ಡಿ.25-28ವರೆಗೆ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ

KannadaprabhaNewsNetwork |  
Published : Oct 28, 2025, 12:18 AM IST
Prashanth Ayurvedic

ಸಾರಾಂಶ

ಕಜೆ ಆಯುರ್ವೇದಿಕ್‌ ಚಾರಿಟೇಬಲ್‌ ಫೌಂಡೇಶನ್‌, ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನಿಂದ ಆಯುಷ್‌ ಇಲಾಖೆ ಸಹಯೋಗದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಡಿ.25ರಿಂದ 28ರವರೆಗೆ ಅರಮನೆ ಮೈದಾನದಲ್ಲಿ (ಗೇ.ನಂ.6) ನಡೆಯಲಿದೆ.

 ಬೆಂಗಳೂರು :  ಕಜೆ ಆಯುರ್ವೇದಿಕ್‌ ಚಾರಿಟೇಬಲ್‌ ಫೌಂಡೇಶನ್‌, ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನಿಂದ ಆಯುಷ್‌ ಇಲಾಖೆ ಸಹಯೋಗದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಡಿ.25ರಿಂದ 28ರವರೆಗೆ ಅರಮನೆ ಮೈದಾನದಲ್ಲಿ (ಗೇ.ನಂ.6) ನಡೆಯಲಿದೆ.

ಸೋಮವಾರ ಫೌಂಡೇಷನ್‌ನ ಸಂಸ್ಥಾಪಕ ಡಾ.ಗಿರಿಧರ ಕಜೆ ಅವರು ಸಮ್ಮೇಳನದ ವೆಬ್‌ಸೈಟ್‌ www.ayurvedaworldsummit.com ಮತ್ತು ಕೈಪಿಡಿ ಬಿಡುಗಡೆ ಮಾಡಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

2003ರಲ್ಲಿ ಮೊದಲ ಸಮ್ಮೇಳನ

ಈ ಹಿಂದೆ 2003ರಲ್ಲಿ ಮೊದಲ ಸಮ್ಮೇಳನ ನಡೆದಿತ್ತು. 23 ವರ್ಷದ ಬಳಿಕ ನಡೆಯುತ್ತಿರುವ ದ್ವಿತೀಯ ಸಮ್ಮೇಳನದಲ್ಲಿ ದೇಶ-ವಿದೇಶಗಳಿಂದ ಸುಮಾರು ಆರು ಸಾವಿರಕ್ಕೂ ಅಧಿಕ ಆಯುರ್ವೇದ ವೈದ್ಯರು, ಉಪನ್ಯಾಸಕರು, ಆಯುರ್ವೇದ ತಜ್ಞರು, ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. ಸುಮಾರು ಆರು ಲಕ್ಷಕ್ಕೂ ಅಧಿಕ ಜನ ಭೇಟಿ ನೀಡುವ ನಿರೀಕ್ಷೆಯಿದೆ. ಗೋಷ್ಠಿಗಳು, ಸಂವಾದ, ತಾಂತ್ರಿಕ ತರಬೇತಿ ಕಾರ್ಯಾಗಾರ, ಸಾಂಸ್ಕೃತಿಕ ಕಾರ್ಯಕ್ರಮಗಳು ಏರ್ಪಾಡಾಗಿವೆ ಎಂದರು.

ಆಯುರ್ವೇದದ ಇತಿಹಾಸದಲ್ಲಿ ನಡೆಯುವ ಅತಿದೊಡ್ಡ ಕಾರ್ಯಕ್ರಮ ಇದಾಗಲಿದೆ. ಜಪಾನ್‌, ಅಮೆರಿಕ, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸೇರಿ ವಿವಿಧ ದೇಶಗಳಿಂದ 50ಕ್ಕೂ ಹೆಚ್ಚು ಉಪನ್ಯಾಸಕರು ವಿವಿಧ ರೋಗಗಳ ಚಿಕಿತ್ಸೆ ಅನುಕೂಲತೆ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ಸಾಮಾನ್ಯ ಸಮ್ಮೇಳನಕ್ಕಿಂತ ಭಿನ್ನವಾಗಿ ಗಣ್ಯರು, ಸಾಧಕರು, ಸಾಹಿತಿಗಳು ಆಯುರ್ವೇದದ ಆಯ್ಕೆ ಬಗ್ಗೆ ತಿಳಿಸಿಕೊಡಲಿದ್ದಾರೆ. 20ಕ್ಕೂ ಹೆಚ್ಚು ಸಂತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಧನ್ವಂತರಿ ಮಹಾಯಜ್ಞ

ಸಮ್ಮೇಳನದ 4 ದಿನವೂ ಧನ್ವಂತರಿ ಮಹಾಯಜ್ಞ, ಆಯುರ್ವೇದ ರಥೋತ್ಸವ ಜರುಗಲಿದ್ದು, ದೇಸಿ ಗೋಪೂಜೆ, ಪ್ರದರ್ಶನ ನಡೆಯಲಿದೆ. 11 ವೈಜ್ಞಾನಿಕ ವಿಚಾರಗಳ ಬಗ್ಗೆ ಮಂಡನೆ, 6 ತಾಂತ್ರಿಕ ಚರ್ಚೆ ನಡೆಯಲಿದ್ದು, 10 ಆಯುರ್ವೇದ ಅನುಭವ ಕೇಂದ್ರಗಳು 36 ಪ್ರಾಯೋಜಕತ್ವ ಸಭೆಗಳು, ಚಿಕಿತ್ಸಾ ಕೇಂದ್ರಗಳು ಇರಲಿವೆ. ಆಯುರ್ವೇದ ಆಹಾರ ಪ್ರದರ್ಶನವೂ ಏರ್ಪಾಡಾಗಿದೆ. ಜತೆಗೆ ಚಿಕಿತ್ಸಾ ಸಸಿಗಳ ಪ್ರದರ್ಶನ ಹಾಗೂ ಉಚಿತ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು.ಸಮ್ಮೇಳನಕ್ಕೆ 30 ದಿನಗಳ ಮುನ್ನ ಧನ್ವಂತರಿ ಜ್ಯೋತಿ, ಆಯುರ್ವೇದ ರಥಯಾತ್ರೆ ಕೇರಳ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ಏಳು ರಾಜ್ಯಗಳಲ್ಲಿ ಸಂಚರಿಸಲಿದೆ. ಜತೆಗೆ ಈ ರಥಯಾತ್ರೆ 137 ಆಯುರ್ವೇದ ಕಾಲೇಜುಗಳನ್ನು ತಲುಪಲಿದೆ. ಈ ಜ್ಯೋತಿಯನ್ನು ಸಮ್ಮೇಳನದಲ್ಲಿ ಪ್ರತಿಷ್ಠಾಪಿಸಿ ಉದ್ಘಾಟನಾ ಜ್ಯೋತಿಯನ್ನು ಇದರಿಂದ ಬೆಳಗಿಸಲಾಗುವುದು ಎಂದು ತಿಳಿಸಿದರು.

ಮೊದಲ ದಿನ ಸಂಜೆ ಆಳ್ವಾಸ್‌ನ 350 ಕಲಾವಿದರಿಂದ ಪ್ರದರ್ಶನ, 2ನೇ ದಿನ ತೆಂಕು, ಬಡಗುತಿಟ್ಟಿನ ಕಲಾವಿದರಿಂದ ಪ್ರದರ್ಶನ ಹಾಗೂ ಆಯುರ್ವೇದ ಕುರಿತ ಲೇಸರ್‌ ಶೋ, 3ನೇ ದಿನ ಪ್ರವೀಣ್ ಗೋಡ್ಕಿಂಡಿ ಅವರ ವಾದನ ಹಾಗೂ ರಾಘವೇಂದ್ರ ಹೆಗಡೆ ಕಡ್ನೆಮನೆ ಅವರಿಂದ ಸ್ಯಾಂಡ್‌ ಅರ್ಟ್‌, 4ನೇ ದಿನ ತಾಳವೈವಿಧ್ಯ, ಚಂಡೆವಾದನ, ಹುಲಿವೇಷ, 60 ಆಯುರ್ವೇದ ಕಾಲೇಜಿನಿಂದ 20 ಜನರ ತಂಡಗಳು ಮನರಂಜನಾ ಕಾರ್ಯಕ್ರಮ ನಿರಂತರವಾಗಿ ನೀಡಲಿವೆ ಎಂದರು.

₹ 23 ಲಕ್ಷ ಮೌಲ್ಯದ ಬಹುಮಾನ ಇಡಲಾಗಿದ್ದು, ಆಯುರ್ವೇದದ ವಿದ್ಯಾರ್ಥಿಗಳು, ಸಾಧಕರಿಗೆ ನೀಡಲಾಗುತ್ತಿದೆ. 400 ಆಯುರ್ವೇದ ಸ್ಟಾಲ್‌ಗಳು ಮೆಗಾ ಎಕ್ಸ್‌ಪೋದಲ್ಲಿ ಇರಲಿವೆ. ಹೀಗೆ ಸಮಗ್ರವಾಗಿ ಆಯುರ್ವೇದ ಪ್ರಪಂಚವನ್ನು ಸಮ್ಮೇಳನದಲ್ಲಿ ತೆರೆದಿಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಇತರರು ಇದ್ದರು.

PREV
Read more Articles on

Recommended Stories

ನಾಲ್ಕು ಜಿಲ್ಲೆಗಳಲ್ಲಿ ಮಳೆ ಆರ್ಭಟ : ಬೆಳೆ ಹಾನಿ ಆತಂಕದಲ್ಲಿ ರೈತರು
ಯಾವುದೇ ಕ್ರಾಂತಿಗೆ ಕಾಂಗ್ರೆಸ್‌ ಹೈಕಮಾಂಡ್‌ ಬಿಡಲ್ಲ : ಸತೀಶ್‌