ಈ ಬಾರಿ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 30,434 ಪರೀಕ್ಷಾರ್ಥಿಗಳು
43 ಪರೀಕ್ಷಾ ಕೇಂದ್ರ, ಸಿಸಿ ಕ್ಯಾಮೆರಾ ಕಣ್ಗಾವಲುಕನ್ನಡಪ್ರಭ ವಾರ್ತೆ ಬಳ್ಳಾರಿ
ವಿದ್ಯಾರ್ಥಿ ಭವಿಷ್ಯದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ಮಾ. 1ರಿಂದ 20ರ ವರೆಗೆ ನಡೆಯಲಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.ಈ ಬಾರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 30,434 ಜನರು ಪರೀಕ್ಷೆ ಬರೆಯುತ್ತಿದ್ದು, ಈ ಪೈಕಿ ರೆಗ್ಯುಲರ್ 27,095 ವಿದ್ಯಾರ್ಥಿಗಳು, 985 ಖಾಸಗಿ ಹಾಗೂ 2,354 ಪುನರಾವರ್ತಿತ ಅಭ್ಯರ್ಥಿಗಳು ಪರೀಕ್ಷೆ ಎದುರಿಸುವರು.
ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 9,859 ಜನರು ಕಲಾ ವಿಭಾಗ, ವಾಣಿಜ್ಯ 6,759 ಹಾಗೂ ವಿಜ್ಞಾನ ವಿಭಾಗದ 10,477 ಪರೀಕ್ಷೆ ಬರೆಯುವರು. 15,538 ವಿದ್ಯಾರ್ಥಿನಿಯರು, 14,896 ವಿದ್ಯಾರ್ಥಿಗಳು ಇದ್ದಾರೆ. ವಿಜಯನಗರ ಜಿಲ್ಲೆಗೆ ಸೇರಿದ ವಿದ್ಯಾರ್ಥಿಗಳೇ ಹೆಚ್ಚು.43 ಪರೀಕ್ಷಾ ಕೇಂದ್ರಗಳು:
43 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಬಳ್ಳಾರಿ ಜಿಲ್ಲೆಯಲ್ಲಿ 20 ಹಾಗೂ ವಿಜಯನಗರ ಜಿಲ್ಲೆಯಲ್ಲಿ 23 ಕೇಂದ್ರಗಳಿವೆ. ಸಿರುಗುಪ್ಪ -3, ಸಂಡೂರು- 2, ಬಳ್ಳಾರಿ- 12, ಕಂಪ್ಲಿ- 2, ಕುರುಗೋಡು-1, ಹೊಸಪೇಟೆ- 6, ಹಗರಿಬೊಮ್ಮನಹಳ್ಳಿ- 3, ಹಡಗಲಿ- 3, ಕೂಡ್ಲಿಗಿ -2, ಹರಪನಹಳ್ಳಿ -5, ಕೊಟ್ಟೂರು -3, ಮರಿಯಮ್ಮನಹಳ್ಳಿ- 1 ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಎಲ್ಲ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.ವಾಚ್, ಮೊಬೈಲ್ ನಿಷೇಧ:
ಪರೀಕ್ಷಾರ್ಥಿಗಳು ರಿಸ್ಟ್ ವಾಚ್ ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕರು ಹೊರತುಪಡಿಸಿ, ಯಾವೊಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ನಕಲಿ ಪ್ರಶ್ನೆಪತ್ರಿಕೆಗಳನ್ನು ಫೋಟೋ ತೆಗೆದು ವಾಟ್ಸ್‌ಆ್ಯಪ್ ಮೂಲಕ ಕಳಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಸೃಷ್ಟಿಸುವವರ ವಿರುದ್ಧ ಶಿಸ್ತು ಕ್ರಮ ಜರುಗಿಲು ಪೊಲೀಸ್ ಇಲಾಖೆ ಮುಂದಾಗಲಿದೆ.172 ಪಪೂ ಕಾಲೇಜುಗಳು:
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 172 ಪದವಿ ಪೂರ್ವ ಕಾಲೇಜುಗಳಿದ್ದು, ಬಳ್ಳಾರಿ ಜಿಲ್ಲೆಯಲ್ಲಿ 81 ಹಾಗೂ ವಿಜಯನಗರ ಜಿಲ್ಲೆಯಲ್ಲಿ 91 ಇವೆ. ಈ ಪೈಕಿ ಉಭಯ ಜಿಲ್ಲೆಗಳಲ್ಲಿ 48 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಬಳ್ಳಾರಿ 20 ಹಾಗೂ ವಿಜಯನಗರ ಜಿಲ್ಲೆಯಲ್ಲಿ 28 ಸರ್ಕಾರಿ ಕಾಲೇಜುಗಳಿವೆ. ಉಳಿದಂತೆ ಎರಡು ಜಿಲ್ಲೆಯಲ್ಲಿ ಒಟ್ಟು 124 ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿವೆ.