ಜೂನ್‌ 24ರಿಂದ ಜುಲೈ 5ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3

KannadaprabhaNewsNetwork | Published : Jun 19, 2024 1:01 AM

ಸಾರಾಂಶ

ಜೂನ್ 24 ರಿಂದ ಜುಲೈ 5 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಯಲಿದ್ದು, 5 ಪರೀಕ್ಷೆಗೆ ಒಟ್ಟು 3,728 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಸುವ್ಯವಸ್ಥಿತ,ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜೂನ್ 24 ರಿಂದ ಜುಲೈ 5 ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-3 ನಡೆಯಲಿದ್ದು, 5 ಪರೀಕ್ಷೆಗೆ ಒಟ್ಟು 3,728 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅಧಿಕಾರಿಗಳು ಎಲ್ಲ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಸುವ್ಯವಸ್ಥಿತ,ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುಶೀಲಾ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-3ರ ಪೂರ್ವಸಿದ್ಧತಾ ಸಭೆ ನಡೆಸಿದ ಅವರು, ಈ ಪರೀಕ್ಷಾ ಕೇಂದ್ರಗಳಿಗೆ ಒಟ್ಟು 98 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ. ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜು, ಸಬಾ ಪಿಯು ಕಾಲೇಜು, ಶಹಾಪುರದ ಸರಕಾರಿ ಬಾಲಕರ ಪಿಯು ಕಾಲೇಜು, ಸುರಪುರದ ಸರಕಾರಿ ಪಿಯು ಕಾಲೇಜು, ಗುರುಮಠಕಲ್ ಬಾಲಕರ ಪಿಯು ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿ ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು ಮತ್ತು ಸಮೂಹ ಮಾಧ್ಯಮ / ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧ. ಒಂದು ವೇಳೆ ಈ ರೀತಿ ಕಂಡುಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಇರಲಿದ್ದು, ಸುತ್ತಲಿನ ಝಿರಾಕ್ಸ್, ಕಂಪ್ಯೂಟರ್ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಪೋನ್ ಬಳಕೆ ನಿಷೇಧಿಸಲಾಗಿದೆ ಎಂದ ಅವರು, ಪರೀಕ್ಷಾ ಕೇಂದ್ರ ಸುರಕ್ಷತೆಗೆ ಪೊಲೀಸರು ಮುಂಚಿತವಾಗಿಯೇ ತೆರಳಬೇಕು ಎಂದು ಸೂಚಿಸಿದರು.

ಡಿಡಿಪಿಯು ಚೆನ್ನಬಸಪ್ಪ ಕುಳಗೇರಿ, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ ಸೇರಿ ಪರೀಕ್ಷೆಗೆ ಜವಾಬ್ದಾರಿ ವಹಿಸಿದ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this article