ಪರೀಕ್ಷೆಯಲ್ಲಿ ಶೇ 90.24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಶೇ 86.89, ಬಾಲಕರು ಶೇ 83.97 ತೇರ್ಗಡೆಯಾಗಿ ಈ ಫಲಿತಾಂಶ ಬಂದಿದೆ. ಈ ಬಾರಿ ಜಿಲ್ಲಾದ್ಯಂತ ಸರಿ ಸುಮಾರು 12,816 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ದ್ವಿತೀಯ ಪಿಯುಸಿ ಫಲಿತಾಂಶ 11 ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆ ಜಿಗಿದಿದೆ.
ಜಿಲ್ಲೆಯಲ್ಲಿ ಅಂದುಕೊಂಡಂತೆ ಈ ಬಾರಿಯೂ ಹೆಣ್ಣು ಮಕ್ಕಳೆ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಯಲ್ಲಿ ಶೇ 90.24 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಬಾಲಕಿಯರು ಶೇ 86.89, ಬಾಲಕರು ಶೇ 83.97 ತೇರ್ಗಡೆಯಾಗಿ ಈ ಫಲಿತಾಂಶ ಬಂದಿದೆ. ಈ ಬಾರಿ ಜಿಲ್ಲಾದ್ಯಂತ ಸರಿ ಸುಮಾರು 12,816 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,663 ವಿದ್ಯಾರ್ಥಿಗಳು, 7153 ವಿದ್ಯಾರ್ಥಿನಿಯರು ಇದ್ದರು.
ಒಟ್ಟು12,816 ವಿದ್ಯಾರ್ಥಿಗಳಲ್ಲಿ 10,970 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ 4,755 ವಿದ್ಯಾರ್ಥಿಗಳು, 6,215 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.ಕಲಾ ವಿಭಾಗದಲ್ಲಿ 1156 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 789 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5165 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 4362 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 6495 ವಿದ್ಯಾರ್ಥಿಗಳು ಪರಿಕ್ಷೆಗೆ ಹಾಜರಾಗಿದ್ದು, 5819 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಶೇ.100 ರಷ್ಟು ಪಿ.ಯು. ಫಲಿತಾಂಶ:
ನಗರದ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶವು ಶೇ. 100ರಷ್ಟು ಬಂದಿದ್ದು, ವಾಣಿಜ್ಯ ವಿಭಾಗದಲ್ಲಿ ಭುವನ. ಸಿ.ಎ. ವಿದ್ಯಾರ್ಥಿನಿಯು 596 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಸಮೀಕ್ಷ ಎನ್. 594 ಅಂಕಗಳನ್ನು ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಒಟ್ಟು 838 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿರುತ್ತಾರೆ. ಗಣಿತ ವಿಷಯದಲ್ಲಿ ಒಟ್ಟು 201 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ. ಒಟ್ಟು 1094 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ರಷ್ಟು ಫಲಿತಾಂಶವು ಬಂದಿರುತ್ತದೆ.
ಕಳೆದ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಪಿಯುಸಿ ಫಲಿತಾಂಶದಲ್ಲಿ 11ನೇ ಸ್ಥಾನ ಪಡೆದಿತ್ತು. ಆದರೆ ಈ ಬಾರಿ 4 ಸ್ಥಾನ ಜಿಗಿದಿರುವ ಜಿಲ್ಲೆ 8ನೇ ಸ್ಥಾನ ಪಡೆದಿದೆ. ಇದರಿಂದ ಹೆಚ್ಚು ಒತ್ತಡದಲ್ಲಿದ್ದ ಶಿಕ್ಷಣ ಇಲಾಖೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದೆ. ಉಳಿದಂತೆ ಇಂದಿನ ಫಲಿತಾಂಶ ಕೊನೆಯಲ್ಲ. ಶೀಘ್ರದಲ್ಲಿಯೇ ಸರ್ಕಾರ ಪೂರಕ ಪರೀಕ್ಷೆ ನಡೆಸಲಿದ್ದು, ಈ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮತ್ತೆ ಉತ್ತೀರ್ಣರಾಗಿ ತಮ್ಮ ಶೈಕ್ಷಣಿಕ ಜೀವನ ಮುಂದುವರಿಸಬಹುದಾಗಿದೆ. ಹಾಗಾಗಿ ಯಾವುದೇ ಮಕ್ಕಳು ದುಡುಕದೆ ಪೂರಕ ಪರೀಕ್ಷೆಗೆ ಸಿದ್ಧರಾಗಿ, ಅಲ್ಲದೆ ವಿಷಯಗಳು ಕಡಿಮೆ ಇರುವ ಕಾರಣ ಹೆಚ್ಚಿನ ಸಮಯ ವ್ಯಾಸಂಗಕ್ಕೆ ಮೀಸಲಿಟ್ಟು ಅಭ್ಯಾಸ ಮಾಡಿದರೆ ತಪ್ಪದೇ ನೀವು ಜಯಶೀಲರಾಗುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಯಾವುದೇ ವಿದ್ಯಾರ್ಥಿ ಇಂದಿನ ಫಲಿತಾಂಶದಲ್ಲಿ ಅನುತ್ತೀರ್ಣರಾದ ಕಾರಣಕ್ಕೆ ದುಡುಕುವುದು ಬೇಡ. ಪೂರಕ ಪರೀಕ್ಷೆಗೆ ಸಿದ್ಧರಾಗುವುದು ಎಂದು ಪಿಯು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಆದಿಶೇಷರಾವ್ ಮನವಿ ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.