ದ್ವಿತೀಯ ಪಿಯುಸಿ: ಮಂಡ್ಯಕ್ಕೆ ಶೇ.೭೩.೨೭ ಫಲಿತಾಂಶ: ರಾಜ್ಯಕ್ಕೆ ೧೪ನೇ ಸ್ಥಾನ ಪಡೆದ ಸಕ್ಕರೆ ಜಿಲ್ಲೆ

KannadaprabhaNewsNetwork |  
Published : Apr 09, 2025, 12:32 AM IST

ಸಾರಾಂಶ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಪಟ್ಟಣ ಪ್ರದೇಶದಲ್ಲಿ ೭,೩೮೦ ವಿದ್ಯಾರ್ಥಿಗಳಲ್ಲಿ ೫,೩೭೪ ಶೇ.೭೩.೮ ರಷ್ಟು, ಗ್ರಾಮೀಣ ಪ್ರದೇಶದ ೫,೩೮೧ ವಿದ್ಯಾರ್ಥಿಗಳ ಪೈಕಿ ೩,೯೭೭ ಮಂದಿ ಶೇ.೭೩.೯೧ ರಷ್ಟು ಫಲಿತಾಂಶ ಬಂದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ.೭೩.೨೭ರಷ್ಟು ಫಲಿತಾಂಶದೊಂದಿಗೆ ಮಂಡ್ಯ ಜಿಲ್ಲೆ ೧೪ನೇ ಸ್ಥಾನಕ್ಕೇರಿದೆ. ಕಳೆದ ಬಾರಿ ಶೇ.೮೦.೫೬ರಷ್ಟು ಫಲಿತಾಂಶದೊಂದಿಗೆ ೨೪ನೇ ಸ್ಥಾನಕ್ಕೆ ಕುಸಿದಿತ್ತು. ಈ ಸಾಲಿನಲ್ಲಿ ಶೇಕಡಾವಾರು ಫಲಿತಾಂಶದಲ್ಲಿ ೭.೨೯ರಷ್ಟು ಕುಸಿತ ಕಂಡಿದ್ದರೂ ಸ್ಥಾನಪಲ್ಲಟಗೊಂಡಿದೆ. ೨೦೨೩ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆ ಶೇ.೭೭.೪೭ರಷ್ಟು ಫಲಿತಾಂಶದೊಂದಿಗೆ ೨೦ನೇ ಸ್ಥಾನ ಪಡೆದುಕೊಂಡಿತ್ತು. ಕಳೆದ ಹತ್ತು ವರ್ಷಗಳಲ್ಲಿ ಮಂಡ್ಯ ಜಿಲ್ಲೆ ಇದೇ ಮೊದಲ ಬಾರಿಗೆ ೧೪ನೇ ಸ್ಥಾನ ಪಡೆದುಕೊಂಡಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ ೧೨,೭೬೩ ವಿದ್ಯಾರ್ಥಿಗಳಲ್ಲಿ ೯,೩೫೧ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.೭೩.೨೭ ಫಲಿತಾಂಶ ದೊರಕಿದೆ. ಕಲಾವಿಭಾಗದಲ್ಲಿ ೨,೧೭೩ ವಿದ್ಯಾರ್ಥಿಗಳಲ್ಲಿ ೧,೦೬೫ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೪೯.೦೧ ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗ ೪,೧೪೦ ವಿದ್ಯಾರ್ಥಿಗಳಲ್ಲಿ ೨,೮೦೬ ಮಂದಿ ಉತ್ತೀರ್ಣರಾಗಿ ಶೇ.೬೭.೭೮ ರಷ್ಟು ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ ೬,೪೫೦ ವಿದ್ಯಾರ್ಥಿಗಳಲ್ಲಿ ೫,೪೮೦ ಮಂದಿ ಶೇ.೮೪.೯೬ ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಬಂದಿದೆ. ಆದರೆ, ಕಲಾ ವಿಭಾಗದಲ್ಲಿ ಫಲಿತಾಂಶ ಕುಸಿತ ಕಂಡಿದೆ.

ಗ್ರಾಮೀಣರ ಮೇಲುಗೈ:

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, ಪಟ್ಟಣ ಪ್ರದೇಶದಲ್ಲಿ ೭,೩೮೦ ವಿದ್ಯಾರ್ಥಿಗಳಲ್ಲಿ ೫,೩೭೪ ಶೇ.೭೩.೮ ರಷ್ಟು, ಗ್ರಾಮೀಣ ಪ್ರದೇಶದ ೫,೩೮೧ ವಿದ್ಯಾರ್ಥಿಗಳ ಪೈಕಿ ೩,೯೭೭ ಮಂದಿ ಶೇ.೭೩.೯೧ ರಷ್ಟು ಫಲಿತಾಂಶ ಬಂದಿದೆ.

ಅತಿ ಹೆಚ್ಚು ಅಂಕ ಗಳಿಸಿದವರು:

ಕಲಾ ವಿಭಾಗದಲ್ಲಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಶ್ರೀ ಗಂಗಾಧರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸೌಮ್ಯ(೫೭೩) ಅಂಕ, ವಾಣಿಜ್ಯ ವಿಭಾಗದಲ್ಲಿ ಪಾಂಡವಪುರ ತಾಲೂಕಿನ ಕೆ.ಬೆಟ್ಟಹಳ್ಳಿಯ ಶ್ರೀ ವಿನಾಯಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್.ಕೆ.ಮೊನಿಕ (೫೮೬) ಅಂಕ, ವಿಜ್ಞಾನ ವಿಭಾಗದಲ್ಲಿ ಮಂಡ್ಯ ಮಾಂಡವ್ಯ ಎಕ್ಸೆಲೆನ್ಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎಸ್.ಡಿ.ಹಿಮಾನಿ ೫೯೨ ಅಂಕ ಪಡೆದು ಮೂರು ವಿಭಾಗಗಳಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಉಳಿದಂತೆ ಕಲಾವಿಭಾಗದಲ್ಲಿ ಮದ್ದೂರು ತಾಲೂಕು ಕೊಪ್ಪ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿ.ಹಂಸವೇಣಿ (೫೬೯) ಅಂಕ ದ್ವಿತೀಯ, ಮಂಡ್ಯ ಕಲ್ಲುಕಟ್ಟಡ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಶು ಕುರ್ವ (೫೬೭) , ಮಳವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಲಕ್ಷ್ಮೀ(೫೬೭) ಅವರು ಜಂಟಿಯಾಗಿ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ನಾಗಮಂಗಲ ತಾಲೂಕು ಭಕ್ತನಾಥನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎ.ಮನಿಷ್ ಗೌಡ (೫೮೫) ದ್ವಿತೀಯ, ಮಂಡ್ಯ ಕೊಮ್ಮೇರಹಳ್ಳಿ ವಿಶ್ವಮಾನವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎನ್.ಪ್ರಶಾಂತ್ (೫೮೩) ಜಿಲ್ಲೆಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಶ್ರೀರಂಗಪಟ್ಟಣ ಕೆಂಬ್ರಿಡ್ಜ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆರ್.ಮೃದುಲ (೫೯೧) ಅಂಕ, ಆರಾಧನ ಪದವಿ ಪೂರ್ವ ಕಾಲೇಜಿನ ಜೆ.ಎಸ್.ಸಂಜನಗೌಡ(೫೯೧) ಅಂಕ ಪಡೆದು ದ್ವಿತೀಯ ಹಾಗೂ ಕೆಂಬ್ರಿಡ್ಜ್ ಪದವಿ ಪೂರ್ವ ಕಾಲೇಜಿನ ಅಭಿಗ್ನಾ ವೈ. ಪಟೇಲ್ ೫೯೦ ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.

-------------

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಖುಷಿ ತಂದಿದೆ. ಟಾಪ್ ಟೆನ್ ಜಿಲ್ಲೆಗಳೊಳಗೆ ಮಂಡ್ಯಜಿಲ್ಲೆ ಬರಬಹುದೆಂದು ನಿರೀಕ್ಷಿಸಿದ್ದೆವು. ಫಲಿತಾಂಶ ಹೆಚ್ಚಿಸಲು ಅಷ್ಟೇ ಪರಿಶ್ರಮವನ್ನೂ ಹಾಕಿದ್ದೆವು. ಆದರೆ, ೧೪ನೇ ಸ್ಥಾನ ಬಂದಿದೆ. ಕಳೆದ ವರ್ಷಕ್ಕಿಂತ ತೃಪ್ತಿದಾಯಕವಾದ ಫಲಿತಾಂಶವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಉತ್ತಮ ವಾತಾವರಣವಿದೆ. ಈ ಬಾರಿ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶಬಂದಿದೆ. ಆದರೆ, ಕಲಾ ವಿಭಾಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಫಲಿತಾಂಶ ಸ್ವಲ್ಪ ಇಳಿಮುಖವಾಗಿದೆ. ಉಪನ್ಯಾಸಕರ ಕೊರತೆ ನಡುವೆಯೂ ಉತ್ತಮ ಫಲಿತಾಂಶ ತಂದಿರುವ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು, ಎಲ್ಲಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಚೆಲುವಯ್ಯ, ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಮಂಡ್ಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ