ಮಾ.೧ ರಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork | Published : Feb 28, 2024 2:30 AM

ಸಾರಾಂಶ

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಆಸನ ಹಾಗೂ ಪರೀಕ್ಷೆ ಬರೆಯಲು ಡೆಸ್ಕ್ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಶೌಚಾಲಯದ ಸೇರಿದಂತೆ ಮೂಲಭೂತ ಸೌಕರ್ಯದ ವ್ಯವಸ್ಥೆಯಾಗಬೇಕು. ಕೊಠಡಿಗಳಲ್ಲಿ ಗಡಿಯಾರ, ಸಿಸಿ ಟಿವಿ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯಜಿಲ್ಲೆಯಲ್ಲಿ ಮಾ.೧ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಆರಂಭವಾಗಲಿದ್ದು, ಯಾವುದೇ ಲೋಪದೋಷ ಆಗದಂತೆ ಪರೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಸುಗಮ ಸಂಚಾಲನೆಗಾಗಿ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು. ಜಿಲ್ಲೆಯ ೨೬ ಪರೀಕ್ಷಾ ಕೇಂದ್ರಗಳಲ್ಲಿ ೧೩,೯೯೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ, ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರ ಇರುವುದಿಲ್ಲ. ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಆಸನ ಹಾಗೂ ಪರೀಕ್ಷೆ ಬರೆಯಲು ಡೆಸ್ಕ್ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು, ಶೌಚಾಲಯದ ಸೇರಿದಂತೆ ಮೂಲಭೂತ ಸೌಕರ್ಯದ ವ್ಯವಸ್ಥೆಯಾಗಬೇಕು. ಕೊಠಡಿಗಳಲ್ಲಿ ಗಡಿಯಾರ, ಸಿಸಿ ಟಿವಿ ವ್ಯವಸ್ಥೆ ಕಡ್ಡಾಯವಾಗಿ ಇರಬೇಕು. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತಾಗಬೇಕು ಎಂದರು.

ಪರೀಕ್ಷೆ ನಡೆಯುವ ದಿನಗಳಂದು ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ. ಸುತ್ತಳತೆಯಲ್ಲಿ ೧೪೪ ನೇ ಕಲಂ ಜಾರಿಗೊಳಿಸಲು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ ಜೆರಾಕ್ಸ್ ಅಂಗಡಿ ಮುಚ್ಚಿಸುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರಂತೆ ೨೬ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಕೊಠಡಿ ಮೇಲ್ವಿಚಾರಕರು, ಇತರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೊಬೈಲ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಸೂಚಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಜಿಲ್ಲಾ ಖಜಾನೆಯಿಂದ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ವಿತರಿಸಲು ಪ್ರಶ್ನೆ ಪತ್ರಿಕೆ ಮಾರ್ಗಾಧಿಕಾರಿ ತಂಡಗಳಿಗೆ ಅಗತ್ಯವಿರುವ ವಾಹನಗಳ ಸೌಕರ್ಯ ಒದಗಿಸಿ ಎಂದರು.

ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದರಿಂದ ಪರೀಕ್ಷಾ ಸಮಯದಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಪರೀಕ್ಷಾ ದಿನಗಳಂದು ಪ್ರಶ್ನೆ ಪತ್ರಿಕೆ ವಿತರಕರ ತಂಡದ ಬೆಂಗಾವಲಾಗಿ ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು ಎಂದರು.

ಸಭೆಯಲ್ಲಿ ಜಿಪಂ ಸಿಇಒ ಶೇಕ್ ತನ್ವೀರ್ ಆಸಿಫ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಚೆಲುವಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಶಿವರಾಮೇಗೌಡ, ಡಯಟ್ ಪ್ರಾಂಶುಪಾಲರು ಪುರುಷೋತ್ತಮ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಆಯುಷ್ ವೈದ್ಯಾಧಿಕಾರಿ ಡಾ. ಸೀತಾಲಕ್ಷ್ಮಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Share this article