ಕಾರವಾರ: ಜಿಲ್ಲೆಯಲ್ಲಿ ಏ.24ರಿಂದ ಮೇ 8ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ -2ನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ವಯ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಸೂಚಿಸಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಕುರಿತ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ದ್ವಿತೀಯ ಪಿಯುಸಿ ಪರೀಕ್ಷೆ -2, ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ಸಿದ್ದಾಪುರ, ಶಿರಸಿ, ಮುಂಡಗೋಡ, ಯಲ್ಲಾಪುರ ಮತ್ತು ಹಳಿಯಾಳದ 11 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. 11758 ವಿಷಯವಾರು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ ಎಂದರು.
ಖಜಾನೆಗಳಲ್ಲಿ ಗೌಪ್ಯ ವಸ್ತುಗಳನ್ನು ಠೇವಣಿಸಲು ಮತ್ತು ಕೇಂದ್ರಗಳಿಗೆ ವಿತರಣೆ ಮಾಡುವಂತ ಮಾರ್ಗಾಧಿಕಾರಿಗಳಿಗೆ ವಿತರಿಸಲು ತ್ರಿಸದಸ್ಯ ಸಮಿತಿಯನ್ನು ರಚಿಸಲಾಗಿದ್ದು, ಖಜಾನೆ ಒಳಗೆ ಹೊರಗೆ 24*7 ಸಿಸಿಟಿವಿ ವಿಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ.ಪೂ.ಕಾಲೇಜಿನ ಹಿರಿಯ ಪ್ರಾಂಶುಪಾಲರು ಒಳಗೊಂಡ ಒಟ್ಟು 11 ಮಾರ್ಗಾಧಿಕಾರಿಗಳ ತಂಡ ರಚಸಿದ್ದು, ಮಾರ್ಗಾಧಿಕಾರಿಗಳ ತಂಡದ ವಾಹನಗಳಿಗೆ ಜಿಪಿಎಸ್ ಅಳವಡಿಸುವಂತೆ ಸೂಚಿಸಿದರು.ಸರ್ಕಾರಿ/ ಅನುದಾನಿತ ಪರೀಕ್ಷೆ ಕೇಂದ್ರಗಳಿಗೆ ಆಯಾ ಕಾಲೇಜಿನ ಪ್ರಾಂಶುಪಾಲರನ್ನು ಮುಖ್ಯ ಅಧೀಕ್ಷಕರನಾಗಿ ನಿಯೋಜಿಸಿದ್ದು, ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿಕೊಂಡು ಸುಸ್ಥಿತಿಯಲ್ಲಿಡಲು ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಎಲ್ಲ ಕೇಂದ್ರಗಳ ಸಿಸಿಟಿವಿ ವೆಬ್ ಕಾಸ್ಟಿಂಗ್ ವಿಕ್ಷಣೆಗಾಗಿ ಇಬ್ಬರು ಸದಸ್ಯರ ಸಮಿತಿ ರಚಿಸಲಾಗಿದ್ದು, ಜಿಪಂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಪರೀಕ್ಷಾ ಕೇಂದ್ರದಲ್ಲಿ ಕುಡಿಯುವ ನೀರು, ಶೌಚಾಲಯ ಹಾಗೂ ಇನ್ನಿತರ ಸೌಕರ್ಯಗಳನ್ನು ಸುಸ್ಥಿತಿಯಲ್ಲಿಡಲು ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಸೂಚಿಸಿದ ಅಪರ ಜಿಲ್ಲಾಧಿಕಾರಿಗಳು, ಪರೀಕ್ಷಾ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಪಾಲಿಸಿ. ಪರೀಕ್ಷೆಗಳನ್ನು ನಡೆಸುವಂತೆ ಮತ್ತು ಪ್ರಶ್ನೆ ಪತ್ರಿಕೆಗಳನ್ನು ಕಡ್ಡಾಯವಾಗಿ ಖಜಾನೆಯಲ್ಲಿ ಇರಿಸಿ, 24*7 ಪೋಲೀಸ್ ಬಂದೋಬಸ್ತ್ ಒದಗಿಸುವಂತೆ ಹಾಗೂ ಸಿಸಿಟಿವಿ ಅಡಿಯಲ್ಲಿ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವುದು ಮತ್ತು ಉತ್ತರ ಪತ್ರಿಕೆಗಳನ್ನು ಸ್ವೀಕರಿಸಿ ಬಂಡಲ್ ಮಾಡುವ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚಿಸಿದರು.ಪರೀಕ್ಷಾ ಕೇಂದ್ರಗಳಲ್ಲಿ ಅಧೀಕ್ಷಕರನ್ನೊಳಗೊಂಡಂತೆ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸುವಂತೆ, ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಸಮಯದಲ್ಲಿ ಮುಚ್ಚಿಸಬೇಕು, ಎಲ್ಲಾ ಪರೀಕ್ಷೆ ಕೇಂದ್ರಗಳಿಗೆ ಆರೋಗ್ಯ ಸಹಾಯಕರುಗಳನ್ನು ನಿಯೋಜಿಸಬೇಕು, ಪರೀಕ್ಷೆ ನಡೆಯುವ ದಿನದಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಹೆಸ್ಕಾಂ ಅಧಿಕಾರಿಗಳಿಗೆ ಹಾಗೂ ಬಸ್ ಸಂಚಾರ ವ್ಯವಸ್ಥೆಯಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕ.ರಾ.ರ.ಸಾ.ಸಂಸ್ಥೆಯ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಜಪ್ಪ, ಡಿಡಿಪಿಐ ಲತಾ ನಾಯಕ್, ಜಿಲ್ಲಾ ಖಜಾನಾಧಿಕಾರಿ ಉಮೇಶ್ ಕುರಿ, ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಿದ್ದ ಅಧಿಕಾರಿಗಳು ಹಾಗೂ ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ತಾಲೂಕುಗಳ ತಹಸೀಲ್ದಾರ್ಗಳು ಹಾಜರಿದ್ದರು.