
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರು ಜಿಲ್ಲೆಯ 2 ಶೈಕ್ಷಣಿಕ ಜಿಲ್ಲೆಗಳ ಪೈಕಿ ತುಮಕೂರಿನ 30 ಕೇಂದ್ರಗಳು ಹಾಗೂ ಮಧುಗಿರಿಯ 11 ಕೇಂದ್ರಗಳು ಸೇರಿ ಒಟ್ಟು 41 ಪರೀಕ್ಷಾ ಕೇಂದ್ರಗಳಲ್ಲಿ ಖಾಸಗಿಯಾಗಿ 285 ವಿದ್ಯಾರ್ಥಿಗಳು, 1606 ಪುನರಾವರ್ತಿತ ವಿದ್ಯಾರ್ಥಿಗಳು, ಹೊಸದಾಗಿ 22851 ವಿದ್ಯಾರ್ಥಿಗಳು, ಹಾಗೂ 11 ಫಲಿತಾಂಶ ಸುಧಾರಣೆ ವಿದ್ಯಾರ್ಥಿಗಳು ಸೇರಿ ಒಟ್ಟು 24753 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವಾದ ಇಂದು ಕನ್ನಡ ಹಾಗೂ ಅರೆಬಿಕ್ ವಿಷಯದ ಪರೀಕ್ಷೆ ನಡೆಯಿತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ನಕಲು, ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಜೂನಿಯರ್ ಕಾಲೇಜು, ಎಂಪ್ರೆಸ್ ಕಾಲೇಜು, ಸಿದ್ದಗಂಗಾ ಮಹಿಳಾ ಪದವಿ ಪೂರ್ವ ಕಾಲೇಜು, ಕಾಳಿದಾಸ ಪ.ಪೂ. ಕಾಲೇಜು ಸೇರಿದಂತೆ ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಪೋಷಕರೊಂದಿಗೆ ಬೆಳಿಗ್ಗೆ 8 ಗಂಟೆಗೆ ಆಗಮಿಸಿ ತಮ್ಮ ನೋಂದಣಿ ಸಂಖ್ಯೆ ಇರುವ ಕೊಠಡಿಗಳ ನಂಬರ್‌ಗಾಗಿ ಮುಗಿ ಬಿದ್ದಿದ್ದ ದೃಶ್ಯಗಳು ಕಂಡು ಬಂದವು.ಡಿಸಿ ಪರಿಶೀಲನೆ...
ಪ್ರಶ್ನೆ ಪತ್ರಿಕೆಗಳನ್ನು ಸೂಕ್ತ ಭದ್ರತೆಯಲ್ಲಿ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರಗಳಿಗೆ ಸಿಸಿ ಟಿವಿ ಅಳವಡಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ವಿದ್ಯುತ್ ಕಡಿತವಾಗದಂತೆ ಬೆಸ್ಕಾಂಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ವಾರ್ ರೂಂಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ 41 ಪರೀಕ್ಷಾ ಕೇಂದ್ರಗಳ ವೆಬ್ ಕ್ಯಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ಚಟುವಟಿಕೆಗಳನ್ನು ವೀಕ್ಷಣೆ ಮಾಡಲಾಗುತ್ತಿದೆ.
ದ್ವಿತೀಯ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಊರುಗಳಿಂದ ಸಕಾಲಕ್ಕೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಕೆಎಸ್ಸ ರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ.ಪರೀಕ್ಷಾ ಕೇಂದ್ರದ 200 ಮೀಟರ್ ಪರಿದಿಯಲ್ಲಿ ಯಾವುದೇ ಜೆರಾಕ್ಸ್ ಅಂಗಡಿಗಳು ಅಥವಾ ಸೈಬರ್ ಕೆಫೆಗಳು ಕಾರ್ಯನಿರ್ವಹಿಸದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು, ಕಾನೂನು ಬಾಹಿರ ಚಟುವಟಿಕೆಗಳು ನಡೆಯದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿನ್ನೆ ಕನ್ನಡ ಮತ್ತು ಅರೇಬಿಕ್ ಪರೀಕ್ಷೆ ನಡೆದಿದ್ದರೆ, ಮಾರ್ಚ್ 2 ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ ಪರೀಕ್ಷೆ, ಮಾ. 3 ರಂದು ಇಂಗ್ಲೀಷ್ ಪರೀಕ್ಷೆ, ಮಾ. 4 ರಂದು ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಪರೀಕ್ಷೆ, ಮಾ. 5 ರಂದು ಇತಿಹಾಸ ವಿಷಯದ ಪರೀಕ್ಷೆ, ಮಾ. 6 ರಂದು ಭೌತಶಾಸ್ತ್ರ ವಿಷಯದ ಪರೀಕ್ಷೆ, ಮಾ. 7 ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ ವಿಷಯಗಳ ಪರೀಕ್ಷೆ, ಮಾ. 9 ರಂದು ರಾಸಾಯನಶಾಸ್ತ್ರ, ಶಿಕ್ಷಣ ಶಾಸ್ತ್ರ, ಮೂಲಗಣಿತ ವಿಷಯಗಳ ಪರೀಕ್ಷೆ, ಮಾ. 10 ರಂದು ಅರ್ಥಶಾಸ್ತ್ರ ವಿಷಯ ಪರೀಕ್ಷೆ, ಮಾ. 11 ರಂದು ತರ್ಕ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ ವಿಷಯಗಳ ಪರೀಕ್ಷೆ, ಮಾ. 12 ಹಿಂದಿ ಪರೀಕ್ಷೆ, ಮಾ. 13 ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ, ಮಾ. 14 ಗಣಿತ, ಲೆಕ್ಕಶಾಸ್ತ್ರ ವಿಷಯಗಳ ಪರೀಕ್ಷೆ, ಮಾ. 16 ಸಮಾಜ ಶಾಸ್ತ್ರ, ಜೀವಶಾಸ್ತ್ರ, ಗಣಕವಿಜ್ಞಾನ ವಿಷಯಗಳ ಪರೀಕ್ಷೆ, ಮಾ. 17 ರಂದು ಹಿಂದುಸ್ತಾನಿ ಸಂಗೀತ, ರೀಟೈಲ್ ಆಟೋ ಮೊಬೈಲ್, ಆರೋಗ್ಯ ರಕ್ಷಣೆ ವಿಷಯಗಳ ಪರೀಕ್ಷೆ ನಡೆಯಲಿದೆ.ಪೋಟೋ : ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.