''ಇಂದಿರಾಗಾಂಧಿ ಅವರಿಗೆ ದೇವಸ್ಥಾನಕ್ಕೆ ಪ್ರವೇಶ ಇರಲಿಲ್ಲ''

KannadaprabhaNewsNetwork |  
Published : Aug 17, 2025, 01:34 AM IST
nayana sabhangana 1 | Kannada Prabha

ಸಾರಾಂಶ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ-240ನೇ ಕಾರ್ಯಕ್ರಮದ ತಿಂಗಳ ಅತಿಥಿ ಪ್ರೊ.ಕಾಳೇಗೌಡ ನಾಗವಾರ ಅವರನ್ನು ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಸನ್ಮಾನಿಸಿದರು.

 ಬೆಂಗಳೂರು :  ಕನ್ನಡ ಸಾಹಿತ್ಯದಲ್ಲಿ ಪಂಪನ ಮಾನವ ಕುಲಂ ತಾನೊಂದೇ ವಲಂ ಸಂದೇಶದಿಂದ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆವರೆಗೂ ಜಾತ್ಯತೀತ ಚಿಂತನೆ ಪ್ರಕರವಾಗಿದೆ ಎಂದು ಹಿರಿಯ ಸಾಹಿತಿ ಪ್ರೊ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.

ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ-240ನೇ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯದಲ್ಲಿ ನಿಜವಾದ ಜಾತ್ಯತೀತ ಚಿಂತನೆಯಿದ್ದು, ಬಸವಣ್ಣನವರಂತ ವ್ಯಕ್ತಿತ್ವ ಭರತ ಖಂಡದ ಇತರೆ ರಾಜ್ಯಗಳಲ್ಲಿ ಇಲ್ಲ. ಅಕ್ಕಮಹಾದೇವಿಯಂತ ಧೈರ್ಯದ ಹೆಣ್ಣುಮಗಳು ಇನ್ನೂ ಹುಟ್ಟಿಲ್ಲ. ಲೋಹಿಯಾ, ಅಂಬೇಡ್ಕರ್‌ ಅವರು ಮಹಿಳಾ ಸ್ವಾತಂತ್ರ್ಯದ ಬಗ್ಗೆ ಓದಿಕೊಂಡಿದ್ದರು. ಕನ್ನಡ ಸಾಹಿತ್ಯದಲ್ಲಿ ವಿಶ್ವಕ್ಕೆ ಬೇಕಾದಷ್ಟು ಜಾತ್ಯತೀತ ಚಿಂತನೆ ಇದೆ ಎಂಬುದನ್ನು ಇತರೆ ರಾಜ್ಯಗಳ ಸಾಹಿತಿಗಳು ನಮ್ಮಲ್ಲಿ ಕೇಳಿದ್ದಾರೆ. ಅದರಲ್ಲೂ ಬಸವಣ್ಣನವರು 900 ವರ್ಷಗಳ ಹಿಂದೆ ಸುಮಾರು 49 ವಚನಗಳಲ್ಲಿ ಮಾದಾರ ಚನ್ನಯ್ಯರ ಮನೆಯ ಮಗ ನಾನು ಎಂದು ಹೇಳಿಕೊಂಡಿರುವುದು ಇಂದಿಗೂ ರೋಮಾಚನಗೊಳಿಸುತ್ತದೆ. ಅಷ್ಟೇ ಅಲ್ಲದೆ, ಅವರು ನಾನು ಶ್ರೇಷ್ಠ ಜಾತಿ ಎಂಬ ಭಾವನೆ ನನಗಿದ್ದರೆ ದೇವರು ಒಲಿಯುವುದಿಲ್ಲ ಎಂಬ ಸಂದೇಶ ನೀಡಿ ಜಾತ್ಯತೀತೆಯನ್ನು ಮೆಟ್ಟಿ ನಿಂತಿದ್ದಾರೆ ಎಂದು ತಿಳಿಸಿದರು.

ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ, ಕುವೆಂಪು ಅವರು ದೇಶ ಕಂಡ ಅಪರೂಪದ ವ್ಯಕ್ತಿಗಳು. ಅವರ ಸಂದೇಶದಿಂದ ಸಮಾಜದಲ್ಲಿ ಇಂದಿಗೂ ವೈಚಾರಿಕತೆ, ವೈಜ್ಞಾನಿಕತೆ ಉಳಿದುಕೊಂಡಿದೆ. ದೇಶದಲ್ಲಿ ಜಾತಿ, ಧರ್ಮ, ಬಣ್ಣದ ಕಾರಣದಿಂದ ಅಸಮಾನತೆ ತಾಂಡವವಾಡುತ್ತಿದೆ. ಇಂದಿಗೂ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಹಲವು ದೇವಾಲಯಗಳಿಗೆ ಸೇರಿಸುವುದಿಲ್ಲ. ಇಂದಿರಾಗಾಂಧಿ ಅವರು ವಿಧವೆಯಾಗಿದ್ದರು ಮತ್ತು ಅವರ ಧರ್ಮ ಬೇರೆಯದೆಂದು ದೇವಸ್ಥಾನಕ್ಕೆ ಪ್ರವೇಶ ನೀಡಿರಲಿಲ್ಲ. ಇದು ಅತ್ಯಂತ ಬೇಸರದ ಸಂಗತಿ. ದೇಶದಲ್ಲಿ ಜಾತೀಯತೆ, ಅಸಮಾನತೆ ಹೋಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ ಮಾತನಾಡಿದರು. ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ.ನಾಗರಾಜಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಎಲ್.ಎನ್.ಮುಕುಂದರಾಜ್, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ, ಜಂಟಿ ನಿರ್ದೇಶಕಿ ಬನಶಂಕರಿ ವ್ಹಿ.ಅಂಗಡಿ ಮತ್ತಿತರರು ಇತರರಿದ್ದರು.

PREV
Read more Articles on

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!