ್ಬಿಗೆ ₹3300 ನೀಡುವಂತೆ ಬೇಡಿಕೆ ಇಟ್ಟರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎಂದು ಕಾರ್ಖಾನೆಯ ಹಿರಿಯ ಅಧಿಕಾರಿ ಬಾಲಾಜಿ ಅಸಹಾಯಕತೆ ವ್ಯಕ್ತಪಡಿಸಿದರು.
ಎಫ್‌ಆರ್‌ಪಿ ದರ ₹4000 ನೀಡಿ: ರೈತರೇ ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ಸಾಗಾಟ ಮಾಡುತ್ತಾರೆ, ಅದಕ್ಕೆ ಸರ್ಕಾರ ಘೋಷಿಸಿದ ಎಫ್‌ಆರ್‌ಪಿ ₹4000 ನೀಡಬೇಕು. ಅದಕ್ಕಿಂತ ಮೊದಲು ತಾಲೂಕಿನೆಲ್ಲೆಡೆ ಬಂದಿರುವ ಕಬ್ಬು ಕಟಾವು ತಂಡಗಳನ್ನು ಹಿಂದಕ್ಕೆ ಪಡೆಯಬೇಕು ಎಂಬ ಹೊಸ ಪ್ರಸ್ತಾವನೆಯನ್ನು ಕಬ್ಬು ಬೆಳೆಗಾರರ ಪ್ರಮುಖರಾದ ನಾಗೇಂದ್ರ ಜಿವೋಜಿ ಹಾಗೂ ಕುಮಾರ ಬೊಬಾಟೆ ಮಂಡಿಸಿದರು. ಆದರೆ ಈ ಹೊಸ ಪ್ರಸ್ತಾವನೆಗೆ ಕಾರ್ಖಾನೆಯವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಕಬ್ಬು ಬೆಳೆಗಾರರ ರಾಜ್ಯ ಮುಖಂಡರಾದ ಚೂನಪ್ಪಾ ಪೂಜಾರಿ, ಸಮರ್ಥ ಪಾಟೀಲ, ಸುರೇಶ ಘಾಡಿ ಸಭೆಗೆ ಆಗಮಿಸಿದ್ದರು.