- ವಿವಿಪ್ಯಾಟ್ ಯಂತ್ರಗಳ ಮೇಲೆ ಬೆಳಕು ಬೀಳದಿರಲಿ । ಬಿಎಲ್‌ಒಗಳು ಎಲ್ಲ ಸಿದ್ಧತೆ ಪರಿಶೀಲಿಸಬೇಕು
ಕನ್ನಡಪ್ರಭ ವಾರ್ತೆ ದಾವಣಗೆರೆ
ಮುಂಬರುವ ಚುನಾವಣೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಮತದಾನದ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳು ಆಗದಂತೆ ತಾಂತ್ರಿಕ ಮತ್ತು ಆಡಳಿತಾತ್ಮಕ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕ ಕುಮಾರ್ ರಮಣಿಕಾಂತ್ ಸೂಚಿಸಿದರು.ಭಾನುವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ನೊಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ. ತಂಡಗಳಿಗೆ ಮಾರ್ಗದರ್ಶನ ನೀಡಿ ಅವರು ಮಾತನಾಡಿದರು.
ಮತದಾನದ ಹಿಂದಿನ ದಿನವೇ ಬಿಎಲ್‌ಒಗಳು ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಬೇಕು. ಪ್ರತಿಯೊಬ್ಬ ಮತಗಟ್ಟೆ ಅಧಿಕಾರಿಯು ಯಂತ್ರಗಳ ನಿರ್ವಹಣೆ ಬಗ್ಗೆ ಸ್ಪಷ್ಟ ತರಬೇತಿ ಪಡೆದಿರಬೇಕು. ಈಗಾಗಲೇ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ತೃಪ್ತಿ ಇದೆ. ಈ ಸಣ್ಣಪುಟ್ಟ ತಾಂತ್ರಿಕ ಅಂಶಗಳ ಬಗ್ಗೆ ಗಮನಹರಿಸಿದರೆ ಚುನಾವಣೆ ಅತ್ಯಂತ ಯಶಸ್ವಿಯಾಗಿ ಮತ್ತು ಶಾಂತಿಯುತವಾಗಿ ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಸ್ತುತ ಪ್ರತಿಯೊಬ್ಬ ಸಾರ್ವಜನಿಕರ ಬಳಿ ಮೊಬೈಲ್ ಇರುವುದರಿಂದ, ತಪಾಸಣೆ ಮತ್ತು ಅಧಿಕಾರಿಗಳ ಚಲನವಲನಗಳನ್ನು ದಾಖಲಿಸಲಾಗುತ್ತದೆ. ಹೀಗಾಗಿ, ಯಾವುದೇ ಲೋಪಕ್ಕೆ ಅವಕಾಶ ನೀಡಬಾರದು. ಚುನಾವಣಾ ಕಾರ್ಯದಲ್ಲಿ ಸಮಯದ ಶಿಸ್ತು ಅತ್ಯಂತ ಮುಖ್ಯ. ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಇಡೀ ಪ್ರಕ್ರಿಯೆ ಸುಗಮವಾಗಿ ನಡೆಯಲು ಸಾಧ್ಯ , ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪದೋಷ ಆಗದಂತೆ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ವರ್ತಿಸಬೇಕು, ಜಿಲ್ಲಾಡಳಿತ ಚುನಾವಣಾ ಅಧಿಕಾರಿಗಳ ಮತ್ತು ಸಿಬ್ಬಂದಿ ನೆರವಿಗೆ ಸಿದ್ಧವಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾದವ ವಿಠಲ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಮಹಾಂತೇಶ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ನೋಡಲ್ ಅಧಿಕಾರಿಗಳು ಭಾಗವಹಿಸಿದ್ದರು.
(ಬಾಕ್ಸ್)
- - -
ದಾವಣಗೆರೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸಾಮಾನ್ಯ ವೀಕ್ಷಕರಾದ ಕುಮಾರ್ ರಮಣಿಕಾಂತ್ ನೊಡೆಲ್ ಅಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ. ತಂಡಗಳಿಗೆ ಮಾರ್ಗದರ್ಶನ ನೀಡಿದರು.