ಬೆಂಗಳೂರು : ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತನ್ನ ಪರಿತ್ಯಕ್ತ ಲಿವ್-ಇನ್ ಸಂಗಾತಿಯ (ಮಗುವಿನ ಜೈವಿಕ ತಂದೆ) ಹೆಸರು ತೆಗೆದುಹಾಕಿ ತನ್ನ ಮತ್ತು ಕುಟುಂಬದ ಹೆಸರು (ಉಪನಾಮ) ಸೇರಿಸಲು ತಾಯಿಯೊಬ್ಬರು ಮಾಡಿರುವ ಮನವಿ ಪುರಸ್ಕರಿಸುವಂತೆ ಬೆಂಗಳೂರಿನ ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಎಂಟು ವರ್ಷದ ಮಗಳ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ತೆಗೆದು, ತನ್ನ ಮತ್ತು ಕುಟುಂಬ ಹೆಸರು ಸೇರಿಸಲು ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳ ಕ್ರಮ ಪ್ರಶ್ನಿಸಿ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಪ್ರಕರಣದಲ್ಲಿ ಮಗುವಿಗೆ ತಾಯಿ ಏಕೈಕ ಆರೈಕೆದಾರ ಮತ್ತು ನೈಸರ್ಗಿಕ ಪೋಷಕರಾಗಿದ್ದಾರೆ. ವಾಸ್ತವವಾಗಿ, ತಾಯಿಯ ಕುಟುಂಬದ ಉಪನಾಮವನ್ನು ಮಗುವಿನ ಹೆಸರಿನೊಂದಿಗೆ ಸೇರಿಸಲು ಯಾವುದೇ ಸಾಂವಿಧಾನಿಕ ಅಡಚಣೆಯಿಲ್ಲ. ತಾಯಿಯ ಗುರುತು (ಐಡೆಂಟಿಟಿ) ಸೇರಿಸುವುದರಿಂದ ತಂದೆಯ ಸ್ಥಾನಮಾನ ಕಡಿಮೆ ಆಗುವುದಿಲ್ಲ. ಇದು ಸಮಾನತೆಯ ಸಂಕೇತ. ಅಪ್ರಾಪ್ತ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ ಹೆಸರು ಅಳಿಸಿ ಹಾಕುವುದರಿಂದ ಕಾನೂನು ಬದ್ಧ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಮಕ್ಕಳು ತಂದೆಯ ಉಪನಾಮವನ್ನೇ ಹೊಂದಿರಬೇಕು ಎಂಬ ಕಲ್ಪನೆ ಸಾಂವಿಧಾನಿಕ ಆದೇಶವಲ್ಲ. ಆದರೆ, ಅದೊಂದು ಸಾಮಾಜಿಕ ಸಂಪ್ರದಾಯ. ಪೋಷಕತ್ವದ ಗುರುತಿಗೆ ಸಂಬಂಧಿಸಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸ್ಥಾನಮಾನ ಇರಲಿದೆ. ಉಪನಾಮದಲ್ಲಿನ ಬದಲಾವಣೆಯು ಮಗುವಿನ ಗುರುತು, ಘನತೆ, ಯೋಗಕ್ಷೇಮದ ಹಿತಾಸಕ್ತಿ ಕಾಪಾಡುತ್ತದೆ. ಅದರಂತೆ ಮಗುವಿನ ತಾಯಿಯ ಮನವಿ ಪರಿಗಣಿಸಬೇಕು ಎಂದು ಜನನ ಮತ್ತು ಮರಣ ನೋಂದಣಿ ಇಲಾಖೆಗೆ ಸೂಚಿಸಿದೆ.
ಮಗುವಿನ ಉಪನಾಮ ಬದಲಿಸುವುದರಿಂದ ಅನುವಂಶಿಕತೆ, ಉತ್ತರಾಧಿಕಾರ ಮತ್ತು ಜೀವನ ನಿರ್ವಹಣೆಯ ಹಕ್ಕುಗಳು ಸೇರಿ ಪ್ರಸ್ತುತ ಜಾರಿಯಲ್ಲಿರುವ ಕಾನೂನುಗಳ ಅಡಿ ಮಗುವಿಗೆ ಜೈವಿಕ ತಂದೆಯಿಂದ ಪಡೆಯಬಹುದಾದ ಯಾವುದೇ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.
ಅರ್ಜಿದಾರ ಮಹಿಳೆ ನೇಪಾಳ ಮೂಲದ ಪುರುಷನೊಂದಿಗೆ ಲಿವ್-ಇನ್ ಸಂಬಂಧ ಹೊಂದಿದ್ದ ಪರಿಣಾಮ 2017ರಲ್ಲಿ ಮಗು ಜನಿಸಿತು. ಮಗು ಜನನದ ಬಳಿಕ ತಂದೆ ಮಹಿಳೆ ಮತ್ತು ಮಗುವಿನಿಂದ ದೂರ ನೆಲೆಸಿದ್ದರು. ಮಗುವಿನ ಲಾಲನೆ ಮತ್ತು ಪಾಲನೆಗೆ ತಂದೆಯಿಂದ ಯಾವುದೇ ನೆರವು ಇರಲಿಲ್ಲ. ತನ್ನ ತಾಯಿ ಕುಟುಂಬದ ನೆರವಿನೊಂದಿಗೆ ಮಗು ಬೆಳೆಯುತ್ತಿತ್ತು.
ಈ ನಡುವೆ ತಾಯಿ ಮಗುವಿನ ಜನನ ಮತ್ತು ಮರಣ ನೋಂದಣಿ ಇಲಾಖೆಗೆ ಅರ್ಜಿ ಸಲ್ಲಿಸಿ, ಮಗುವಿನ ಜನನ ಪ್ರಮಾಣ ಪತ್ರದಲ್ಲಿನ ಅದರ ಜೈವಿಕ ತಂದೆ ಹೆಸರು ಅಳಿಸಿಹಾಕಿ, ತನ್ನ ಮತ್ತು ಕಟುಂಬದ ಉಪನಾಮ ಸೇರಿಸಲು ಕೋರಿದ್ದರು. ಅಧಿಕಾರಿಗಳು ಆ ಮನವಿ ತಿರಸ್ಕರಿಸಿದ್ದ ಕಾರಣ ಮಗುವಿನ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.